Advertisement

ಮುಂಬಯಿ ; ವರ್ಷಾಂತ್ಯಕ್ಕೆ ಶಿಥಿಲಾವಸ್ಥೆಯ 443 ಕಟ್ಟಡ ಧರಾಶಾಯಿ

04:21 PM Sep 03, 2020 | Nagendra Trasi |

ಮುಂಬಯಿ, ಸೆ. 2: ಶಿಥಿಲಗೊಂಡ ಕಟ್ಟಡವೆಂದು ಗುರುತಿಸಲಾದ ನಗರದ 443 ವಸತಿ ಕಟ್ಟಡಗಳನ್ನು ವರ್ಷಾಂತ್ಯದ ವೇಳೆಗೆ ಉರುಳಿಸಲು ಯೋಜನೆ ರೂಪಿಸಲಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹೇಳಿದ್ದಾರೆ.

Advertisement

ಮಾನ್ಸೂನ್‌ ಸಂದರ್ಭದಲ್ಲಿ ಕಟ್ಟಡ ಕುಸಿತದ ಹಲವು ಪ್ರಕರಣಗಳು ಕಂಡುಬಂದ ಹಿನ್ನೆಲೆ, ಬಿಎಂಸಿ
ಶಿಥಿಲಗೊಂಡ ಕಟ್ಟಡಗಳನ್ನು ಖಾಲಿ ಮಾಡಲು ಮತ್ತು ಕೆಡವಲು ಪ್ರಾರಂಭಿಸಿದೆ. ಕೊರೊನಾ ಲಾಕ್‌ ಡೌನ್‌ ಹಿನ್ನೆಲೆ ನಾಗರಿಕ ಸಂಸ್ಥೆ ಏಪ್ರಿಲ್‌ನಲ್ಲಿ ಅಂತಹ ಕಟ್ಟಡಗಳ ಮೇಲಿನ ಕ್ರಮವನ್ನು ಅರ್ಧಕ್ಕೆ ಕೈಬಿಟ್ಟಿತ್ತು.

ಶಿಥಿಲಗೊಂಡಿರುವ 443 ಕಟ್ಟಡಗಳನ್ನು ವರ್ಷದ ಅಂತ್ಯದ ವೇಳೆಗೆ ಉರುಳಿಸಲು ಗುರುತಿಸಲಾಗಿದೆ ಎಂದು ಬಿಎಂಸಿ ಅಧಿ ಕಾರಿಗಳು ತಿಳಿಸಿದ್ದಾರೆ. ಬಿಎಂಸಿ ಇವುಗಳನ್ನು ಸಿ-1 ವರ್ಗದ ಕಟ್ಟಡಗಳು ಎಂದು ವರ್ಗೀಕರಿಸಿದ್ದು, ಇವುಗಳು ದುರಸ್ತಿಗೆ ಮೀರಿದ್ದು ತುರ್ತಾಗಿ ನೆಲಸಮ ಮಾಡಬೇಕಾಗಿದೆ.

