Advertisement

ಕೆಕೆಆರ್‌ ವಿರುದ್ಧ ಮುಂಬೈ ಗೆಲುವಿನಾಟ

06:50 AM May 07, 2018 | Team Udayavani |

ಮುಂಬಯಿ: ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ 4ನೇ ಜಯ ಕಾಣುವ ಮೂಲಕ ಐಪಿಎಲ್‌ ಪ್ಲೇ-ಆಫ್ ರೇಸ್‌ನಲ್ಲಿ ತಾನೂ ಇದ್ದೇನೆ ಎಂದು ಸಾರಿದೆ. 

Advertisement

ರವಿವಾರ “ವಾಂಖೇಡೆ’ಯಲ್ಲಿ ನಡೆದ ಮಹತ್ವದ ಮೇಲಾಟದಲ್ಲಿ ರೋಹಿತ್‌ ಪಡೆ 13 ರನ್ನುಗಳಿಂದ ಕೋಲ್ಕತಾ ನೈಟ್‌ರೈಡರ್ಗೆ ಸೋಲುಣಿಸಿತು.

ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದ ಮುಂಬೈ 4 ವಿಕೆಟಿಗೆ 181 ರನ್‌ ಪೇರಿಸಿ ಸವಾಲೊಡ್ಡಿದರೆ, ಕೆಕೆಆರ್‌ 6 ವಿಕೆಟ್‌ ನಷ್ಟಕ್ಕೆ 168 ರನ್‌ ಮಾಡಿ ಶರಣಾಯಿತು. ಇದು 10 ಪಂದ್ಯಗಳಲ್ಲಿ ಮುಂಬೈ ಕಂಡ 4ನೇ ಗೆಲುವು. ಸದ್ಯ 5ನೇ ಸ್ಥಾನಕ್ಕೆ ಅಂಟಿಕೊಂಡಿದೆ. ಕೆಕೆಆರ್‌ 10 ಪಂದ್ಯಗಳಲ್ಲಿ 5ನೇ ಸೋಲುಂಡಿತು. 10 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಗಿದೆ. ದಿನೇಶ್‌ ಕಾರ್ತಿಕ್‌ ಬಳಗದ ಪಾಲಿಗೆ ಇದೊಂದು ಸಣ್ಣ ಹಿನ್ನಡೆ ಎನ್ನಲಡ್ಡಿಯಿಲ್ಲ. ಅಕಸ್ಮಾತ್‌ ಮುಂಬೈ ಮೇಲೇರುತ್ತ ಬಂದರೆ 3-4ನೇ ಸ್ಥಾನದಲ್ಲಿರುವ ತಂಡಕ್ಕೆ ಗಂಡಾಂತರ ಎದುರಾಗುವ ಸಾಧ್ಯತೆ ಹೆಚ್ಚು.

ಯಾದವ್‌-ಲೆವಿಸ್‌ ದಿಟ್ಟ ಆರಂಭ
ಮುಂಬೈ ಇಂಡಿಯನ್ಸ್‌ನ ಸವಾಲಿನ ಮೊತ್ತಕ್ಕೆ ಕಾರಣವಾದದ್ದು ಸೂರ್ಯಕುಮಾರ್‌ ಯಾದವ್‌-ಎವಿನ್‌ ಲೆವಿಸ್‌ ಜೋಡಿಯ ದಿಟ್ಟ ಆರಂಭ. ಕೆಕೆಆರ್‌ನ ಯಾವುದೇ ರೀತಿಯ ದಾಳಿಗೂ ಬಗ್ಗದ ಇವರು ಮೊದಲ ವಿಕೆಟಿಗೆ 9.2 ಓವರ್‌ಗಳಿಂದ 91 ರನ್‌ ಪೇರಿಸಿ ಉತ್ತಮ ಅಡಿಪಾಯ ನಿರ್ಮಿಸಿದರು. ಇವರನ್ನು ಬೇರ್ಪಡಿಸಲು 7ನೇ ಬೌಲರ್‌ ರೂಪದಲ್ಲಿ ಆ್ಯಂಡ್ರೆ ರಸೆಲ್‌ ಬರಬೇಕಾಯಿತು.

