ಮುಂಬೈ: ಮುಂದಿನ ಸೀಸನ್ ನ ಐಪಿಎಲ್ ಕೂಟದ ತಯಾರಿ ಆರಂಭವಾಗಿದೆ. ಡಿಸೆಂಬರ್ ನಲ್ಲಿ ಮಿನಿ ಹರಾಜು ನಡೆಯಲಿದೆ. ಅದಕ್ಕೂ ಮೊದಲು ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲು ಬಯಸುವ ಆಟಗಾರರ ಪಟ್ಟಿಯನ್ನು ನೀಡಬೇಕಾಗಿದೆ. ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ನಾಲ್ಕು ಬಾರಿಯ ವಿನ್ನರ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಿಸಿದೆ.
ಅಚ್ಚರಿ ಎಂಬಂತೆ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡವು ತಮ್ಮ ನೆಚ್ಚಿನ ಕೈರನ್ ಪೊಲಾರ್ಡ್ ಅವರನ್ನು ಮೊದಲ ಬಾರಿಗೆ ಕೈಬಿಟ್ಟಿದೆ. ಆರಂಭದಿಂದಲೂ ಮುಂಬೈ ಪಾಳಯದಲ್ಲೇ ಇದ್ದ ಪೊಲಾರ್ಡ್ ಗೆ ಇದೇ ಮೊದಲ ಬಾರಿಗೆ ಬಾಗಿಲು ಮುಚ್ಚಲಾಗಿದೆ. ಅಲ್ಲದೆ ಫ್ಯಾಬಿಯನ್ ಅಲೆನ್, ಟೈಮಲ್ ಮಿಲ್ಸ್, ಮಯಾಂಕ್ ಮಾರ್ಕಾಂಡೆ ಮತ್ತು ಹೃತಿಕ್ ಶೋಕಿನ್ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮುಂಬೈ ಒಟ್ಟು 10 ಆಟಗಾರರನ್ನು ಉಳಿಸಿಕೊಂಡಿದ್ದು, 5 ಆಟಗಾರರನ್ನು ಬಿಡುಗಡೆ ಮಾಡಿದೆ. ರೋಹಿತ್ ಶರ್ಮಾ, ಡೆವಾಲ್ಡ್ ಬ್ರೇವಿಸ್, ಇಶನ್ ಕಿಶನ್, ಸೂರ್ಯಕುಮಾರ್ ಯಾದವ್, ಡೇನಿಯಲ್ ಸಾಮ್ಸ್, ಟಿಮ್ ಡೇವಿಡ್, ಜೋಫ್ರಾ ಆರ್ಚರ್, ಜಸ್ಪ್ರೀತ್ ಬುಮ್ರಾ, ಟ್ರಿಸ್ಟಾನ್ ಸ್ಟಬ್ಸ್ ಮತ್ತು ತಿಲಕ್ ವರ್ಮಾ ಅವರನ್ನು ಉಳಿಸಿಕೊಳ್ಳಲಾಗಿದೆ.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡವು 9 ಆಟಗಾರರನ್ನು ಉಳಿಸಿಕೊಂಡಿದ್ದು, 4 ಆಟಗಾರರನ್ನು ಬಿಡುಗಡೆ ಮಾಡಿದೆ. ಭಾರಿ ಚರ್ಚೆಗೆ ಕಾರಣವಾಗಿದ್ದ ರವೀಂದ್ರ ಜಡೇಜಾ ಅವರನ್ನು ಉಳಿಸಿಕೊಳ್ಳಲಾಗಿದೆ.
ಮಹೇಂದ್ರ ಸಿಂಗ್ ಧೋನಿ, ರವೀಂದ್ರ ಜಡೇಜಾ, ಮೊಯಿನ್ ಅಲಿ, ಶಿವಂ ದುಬೆ, ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮುಖೇಶ್ ಚೌಧರಿ, ಡ್ವೇನ್ ಪ್ರಿಟೋರಿಯಸ್ ಮತ್ತು ದೀಪಕ್ ಚಾಹಾರ್ ಅವರನ್ನು ಐಪಿಎಲ್ 16 ನೇ ಸೀಸನ್‌ಗೆ ಉಳಿಸಿಕೊಂಡಿದೆ. ಕ್ರಿಸ್ ಜೋರ್ಡಾನ್, ಆಡಮ್ ಮಿಲ್ನೆ, ನಾರಾಯಣ್ ಜಗದೀಶನ್ ಮತ್ತು ಮಿಚೆಲ್ ಸ್ಯಾಂಟ್ನರ್ ಅವರನ್ನು ಬಿಡುಗಡೆ ಮಾಡಲಾಗಿದೆ.