Advertisement

ನೀಲಿ ಬಣ್ಣದ ಹೊಳೆಯುವ ಅಲೆಗಳಿಗೆ ಸಾಕ್ಷಿಯಾಗುತ್ತಿರುವ ಮಹಾರಾಷ್ಟ್ರದ ಕಡಲ ತೀರಗಳು

06:57 PM Nov 26, 2020 | mahesh |

ಮುಂಬಯಿ: ಜುಹೂ ಬೀಚ್‌ ಸೇರಿದಂತೆ ಮಹಾರಾಷ್ಟ್ರದ ತೀರಕ್ಕೆ ಅಪ್ಪಳಿಸುತ್ತಿರುವ ಸಮುದ್ರದ ಅಲೆಗಳು ಕಳೆದ ಕೆಲವು ರಾತ್ರಿಗಳಲ್ಲಿ ನೀಲಿ ಬಣ್ಣದ ಹೊಳೆಯುವ ಛಾಯೆಗಳಿಗೆ ಸಾಕ್ಷಿಯಾಗುತ್ತಿವೆ. ಪ್ರಕಾಶಮಾನವಾದ ಸಮುದ್ರ ಸೂಕ್ಷ್ಮಜೀವಿಗಳು ಒಂದೆಡೆ ಒಗ್ಗೂಡಿ ಸಮುದ್ರವನ್ನು ನೀಲಿ ಬಣ್ಣದ ಛಾಯೆಯಾಗಿ ಕಾಣುವಂತೆ ಮಾಡುತ್ತವೆ ಎನ್ನಲಾದ ಈ ನೀಲಿ ಅಲೆಯ ವಿದ್ಯಮಾನವನ್ನು ಪ್ರಸಕ್ತ ವರ್ಷ ಹಲವಾರು ಕರಾವಳಿ ಪ್ರದೇಶಗಳಲ್ಲಿ ಗಮನಿಸಲಾಗಿದೆ.

Advertisement

ಸಾಮಾನ್ಯವಾಗಿ ಡೈನೋಫ್ಲಾಜೆಲೆಟ್ಸ್‌ ಎಂದು ಕರೆಯಲ್ಪಡುವ ಫೈಟೊಪ್ಲಾಂಕ್ಟನ್‌ (ಸೂಕ್ಷ್ಮ ಸಮುದ್ರ ಪಾಚಿ) ಅದರ ಪ್ರೊಟೀನ್‌ಗಳಲ್ಲಿನ ರಾಸಾಯನಿಕ ಪ್ರತಿಕ್ರಿಯೆಗಳ ಮೂಲಕ ಬೆಳಕನ್ನು ಉತ್ಪತ್ತಿ ಮಾಡುವಾಗ ಈ ಚಮತ್ಕಾರ ಸಂಭವಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಅಲೆಗಳು ಈ ಏಕಕೋಶೀಯ ಸೂಕ್ಷ್ಮಜೀವಿಗಳನ್ನು ವಿಚಲಿತಗೊಳಿಸುತ್ತವೆ ಮತ್ತು ಅವುಗಳನ್ನು ನೀಲಿ ಬೆಳಕನ್ನು ಬಿಡುಗಡೆ ಮಾಡುವಂತೆ ಮಾಡುತ್ತವೆ ಎಂದವರು ನುಡಿದಿದ್ದಾರೆ.

ಬುಧವಾರ ರಾತ್ರಿ ಜುಹೂ ಮತ್ತು ರತ್ನಗಿರಿಯ ದೇವಗಡ ಮತ್ತು ವೇಲಾಸ್‌ ಕಡಲತೀರಗಳಲ್ಲಿ ಈ ದೃಶ್ಯವನ್ನು ಗಮನಿಸಲಾಗಿದೆ. ಭಾರತದಾದ್ಯಂತ‌ ಕರಾವಳಿ ಪ್ರದೇಶಗಳು ನವೆಂಬರ್‌ನಿಂದ ಜನವರಿ ನಡುವಿನ ಅವಧಿಯಲ್ಲಿ ಈ ದೃಶ್ಯಕ್ಕೆ ಸಾಕ್ಷಿಯಾಗುತ್ತವೆ. ಮಾರ್ಚ್‌ನಲ್ಲೂ ಇಂತಹ ದೃಶ್ಯ ಕಂಡುಬಂದಿರುವ ಕೆಲವು ನಿದರ್ಶನಗಳಿವೆ. ಇತ್ತೀಚೆಗೆ ದಕ್ಷಿಣ ಕನ್ನಡ-ಉಡುಪಿ ಕರಾವಳಿಯಲ್ಲಿ ನೀಲಿ ಅಲೆ ಕಾಣಲು ಸಿಕ್ಕಿತ್ತು.