ಆಕ್ರಮಣಕಾರಿ ಮೂಡ್‌ನ‌ಲ್ಲಿದ್ದ ಕೆರಿಬಿಯನ್‌ನ ಅಪಾಯಕಾರಿ ಆಟಗಾರ ಲೆವಿಸ್‌ 28 ಎಸೆತಗಳಿಂದ 43 ರನ್‌ ಬಾರಿಸಿದರು. ಈ ಆಕರ್ಷಕ ಆಟದ ವೇಳೆ 5 ಬೌಂಡರಿ, 2 ಸಿಕ್ಸರ್‌ ಸಿಡಿಯಲ್ಪಟ್ಟಿತು. ಎಂದಿನ ಲಯದಲ್ಲಿ ಸಾಗಿದ ಸೂರ್ಯಕುಮಾರ್‌ ಯಾದವ್‌ ಮುಂಬೈ ಸರದಿಯ ಏಕೈಕ ಅರ್ಧ ಶತಕಕ್ಕೆ ಸಾಕ್ಷಿಯಾದರು. 15ನೇ ಓವರ್‌ ತನಕ ಕ್ರೀಸಿಗೆ ಅಂಟಿಕೊಂಡ ಯಾದವ್‌ ಕೊಡುಗೆ 39 ಎಸೆತಗಳಿಂದ 59 ರನ್‌. 7 ಬೌಂಡರಿ ಹಾಗೂ 2 ಸಿಕ್ಸರ್‌ ಬಾರಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಯಾದವ್‌ ವಿಕೆಟ್‌ ಕೂಡ ರಸೆಲ್‌ ಪಾಲಾಯಿತು.

Advertisement

ಆದರೆ ವನ್‌ಡೌನ್‌ನಲ್ಲಿ ಬ್ಯಾಟ್‌ ಹಿಡಿದು ಬಂದ ರೋಹಿತ್‌ ಶರ್ಮ ಕ್ರೀಸ್‌ ಆಕ್ರಮಿಸಿಕೊಳ್ಳಲು ವಿಫ‌ಲರಾದರು. ಎಸೆತಕ್ಕೊಂದರಂತೆ 11 ರನ್‌ (1 ಬೌಂಡರಿ) ಮಾಡಿ ಸುನೀಲ್‌ ನಾರಾಯಣ್‌ಗೆ ವಿಕೆಟ್‌ ಒಪ್ಪಿಸಿದರು.

ಪಾಂಡ್ಯ ಸೋದರರಲ್ಲಿ ಮಿಂಚಿದವರು ಹಾರ್ದಿಕ್‌ ಮಾತ್ರ. 20 ಎಸೆತ ಎದುರಿಸಿದ ಅವರು 35 ರನ್‌ ಮಾಡಿ ಅಜೇಯರಾಗಿ ಉಳಿದರು. 4 ಬೌಂಡರಿ, ಒಂದು ಸಿಕ್ಸರ್‌ ಹಾರ್ದಿಕ್‌ ಪಾಂಡ್ಯ ಬ್ಯಾಟಿನಿಂದ ಸಿಡಿಯಿತು. ಕೃಣಾಲ್‌ ಪಾಂಡ್ಯ ಬಿರುಸಿನಿಂದಲೇ ಆಟ ಆರಂಭಿಸಿದರೂ ಇದನ್ನು ಮುಂದುವರಿಸಿಕೊಂಡು ಹೋಗಲು ವಿಫ‌ಲರಾದರು. ಕೃಣಾಲ್‌ ಗಳಿಕೆ 11 ಎಸೆತಗಳಿಂದ 14 ರನ್‌ (1 ಬೌಂಡರಿ, 1 ಸಿಕ್ಸರ್‌).

ಜೀನಪಾಲ್‌ ಡ್ಯುಮಿನಿ 13 ರನ್‌ ಮಾಡಿ ಔಟಾಗದೆ ಉಳಿದರು (11 ಎಸೆತ, 1 ಸಿಕ್ಸರ್‌). ಡೆತ್‌ ಓವರ್‌ ವೇಳೆ ಕ್ರೀಸಿನಲ್ಲಿದ್ದ ಹಾರ್ದಿಕ್‌-ಡ್ಯುಮಿನಿ ಕೊನೆಯ 3.1 ಓವರ್‌ಗಳಲ್ಲಿ 30 ರನ್‌ ಒಟ್ಟುಗೂಡಿಸಿದರು.

ರಸೆಲ್‌ ಹೊರತುಪಡಿಸಿ ವಿಕೆಟ್‌ ಕೀಳಲು ಯಶಸ್ವಿಯಾದ ಕೆಕೆಆರ್‌ನ ಮತ್ತೂಬ್ಬ ಬೌಲರ್‌ ಸುನೀಲ್‌ ನಾರಾಯಣ್‌ (35ಕ್ಕೆ 2).

