Advertisement

ಮುಂಬಯಿ: ರೈಲ್ವೇಯಲ್ಲಿ ಅಪರಾಧ ಸಂಖ್ಯೆ ಹೆಚ್ಚಳ

11:38 AM Jan 15, 2022 | Team Udayavani |

ಮುಂಬಯಿ: ಕೊರೊನಾ ಮತ್ತು ಲಾಕ್‌ಡೌನ್‌ನಿಂದಾಗಿ 2020ರಲ್ಲಿ ಹೆಚ್ಚಿನ ಸಮಯ ಮುಚ್ಚಲಾಗಿದ್ದ ರೈಲು ಸೇವೆ 2021ರಲ್ಲಿ ಪೂರ್ಣವಾಗಿ ಪುನರಾರಂಭವಾಗಿದ್ದರೂ ರೈಲ್ವೇಯಲ್ಲಿ ಹತ್ಯೆ ಮತ್ತು ಅತ್ಯಾಚಾರದಂತಹ ಗಂಭೀರ ಅಪರಾಧಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ರೈಲ್ವೇಯಲ್ಲಿ ಒಟ್ಟು 6,720 ಪ್ರಕರಣಗಳು ದಾಖಲಾಗಿವೆ.

Advertisement

ರೈಲ್ವೇ ಪೊಲೀಸರ ಪ್ರಕಾರ 2021ರಲ್ಲಿ 10 ಹತ್ಯೆಗಳು ಮತ್ತು 11 ಅತ್ಯಾಚಾರಗಳು ಸಹಿತ ಒಟ್ಟು 6,720 ಪ್ರಕರಣಗಳು ದಾಖಲಾಗಿವೆ. 2020ರಲ್ಲಿ ಜನವರಿಯಿಂದ ಮಾರ್ಚ್‌ ಹೊರತುಪಡಿಸಿ ಉಳಿದ ತಿಂಗಳುಗಳಲ್ಲಿ ರೈಲು ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿತ್ತು. ಈ ವೇಳೆ 8,292 ವಿವಿಧ ಪ್ರಕರಣಗಳು ವರದಿಯಾಗಿವೆ. ವರ್ಷದ ಮೊದಲ ಮೂರು ತಿಂಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಮೂರು ಕೊಲೆ ಪ್ರಕರಣಗಳು ಸೇರಿದ್ದವು. ಈ ಮೂರೂ ಪ್ರಕರಣಗಳ ತನಿಖೆಯಲ್ಲಿ ರೈಲ್ವೇ ಪೊಲೀಸರು ಯಶಸ್ವಿಯಾಗಿದ್ದರು. ಐದು ಹತ್ಯೆ ಯತ್ನ ಪ್ರಕರಣಗಳು ದಾಖಲಾಗಿದ್ದು, ನಾಲ್ಕರಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಇದಲ್ಲದೆ ರೈಲ್ವೇ ಪ್ರದೇಶದಲ್ಲಿ ಮೂರು ಅತ್ಯಾಚಾರದ ಘಟನೆಗಳು ಸಂಭವಿಸಿದ್ದು, ಎರಡು ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸಲಾಗಿದೆ.

ಎರಡು ವರ್ಷಗಳಲ್ಲಿ 9,165 ಮೊಬೈಲ್‌ ಕಳವು :

ಹೆಚ್ಚಿನ ಪ್ರಯಾಣಿಕರು ಸ್ಥಳೀಯವಾಗಿ ಪ್ರಯಾಣಿಸುವಾಗ, ಪ್ಲಾಟ್‌ಫಾರ್ಮ್ ಗಳಲ್ಲಿ ನಿಂತಿರುವಾಗ ಅಥವಾ ಪಾದಚಾರಿ ಸೇತುವೆಯ ಮೇಲೆ ನಡೆಯುವಾಗ ಸ್ಮಾರ್ಟ್‌ ಮೊಬೈಲ್‌ಗ‌ಳ ಕಳವು ಪ್ರಕರಣ ಕಂಡುಬಂದಿದೆ. ಕಳೆದ ಎರಡು ವರ್ಷಗಳಲ್ಲಿ 9,165 ಮೊಬೈಲ್‌ ಗಳನ್ನು ಕಳವು ಮಾಡಲಾಗಿದೆ. 2020 ರಲ್ಲಿ 5,097 ಮೊಬೈಲ್‌ ಕಳವು ಮಾಡಲಾಗಿದೆ. ಈ ಪೈಕಿ 845 ಮೊಬೈಲ್‌ಗ‌ಳನ್ನು ಮಾತ್ರ ರೈಲ್ವೇ ಪೊಲೀಸರು ವಶಪಡಿಸಿಕೊಂಡಿದ್ದರೆ, 2021ರಲ್ಲಿ 4,068 ಮೊಬೈಲ್‌ಗ‌ಳು ಕಳವಾಗಿದ್ದು, 1,263 ಮೊಬೈಲ್‌ಗ‌ಳು ಪತ್ತೆಯಾಗಿವೆ.

