ಮುಂಬಯಿ : ಮುಂಬಯಿಯಲ್ಲಿ ಇಂದು ಸೋಮವಾರ ಕೂಡ ಧಾರಾಕಾರ ಮಳೆಯಾಗುತ್ತಿದೆ. ಮಹಾನಗರಿಯ ಬಹುತೇಕ ಭಾಗಗಳು ನೀರಿನಿಂದ ತುಂಬಿವೆ. ಈ ವಾರದಲ್ಲಿ ಮಹಾನಗರಿಯಲ್ಲಿ ಇನ್ನಷ್ಟು ಜೋರಾಗಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ನಗರದ ಗಾಂಧಿ ಮಾರ್ಕೆಟ್ ಸ್ಟ್ರೀಟ್ ಜಡಿಮಳೆಯಿಂದಾಗಿ ನೀರಿನಿಂದ ತುಂಬಿಕೊಂಡಿದೆ. ಹಾಗಿದ್ದರೂ ಇಲ್ಲಿ ಆಟೋ, ಕಾರು, ದ್ವಿಚಕ ವಾಹನಗಳು, ಬಸ್ಸುಗಳು ಕಷ್ಟದಿಂದ ಓಡಾಡುತ್ತಿವೆ. ಜಡಿಮಳೆಯ ಪ್ರಯುಕ್ತ ನಗರದ ಬಹುತೇಕ ಎಲ್ಲ ಖಾಸಗಿ ಶಾಲೆಗಳು ರಜೆ ಸಾರಿವೆ.
ಸೆಂಟ್ರಲ್ ರೈಲ್ವೇಯಲ್ಲಿ ರೈಲುಗಳು 25ರಿಂದ 30 ನಿಮಿಷ ತಡವಾಗಿ ಓಡಾಡುತ್ತಿವೆ. ಹಾರ್ಬರ್ ಲೈನ್ ಮತ್ತು ವೆಸ್ಟರ್ನ್ ರೈಲ್ವೆ ಟ್ರೈನ್‌ಗಳು ನಲ ಸೋಪಾರಾ ಜಲಾವೃತರಾಗಿರುವ ಕಾರಣ 15 ನಿಮಿಷ ವಿಳಂಬವಾಗಿ ಓಡುತ್ತಿವೆ.
ವೀರ ದೇಸಾಯಿ ರೋಡ್, ಕಂಟ್ರಿ ಕ್ಲಬ್ ಸಮೀಪ ಅಂಧೇರಿ ಪಶ್ಚಿಮ, ಕಲ್ವಾ ಸ್ಟೇಶನ್ ಪ್ರದೇಶ, ದಾದರ್ ಮತ್ತು ಸಯಾನ್ ನೀರಿನಿಂದ ತುಂಬಿಕೊಂಡಿವೆ.
ಸ್ಯಾಂಡ್ ಹರ್ಸ್ಡ್ ಸ್ಟೇಶನ್‌ನ ಪ್ಲಾಟ್ ಫಾರ್ಮ್ 1ಕ್ಕೆ ಸಮೀಪದಲ್ಲಿ ಗೋಡೆ ಕುಸಿದಿದೆ. ಕಲ್ಯಾಣ್ ನಲ್ಲಿ ರೈಲು ಸೇವೆ ಬಾಧಿತವಾಗಿದೆ. ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ನಿರಂತರ ಜಡಿಮಳೆಯಿಂದಾಗಿ ಮಹಾನಗರಿಯಲ್ಲಿನ ಜನಜೀವನ ತೀವ್ರವಾಗಿ ಬಾಧಿತವಾಗಿದೆ. ಸ್ಥಳೀಯಾಡಳಿತೆ, ಪೊಲೀಸ್ ದಳ, ಪ್ರಕೋಪ ನಿರ್ವಹಣಾ ದಳ ರಕ್ಷಣಾ ಕಾರ್ಯಗಳಲ್ಲಿ ಕಾರ್ಯೋನ್ಮುಖವಾಗಿವೆ.