ಕೆಕೆಆರ್‌ ಕಳಪೆ ಆರಂಭ
ದೊಡ್ಡ ಮೊತ್ತವನ್ನು ಬೆನ್ನಟ್ಟುವ ಹಾದಿಯಲ್ಲಿ ಕೆಕೆಆರ್‌ ನಿರೀಕ್ಷಿತ ಆರಂಭ ಕಂಡುಕೊಳ್ಳುವಲ್ಲಿ ವಿಫ‌ಲವಾಯಿತು. ಮೊದಲ ಸಲ ಐಪಿಎಲ್‌ನಲ್ಲಿ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಪಡೆದ ಶುಭಮನ್‌ ಗಿಲ್‌ (7) ಇದರಲ್ಲಿ ಯಶಸ್ವಿಯಾಗಲಿಲ್ಲ. ಪಾಂಡ್ಯ ಬ್ರದರ್ ಸೇರಿಕೊಂಡು ಗಿಲ್‌ಗೆ ಪೆವಿಲಿಯನ್‌ ಹಾದಿ ತೋರಿಸಿದರು. ಕ್ರಿಸ್‌ ಲಿನ್‌ (17) ವೈಫ‌ಲ್ಯ ಇಲ್ಲಿಯೂ ಮುಂದುವರಿಯಿತು. ಮೆಕ್ಲೆನಗನ್‌ ಮೊದಲ ವಿಕೆಟ್‌ ರೂಪದಲ್ಲಿ ಲಿನ್‌ಗೆ ಬಲೆ ಬೀಸಿದರು. ಸ್ಕೋರ್‌ 28 ರನ್‌ ಆಗಿದ್ದಾಗ ಇವರಿಬ್ಬರು ಒಟ್ಟೊಟ್ಟಿಗೆ ವಾಪಸಾದರು.

ಮಧ್ಯಮ ಕ್ರಮಾಂಕದಲ್ಲಿ ರಾಬಿನ್‌ ಉತ್ತಪ್ಪ, ನಿತೀಶ್‌ ರಾಣ ಮುಂಬೈ ದಾಳಿಯನ್ನು ದಂಡಿಸುತ್ತ ಮುನ್ನುಗ್ಗುತ್ತಿದ್ದಾಗ ಕೆಕೆಆರ್‌ ಗೆಲುವಿನ ಬಗ್ಗೆ ಬಹಳ ನಿರೀಕ್ಷೆ ಇತ್ತು. ಈ ಜೋಡಿಯಿಂದ 3ನೇ ವಿಕೆಟಿಗೆ 84 ರನ್‌ ಒಟ್ಟುಗೂಡಿತು. ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟ್‌ ಬೀಸಿದ ಉತ್ತಪ್ಪ 35 ಎಸೆತಗಳಿಂದ 54 ರನ್‌ ಸಿಡಿಸಿ ಮುಂಬೈಗೆ ಭೀತಿಯೊಡ್ಡಿದರು (6 ಬೌಂಡರಿ, 3 ಸಿಕ್ಸರ್‌). ರಾಣ ಗಳಿಕೆ 27 ಎಸೆತಗಳಿಂದ 31 ರನ್‌ (3 ಬೌಂಡರಿ, 1 ಸಿಕ್ಸರ್‌). ಡೆತ್‌ ಓವರ್‌ಗಳಲ್ಲಿ ನಾಯಕ ದಿನೇಶ್‌ ಕಾರ್ತಿಕ್‌ ಹೋರಾಟ ಸಂಘಟಿಸಿದರೂ ಅವರಿಗೆ ಇನ್ನೊಂದು ತುದಿಯಿಂದ ಬೆಂಬಲ ಸಿಗಲಿಲ್ಲ. ಕಾರ್ತಿಕ್‌ ಗಳಿಕೆ ಅಜೇಯ 36 ರನ್‌. ಅಜೇಯ 35 ರನ್‌ ಹಾಗೂ 2 ವಿಕೆಟ್‌ ಹಾರಿಸಿದ ಹಾರ್ದಿಕ್‌ ಪಾಂಡ್ಯ ಪಂದ್ಯಶ್ರೇಷ್ಠರೆನಿಸಿದರು.

