ಮುಂಬೈ: ದೇಶಿಯ ಕ್ರಿಕೆಟ್ ನ ದಿಗ್ಗಜ ಮುಂಬೈ ತಂಡವು ಮತ್ತೊಮ್ಮೆ ರಣಜಿ ಟ್ರೋಫಿ ಗೆದ್ದುಕೊಂಡಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ದ 169 ರನ್ ಅಂತರದ ಗೆಲುವು ಸಾಧಿಸಿದೆ.
ಗೆಲುವಿಗೆ 538 ರನ್ ಗಳ ಕಠಿಣ ಗುರಿ ಪಡೆದಿದ್ದ ವಿದರ್ಭ ತಂಡವು 368 ರನ್ ಗಳಿಗೆ ಆಲೌಟಾಯಿತು. ಇದರೊಂದಿಗೆ ಮುಂಬೈ 169 ರನ್ ಅಂತರದ ಗೆಲುವು ಪಡೆಯಿತು. ಮುಂಬೈ ದಾಖಲೆಯ 42ನೇ ಬಾರಿಗೆ ರಣಜಿ ಟ್ರೋಫಿ ಕಪ್ ಗೆದ್ದುಕೊಂಡಿದೆ.
ವಿದರ್ಭ ತಂಡದ ನಾಯಕ ಅಕ್ಷಯ್ ವಾಡ್ಕರ್ (102 ರನ್) ಮತ್ತು ಹರ್ಷ ದುಬೆ (65 ರನ್) ಅವರು ಮೊದಲ ಅವಧಿಗೆ ಮುಂಬೈ ತಂಡವನ್ನು ಗೆಲುವಿನಿಂದ ದೂರವಿಟ್ಟರು. ಕೊನೆಯ ದಿನದಾಟವು ವಿದರ್ಭವು 5 ವಿಕೆಟ್ ಗೆ 248 ರನ್ ಗಳೊಂದಿಗೆ ಆರಂಭಿಸಿತು. ಗೆಲುವಿಗೆ ಇನ್ನೂ 290 ರನ್‌ಗಳ ಅಗತ್ಯವಿತ್ತು. ಅಂತಿಮವಾಗಿ ತಂಡವು 368 ರನ್‌ಗಳಿಗೆ ಆಲೌಟ್ ಆಯಿತು.
ಮುಂಬೈ ಪರವಾಗಿ ತನುಷ್ ಕೋಟ್ಯಾನ್ ನಾಲ್ಕು ವಿಕೆಟ್ ಪಡೆದರೆ, ತುಷಾರ್ ದೇಶಪಾಂಡೆ ಮತ್ತು ಮುಶೀರ್ ಖಾನ್ ತಲಾ ಎರಡು ವಿಕೆಟ್ ಕಿತ್ತರು. ಶಮ್ಸ್ ಮಲಾನಿ ಮತ್ತು ಧವಳ್ ಕುಲಕರ್ಣಿ ತಲಾ ಒಂದು ವಿಕೆಟ್ ಕಿತ್ತರು.
ಎರಡನೇ ಇನ್ನಿಂಗ್ಸ್ ನಲ್ಲಿ 136 ರನ್ ಗಳಿಸಿದ ಮುಶೀರ್ ಖಾನ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ತನುಷ್ ಕೋಟ್ಯಾನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.