Advertisement

ಮುಂಬಯಿ ದಾಳಿಕೋರರ ಸುಮ್ಮನೆ ಬಿಡಲ್ಲ

06:00 AM Nov 27, 2018 | Team Udayavani |

ಮುಂಬಯಿ/ಭಿಲ್ವಾರಾ: ಮುಂಬಯಿ ಮೇಲೆ ದಾಳಿ ನಡೆಸಿದ ಉಗ್ರರನ್ನಾಗಲಿ, ತನಗೆ ದ್ರೋಹ ಬಗೆದ ದುರುಳರನ್ನಾಗಲಿ ಭಾರತ ಎಂದಿಗೂ ಮರೆಯದು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಸೂಕ್ತ ಸಂದರ್ಭ ಬಂದಾಗ ಆ ದಾಳಿಯ ಹಿಂದಿನ ಅಪರಾಧಿಗಳನ್ನು ಕಾನೂನಿನ ಮುಂದೆ ತಂದು ನಿಲ್ಲಿಸುವ ಕೆಲಸವನ್ನು ದೇಶ ಮಾಡಲಿದೆ ಎಂದು ಗುಡುಗಿದ್ದಾರೆ.

Advertisement

ವಿಧಾನಸಭೆ ಚುನಾವಣೆ ಕಾವೇರಿರುವ ರಾಜಸ್ಥಾನದ ಭಿಲ್ವಾರಾದಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಬೃಹತ್‌ ರ್ಯಾಲಿಯಲ್ಲಿ ಮಾತನಾಡಿದ ಅವರು, ಮುಂಬಯಿ ದಾಳಿಯ 10ನೇ ವರ್ಷದ ಕರಾಳತೆಯನ್ನು ನೆನಪಿಸಿಕೊಂಡರು. ಹುತಾತ್ಮರಾದ ಭದ್ರತಾ ಸಿಬಂದಿಯನ್ನು ಸ್ಮರಿಸಿದ ಪ್ರಧಾನಿ, ಇಡೀ ದೇಶ ಅಂಥ ಮಹಾನ್‌ ತ್ಯಾಗಿಗಳಿಗೆ ಆಭಾರಿಯಾಗಿದೆ ಎಂದರು.  ಮುಂಬಯಿ ದಾಳಿಕೋರರ ಬಗ್ಗೆ ಪಾಕಿಸ್ಥಾನವು ದ್ವಂದ್ವ ನೀತಿ ಅನುಸರಿಸುವುದನ್ನು ಬಿಟ್ಟು, ಅವರನ್ನು ಕಾನೂನಿನಡಿ ಶಿಕ್ಷೆಗೊಳಪಡಿಸಬೇಕೆಂದು ವಿದೇಶಾಂಗ ಸಚಿವಾಲಯ ಸೋಮವಾರ ಆಗ್ರಹಿಸಿದೆ. 

ಬಹುಮಾನ ಘೋಷಿಸಿದ ಅಮೆರಿಕ
2008ರ ಮುಂಬಯಿ ದಾಳಿಯಲ್ಲಿ ಭಾಗಿಯಾಗಿರುವ, ಆ ಷಡ್ಯಂತ್ರ ಹೆಣೆದವರು ಅಥವಾ ಕುಕೃತ್ಯಕ್ಕೆ ಯಾವುದೇ ರೀತಿಯ ಸಹಾಯ ಮಾಡಿರುವ ವ್ಯಕ್ತಿಗಳು, ಆ ಬಗ್ಗೆ ಮಾಹಿತಿಯುಳ್ಳ ವ್ಯಕ್ತಿಗಳು ಯಾವುದೇ ದೇಶದಲ್ಲಿದ್ದರೂ ಅಂಥವರ ಬಗ್ಗೆ ಮಾಹಿತಿ ನೀಡಿದವರಿಗೆ 35 ಕೋಟಿ ರೂ. ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿದೆ. ಇದೇ ವೇಳೆ, ಮುಂಬಯಿ ದಾಳಿಗೆ ಸಹಕಾರ ನೀಡಿದ ಯಾರೇ ಆಗಿರಲಿ ಅವರನ್ನು ಶಿಕ್ಷಿಸುವ ಮೂಲಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಧಿಸಿರುವ ಬಾಧ್ಯತೆಗೆ ಗೌರವ ಸಲ್ಲಿಸಬೇಕೆಂದು ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೊಂಪೊ ಪಾಕಿಸ್ಥಾನವನ್ನು ಮತ್ತು ವಿಶ್ವ ಸಮುದಾಯವನ್ನು ಆಗ್ರಹಿಸಿದ್ದಾರೆ. 