ಸ್ಕೋರ್‌ಪಟ್ಟಿ
ಮುಂಬೈ ಇಂಡಿಯನ್ಸ್‌

ಸೂರ್ಯಕುಮಾರ್‌ ಯಾದವ್‌    ಸಿ ಕಾರ್ತಿಕ್‌ ಬಿ ರಸೆಲ್‌    59
ಎವಿನ್‌ ಲೆವಿಸ್‌    ಸಿ ಲಿನ್‌ ಬಿ ರಸೆಲ್‌    43
ರೋಹಿತ್‌ ಶರ್ಮ    ಸಿ ಆರ್‌ಕೆ ಸಿಂಗ್‌ ಬಿ ನಾರಾಯಣ್‌    11
ಹಾರ್ದಿಕ್‌ ಪಾಂಡ್ಯ    ಔಟಾಗದೆ    35
ಕೃಣಾಲ್‌ ಪಾಂಡ್ಯ    ಸಿ ಗಿಲ್‌ ಬಿ ನಾರಾಯಣ್‌    14
ಜೆಪಿ ಡ್ಯುಮಿನಿ    ಔಟಾಗದೆ    13
ಇತರ        6
ಒಟ್ಟು  (20 ಓವರ್‌ಗಳಲ್ಲಿ 4 ವಿಕೆಟಿಗೆ)        181
ವಿಕೆಟ್‌ ಪತನ: 1-91, 2-106, 3-127, 4-151.
ಬೌಲಿಂಗ್‌:
ನಿತೀಶ್‌ ರಾಣ        2-0-17-0
ಪ್ರಸಿದ್ಧ್ ಕೃಷ್ಣ        4-0-39-0
ಮಿಚೆಲ್‌ ಜಾನ್ಸನ್‌        3-0-25-0
ಸುನೀಲ್‌ ನಾರಾಯಣ್‌        4-0-35-2
ಪೀಯೂಷ್‌ ಚಾವ್ಲಾ        3-0-35-0
ಕುಲದೀಪ್‌ ಯಾದವ್‌        2-0-17-0
ಆ್ಯಂಡ್ರೆ ರಸೆಲ್‌        2-0-12-2

ಕೋಲ್ಕತಾ ನೈಟ್‌ರೈಡರ್
ಕ್ರಿಸ್‌ ಲಿನ್‌    ಸಿ ಬುಮ್ರಾ ಬಿ ಮೆಕ್ಲೆನಗನ್‌    17
ಶುಭಮನ್‌ ಗಿಲ್‌    ಸಿ ಕೃಣಾಲ್‌ ಬಿ ಹಾರ್ದಿಕ್‌    7
ರಾಬಿನ್‌ ಉತ್ತಪ್ಪ    ಸಿ ಕಟಿಂಗ್‌ ಬಿ ಮಾರ್ಕಂಡೆ    54
ನಿತೀಶ್‌ ರಾಣ    ಸಿ ಬುಮ್ರಾ ಬಿ ಹಾರ್ದಿಕ್‌    31
ದಿನೇಶ್‌ ಕಾರ್ತಿಕ್‌    ಔಟಾಗದೆ    36
ಆ್ಯಂಡ್ರೆ ರಸೆಲ್‌    ಸಿ ಕೃಣಾಲ್‌ ಬಿ ಬುಮ್ರಾ    9
ಸುನೀಲ್‌ ನಾರಾಯಣ್‌    ಸಿ ರೋಹಿತ್‌ ಬಿ ಕೃಣಾಲ್‌    5
ಪೀಯೂಷ್‌ ಚಾವ್ಲಾ    ಔಟಾಗದೆ    0
ಇತರ        9
ಒಟ್ಟು  (20 ಓವರ್‌ಗಳಲ್ಲಿ 6 ವಿಕೆಟಿಗೆ)        168
ವಿಕೆಟ್‌ ಪತನ: 1-28, 2-28, 3-112, 4-115, 5-131, 6-163.
ಬೌಲಿಂಗ್‌:
ಮಿಚೆಲ್‌ ಮೆಕ್ಲೆನಗನ್‌        4-0-30-1
ಜಸ್‌ಪ್ರೀತ್‌ ಬುಮ್ರಾ        4-0-34-1
ಹಾರ್ದಿಕ್‌ ಪಾಂಡ್ಯ        4-0-19-2
ಕೃಣಾಲ್‌ ಪಾಂಡ್ಯ        3-0-29-1
ಮಾಯಾಂಕ್‌ ಮಾರ್ಕಂಡೆ        3-0-25-1
ಬೆನ್‌ ಕಟಿಂಗ್‌        2-0-23-0

ಪಂದ್ಯಶ್ರೇಷ್ಠ: ಹಾರ್ದಿಕ್‌ ಪಾಂಡ್ಯ

Advertisement

Udayavani is now on Telegram. Click here to join our channel and stay updated with the latest news.

Next