ಮಾಲ್ಡೀವ್ಸ್‌, ವಿಯೆಟ್ನಾಂ, ಇಂಡೋನೇಷ್ಯಾ, ಯುಎಸ್‌ಎ ಮತ್ತು ಆಸ್ಟ್ರೇಲಿಯಾದಂತಹ ಪ್ರಪಂಚದಾದ್ಯಂತದ ಅನೇಕ ಕಡಲತೀರಗಳಲ್ಲಿ ಈ ದೃಶ್ಯವನ್ನು ಗಮನಿಸಲಾಗಿದೆ. ಮುಂಬಯಿಯಲ್ಲಿ ಮೊದಲ ಬಾರಿಗೆ 2016ರ ನವೆಂಬರ್‌ನ‌ಲ್ಲಿ ಎರಡು ವಾರಗಳವರೆಗೆ ನೀಲಿ ಅಲೆಯನ್ನು ಗಮನಿಸಲಾಗಿತ್ತು. ಸಮುದ್ರ ತಜ್ಞರ ಪ್ರಕಾರ, ಮುಂಬಯಿಯಲ್ಲಿ, ವಿಶೇಷವಾಗಿ ಕಡಲತೀರಗಳ ಸುತ್ತಲಿನ ಬೆಳಕಿನ ಮಾಲಿನ್ಯವು ಈ ವಿದ್ಯಮಾನವನ್ನು ನೋಡದಿರಲು ಒಂದು ಪ್ರಮುಖ ಕಾರಣವಾಗಬಹುದು. ಕತ್ತಲೆಯಲ್ಲಿ ಹೊಳಪು ಗೋಚರಿಸುವುದರಿಂದ ನಗರದಲ್ಲಿ ಈ ಪರಿವರ್ತನೆ ಗಮನಕ್ಕೆ ಬಾರದಿರಬಹುದು ಎಂದವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಬುಧವಾರ ರಾತ್ರಿ ಜುಹೂ ಬೀಚ್‌ನಲ್ಲಿ ಬಯೋಲುಮಿನೆಸೆನ್ಸ್‌ (ಹೊಳೆಯುವ ನೀಲಿ ಅಲೆ) ಅನ್ನು ಸೆರೆಹಿಡಿಯಲಾಗಿದೆ. ಇದು ಪುನರಾವರ್ತಿತ ವಿದ್ಯಮಾನ, ಆದರೆ ನಗರದ ಕಡಲತೀರಗಳಲ್ಲಿ ಇದನ್ನು ಸೆರೆಹಿಡಿಯುವುದು ಕಷ್ಟ. ನಮ್ಮ ಕಡಲತೀರಗಳಲ್ಲಿ ಬೆಳಕಿನ ಮಾಲಿನ್ಯವೂ ಇದಕ್ಕೆ ಒಂದು ಕಾರಣವಾಗಿದೆ ಎಂದು ಕರಾವಳಿ ಸಂರಕ್ಷಣಾ ಪ್ರತಿಷ್ಠಾನದ ನಿರ್ದೇಶಕ ಶೌನಕ್‌ ಮೋದಿ ಹೇಳಿದ್ದಾರೆ.

ಸಮುದ್ರ ತಾಪಮಾನ ಏರಿಕೆ ಹಾಗೂ ಕೊಳಚೆಗಳು ಸಮುದ್ರಕ್ಕೆ ಸೇರುವುದು ಕೂಡ ಈ ವಿದ್ಯಾಮಾನಕ್ಕೆ ಒಂದು ಕಾರಣವಾಗಿದೆ ಇನ್ನುತ್ತಾರೆ ತಜ್ಞರು. ಅದರೂ ಈ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next