ಮುಂಬೈ: ಮುಂಬೈನ ಗಣೇಶೋತ್ಸವ ಎಂದರೆ ಹಲವು ವಿಶೇಷಗಳಿಂದ ಕೂಡಿರುತ್ತದೆ. ಪ್ರಸಕ್ತ ವರ್ಷ ಗಣಪನಿಗೆ ಮಾಡಿಸಲಾಗಿರುವ ವಿಮೆಗಳಿಂದಲೇ ಸುದ್ದಿಯಾಗುತ್ತಿದೆ.
ವಾಣಿಜ್ಯ ನಗರಿಯ ಕಿಂಗ್ ಸರ್ಕಲ್‌ನಲ್ಲಿ ಜಿ.ಎಸ್.ಬಿ.ಸೇವಾ ಮಂಡಲ್ ಇರಿಸುವ ಗಣೇಶನಿಗೆ 316.4 ಕೋಟಿ ರೂ. ಮೌಲ್ಯದ ವಿಮೆ ಮಾಡಿಸಲಾಗಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ನ್ಯೂ ಇಂಡಿಯಾ ಎಶ್ಶೂರೆನ್ಸ್ ವಿಮೆ ನೀಡಿದ ಸಂಸ್ಥೆ.
2016ರಲ್ಲಿ ಜಿ.ಎಸ್.ಬಿ.ಸೇವಾ ಮಂಡಲ್ 300 ಕೋಟಿ ರೂ. ಮೌಲ್ಯದ ವಿಮೆ ಮಾಡಿಸಿಕೊಂಡಿತ್ತು. ವಿಮೆಯ ಮೊತ್ತ ಏರಿಕೆಯಾಗಿರುವ ಬಗ್ಗೆ ಮತ್ತು ಪ್ರೀಮಿಯಂ ಮೊತ್ತ ಎಷ್ಟು ಸೇರಿದಂತೆ ಹಲವು ವಿವರಗಳ ಬಗ್ಗೆ ಸೇವಾ ಮಂಡಳದ ಪದಾಧಿಕಾರಿಗಳು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಮಂಡಳ ಇರಿಸುವ ಗಣೇಶನ ವಿಗ್ರಹಕ್ಕೆ 66 ಕೆಜಿಗಿಂತಲೂ ಅಧಿಕ ಪ್ರಮಾಣದ ಚಿನ್ನ, 295 ಕೆಜಿಗಿಂತಲೂ ಹೆಚ್ಚು ಬೆಳ್ಳಿಯ ಆಭರಣಗಳನ್ನು ಹಾಕಲಾಗುತ್ತದೆ.
ವಾಣಿಜ್ಯ ನಗರಿಯ ವಡಾಲಾದಲ್ಲಿ ಇರುವ ಜಿ.ಎಸ್.ಬಿ. ಸಾರ್ವಜನಿಕ ಮಂಡಲದ ರಾಮ ಮಂದಿರ ಇರಿಸುವ ಗಣೇಶನ ವಿಗ್ರಹಕ್ಕೂ 250 ಕೋಟಿ ರೂ. ಮೌಲ್ಯದ ವಿಮೆಯನ್ನು ಹೊಂದಿದೆ. ಆ ಸಂಘಟನೆಯ ಟ್ರಸ್ಟಿ ಉಲ್ಲಾಸ್ ಕಾಮತ್ ಮಾತನಾಡಿ 7 ರಿಂದ 8 ಲಕ್ಷ ರೂ. ಪ್ರೀಮಿಯಂ ನೀಡುತ್ತೇವೆ ಎಂದು ಹೇಳಿದ್ದಾರೆ.
ಮುಂಬೈನ ಲಾಲ್‌ಭಾಗ್‌ನಲ್ಲಿ ಇರುವ ಗಣೇಶೋತ್ಸವ ಸಮಿತಿ 25.6 ಕೋಟಿ ರೂ. ಮೌಲ್ಯದ ವಿಮೆಯನ್ನು ನ್ಯೂ ಇಂಡಿಯಾ ಎಶ್ಶೂರೆನ್ಸ್‌ನಿಂದ ಪಡೆದುಕೊಂಡಿದೆ. ಪ್ರಸಕ್ತ ವರ್ಷ ಆ.31ರಿಂದ ಸೆ.9ರ ವರೆಗೆ ಮುಂಬೈನ ವಿವಿಧ ಸ್ಥಳಗಳಲ್ಲಿ ಗಣೇಶನ ವಿಗ್ರಹ ಇರಿಸಲಾಗುತ್ತದೆ.
ಸಮಿತಿ ಮೊತ್ತ (ಕೋಟಿ ರೂ.ಗಳಲ್ಲಿ)
ಜಿ.ಎಸ್.ಬಿ.ಸೇವಾ ಮಂಡಲ್ 316.4
ರಾಮ ಮಂದಿರ 250
ಲಾಲ್‌ಭಾಗ್ 25.6