433ರಲ್ಲಿ 52 ಬಿಎಂಸಿ ಒಡೆತನದಲ್ಲಿದ್ದರೆ, 27 ರಾಜ್ಯ ಸರಕಾರದ ಮತ್ತು 364 ಖಾಸಗಿ ಒಡೆತನದ  ಕಟ್ಟಡಗಳಾಗಿವೆ. ಬಾಂದ್ರಾ ಮತ್ತು ಅಂಧೇರಿಗಳನ್ನು
ಒಳಗೊಂಡ ವಾರ್ಡ್‌ 3ರಲ್ಲಿ ಈ ಪೈಕಿ 109 ಕಟ್ಟಡಗಳಿವೆ. ಮುಲುಂಡ್‌, ಘಾಟ್ಕೊಪರ್‌ ಮತ್ತು ಭಾಂಡೂಪ್‌ ಅನ್ನು ಒಳಗೊಂಡ ವಾರ್ಡ್‌-6ರಲ್ಲಿ 105 ಕಟ್ಟಡಳಿವೆ. ಬೊರಿವಲಿ, ಕಾಂದಿವಲಿ ಮತ್ತು ದಹಿಸರ್‌ ಮುಂತಾದ ಪ್ರದೇಶಗಳನ್ನು ಒಳಗೊಂಡಿರುವ ವಾರ್ಡ್‌-7ರಲ್ಲಿ ಬಿಎಂಸಿ ಈಗಾಗಲೇ 53 ಅಪಾಯಕಾರಿ ಕಟ್ಟಡಗಳ ಪೈಕಿ 8 ಕಟ್ಟಡಗಳನ್ನು ನೆಲಸಮಗೊಳಿಸಿದೆ. ಇನ್ನೂ 14 ಕಟ್ಟಡಗಳಿಂದ ನಿವಾಸಿಗಳನ್ನು ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರದೇಶಗಳಲ್ಲಿ ಇನ್ನೂ 16 ಕಟ್ಟಡಗಳಿಗೆ ವಿದ್ಯುತ್‌ ಮತ್ತು ನೀರು ಸರಬರಾಜು ಮಾಡುವುದರಿಂದ ನಿವಾಸಿಗಳು ಅವುಗಳನ್ನು ಖಾಲಿ ಮಾಡಲು ನಿರಾಕರಿಸುತ್ತಿದ್ದಾರೆ. ಎಲ್‌ ವಾಡ್‌ ನಲ್ಲಿ 23 ಶಿಥಿಲಗೊಂಡ ಕಟ್ಟಡಗಳಿದ್ದು ಅವುಗಳಲ್ಲಿ 7 ಕಟ್ಟಡಗಳನ್ನು ನೆಲಸಮ ಮಾಡಲಾಗಿದೆ ಎಂದು ವಾರ್ಡ್‌ನ ಸಹಾಯಕ ಪುರಸಭೆ ಆಯುಕ್ತ ಮನೀಶ್‌ ವಲುಂಜ್‌ ತಿಳಿಸಿದ್ದಾರೆ.

Advertisement

ಕೆ-ವೆಸ್ಟ್‌ ವಾರ್ಡ್ ನಲ್ಲಿ 46 ಶಿಥಿಲ ಕಟ್ಟಡಗಳಿವೆ ಎಂದು ಬಿಎಂಸಿ ತಿಳಿಸಿದ್ದು, ಗುರುವಾರ ಕುರ್ಲಾದ ಚಕ್ಕಿವಾಲಾ ಕಟ್ಟಡವನ್ನು ಧ್ವಂಸಗೊಳಿಸಿತು. ಈ ಪೈಕಿ 13 ಕಟ್ಟಡಗಳನ್ನು ಖಾಲಿ ಮಾಡಲಾಗಿದ್ದು, ಬಿಎಂಸಿ ನೀರು ಮತ್ತು ವಿದ್ಯುತ್‌ ಸರಬರಾಜನ್ನು 15ಕ್ಕೆ ಇಳಿಸಿದೆ.

ಜುಲೈನಲ್ಲಿ, ಫೋರ್ಟ್‌ನ ಲಕ್ಕಿ ಹೌಸ್‌ ಬಳಿಯ ಭಾನುಶಾಲಿ ಕಟ್ಟಡದ ಸುಮಾರು ಮೂರನೇ ಒಂದು ಭಾಗದಷ್ಟು ಕುಸಿದು 10 ಜನರು ಸಾವನ್ನಪ್ಪಿದರು. ಆಗಸ್ಟ್‌ 27ರಂದು ಬೈಕುಲಾದ ಶುಕ್ಲಾಜಿ ಸ್ಟ್ರೀಟ್‌ ನಲ್ಲಿರುವ ಮಿಶ್ರಾ ಕಟ್ಟಡದಲ್ಲಿ ಶೌಚಾಲಯದ ಭಾಗ ಕುಸಿದು 12 ವರ್ಷದ ಬಾಲಕಿ ಮತ್ತು 70 ವರ್ಷದ ಮಹಿಳೆ ಜೆಜೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಅದೇ ದಿನ ಚೆಂಬೂರಿನಲ್ಲಿ ಕಟ್ಟಡದ ಭಾಗ ಕುಸಿದು ಮಹಿಳೆಯೊಬ್ಬರಿಗೆ ಗಂಭೀರ ಗಾಯಗಳಾಗಿವೆ. ಡಿಯೊನಾರ್‌ನ ಗೌತಮ್‌ ನಗರದಲ್ಲಿರುವ ಎರಡು
ಅಂತಸ್ತಿನ ಮನೆಯ ಒಂದು ಭಾಗವು ಧರೆಗುರುಳಿ ಓರ್ವ ಮಹಿಳೆ ಗಾಯಗೊಂಡು ಶತಾಬಿx ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next