ಉಪನಗರ ರೈಲುಗಳಲ್ಲಿ ಕಳವು:

Advertisement

ಮಧ್ಯ ಮತ್ತು ಪಶ್ಚಿಮ ಉಪನಗರ ರೈಲ್ವೇಯಲ್ಲಿ ಕೊಲೆ, ಕೊಲೆ ಯತ್ನ, ಕಳ್ಳತನ, ದರೋಡೆ, ಗಂಭೀರ ದರೋಡೆ, ಕಿರುಕುಳ, ಚೈನ್‌, ವಾಲೆಟ್‌ ಮತ್ತು ಮೊಬೈಲ್‌ ಕಳ್ಳತನ, ಬ್ಯಾಗ್‌ ಕಳ್ಳತನ, ಸಣ್ಣ ವಿವಾದಗಳು ಇತ್ಯಾದಿಗಳು ಸಂಭವಿಸುತ್ತವೆ. 2021ರಲ್ಲಿ ಒಟ್ಟು 6,720 ಅಪರಾಧಗಳು ನಡೆದಿದ್ದು, 2,585 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಆದ್ದರಿಂದ ಶಿಕ್ಷೆ  ಪ್ರಮಾಣ ಶೇ. 38ರಷ್ಟಿದೆ. 2020ರಲ್ಲಿ  8,292 ಪ್ರಕರಣಗಳನ್ನು ದಾಖಲಿಸಲಾಗಿದ್ದು, 1,706 ಪ್ರಕರಣಗಳನ್ನು ಪರಿಹರಿಸಲಾಗಿದೆ. ಈ ದೃಷ್ಟಿಯಿಂದ ಶೇ.21ರಷ್ಟು ಪ್ರಕರಣಗಳನ್ನು ಮಾತ್ರ ಯಶಸ್ವಿಯಾಗಿ ತನಿಖೆ ಮಾಡಲಾಗಿದೆ. 2021ರಲ್ಲಿ 16.37 ಕೋಟಿ ರೂ. ಮೌಲ್ಯದ ಕಳವು ಸೊತ್ತಿನಲ್ಲಿ 4.83 ಕೋಟಿ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.

ಯಶಸ್ವಿ ತನಿಖೆ ಸಂಖ್ಯೆಯೂ ಹೆಚ್ಚಳ :

ಆದರೆ 2021ರಲ್ಲಿ ಈ ಅಪರಾಧಗಳು ಹೆಚ್ಚಾಗಿವೆ. ಹತ್ತು ಹತ್ಯೆಗಳು ಮತ್ತು ಆರು ಹತ್ಯೆ ಯತ್ನಗಳನ್ನು ಯಶಸ್ವಿಯಾಗಿ ತನಿಖೆ ಮಾಡಲಾಗಿದೆ. 11 ಅತ್ಯಾಚಾರ ಪ್ರಕರಣಗಳಲ್ಲಿ ಹತ್ತು ಅಪರಾಧಿಗಳನ್ನು ಬಂಧಿಸಲಾಗಿದೆ. ಹತ್ಯೆ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿದ್ದರೂ ಆ ಅಪರಾಧಗಳನ್ನು ಶೇ. 100ರಷ್ಟು ಪರಿಹರಿಸಲಾಗಿದೆ. ಪ್ರಯಾಣಿಕರ ಸುರಕ್ಷೆಗೂ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಹಿಳೆಯರ ಸುರಕ್ಷೆಗೂ ಒತ್ತು ನೀಡಲಾಗುತ್ತಿದೆ ಎಂದು ರೈಲ್ವೇ ಪೊಲೀಸ್‌ ಆಯುಕ್ತ ಕೈಸರ್‌ ಖಾಲಿದ್‌ ಹೇಳಿ¨ªಾರೆ. 2020ಕ್ಕೆ ಹೋಲಿಸಿದರೆ 2021ರಲ್ಲಿ ಇತರ ಅಪರಾಧಗಳು ಕಡಿಮೆಯಾಗಿದ್ದು, ರೈಲ್ವೇ ಪೊಲೀಸರ ಯಶಸ್ವಿ ತನಿಖೆಗಳ ಸಂಖ್ಯೆಯೂ ಹೆಚ್ಚಾಗಿದೆ. ಬಹುತೇಕ ಮೊಬೈಲ್‌ ಕಳ್ಳತನ ಪ್ರಕರಣಗಳ ತನಿಖೆಗೆ ಹಲವು ತೊಂದರೆಗಳಿದ್ದರೂ ಮೊಬೈಲ್‌ ಕಳ್ಳತನವನ್ನು ಪತ್ತೆ ಹಚ್ಚಿ ಪ್ರಯಾಣಿಕರಿಗೆ ಹಿಂದಿರುಗಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next