ದಾಳಿಯಲ್ಲಿ ಮಡಿದವರಿಗೆ ಸೋಮವಾರ ಗೌರವ ಸಲ್ಲಿಸಿ, ದಾಳಿಯನ್ನು ಸ್ಮರಿಸಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಉಗ್ರವಾದಿ ಗಳಿಗೆ ಆಶ್ರಯ ನೀಡುವ ರಾಷ್ಟ್ರಗಳನ್ನು ಜಾಗತಿಕ ಮುಖ್ಯವಾಹಿನಿಯಿಂದ ಎಲ್ಲ ರಾಷ್ಟ್ರಗಳೂ ಬಹಿಷ್ಕರಿಸಿ ದೂರವಿಡಬೇಕು ಎಂದು ಆಗ್ರಹಿಸಿದ್ದಾರೆ. ಇಂಥ ಅಮಾನವೀಯ ದಾಳಿಯ ವೇಳೆ ಪ್ರಾಣ ಒತ್ತೆಯಿಟ್ಟು ಹೋರಾಡಿದ ನಮ್ಮ ಭದ್ರತಾ ಪಡೆಯ ಸಿಬಂದಿಯ ಬಲಿದಾನ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು ಎಂದೂ ಆಶಿಸಿದ್ದಾರೆ.

ಮುಂಬಯಿಯಲ್ಲಿ  ಸಂಸ್ಮರಣಾ ದಿನ
ಮುಂಬಯಿಯ ಪೊಲೀಸ್‌ ಜಿಮ್‌ಖಾನಾದಲ್ಲಿರುವ ಮುಂಬಯಿ ದಾಳಿ ಸ್ಮಾರಕದಲ್ಲಿ 10ನೇ ಸಂಸ್ಮರಣಾ ದಿನ ಆಯೋಜಿಸಲಾಗಿತ್ತು. ಮುಂಜಾನೆಯೇ ಆಗಮಿಸಿದ ರಾಜ್ಯಪಾಲ ವಿದ್ಯಾಸಾಗರ್‌ ರಾವ್‌, ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಸಹಿತ ಹಲವು ಗಣ್ಯರು ದಾಳಿಯಲ್ಲಿ ಹುತಾತ್ಮರಾದ ಪೊಲೀಸರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅನಂತರ ಗಿರ್ಗಾಮ್‌ ಚೌಪಾಟಿಯಲ್ಲಿ ಹುತಾತ್ಮ ತುಕಾರಾಂ ಓಂಬಳೆ ಅವರ ಸ್ಮಾರಕಕ್ಕೂ ಪುಷ್ಪಗುತ್ಛವಿರಿಸಿ ಗೌರವ ನಮನ ಸಲ್ಲಿಸಿದರು. ದಾಳಿಯ ದಿನ, ಇದೇ ಜಾಗದಲ್ಲಿ ಗುಂಡಿನ ದಾಳಿಯಿಂದ ಜರ್ಝರಿತರಾಗಿದ್ದ ಪೊಲೀಸ್‌ ಅಧಿಕಾರಿ ಓಂಬಳೆ ಅವರು ಉಗ್ರ ಕಸಬ್‌ನನ್ನು ಜೀವಂತವಾಗಿ ಹಿಡಿದು ಪೊಲೀಸರಿಗೆ ಒಪ್ಪಿಸಿ ಹುತಾತ್ಮರಾಗಿದ್ದರು. ಜತೆಗೆ, ದಾಳಿಗೊಳಗಾದ ನಾರಿಮನ್‌ ಹೌಸ್‌ನಲ್ಲಿನ ಸ್ಮಾರಕದ ಮೊದಲ ಹಂತವನ್ನು ಉದ್ಘಾಟಿಸಲಾಯಿತು. ಇಲ್ಲಿ ಅಸುನೀಗಿದ ಪ್ರತಿಯೊಬ್ಬರ ಹೆಸರನ್ನೂ ಕೆತ್ತಲಾಗಿದ್ದು, ಅದನ್ನು ಲೋಕಾರ್ಪಣೆ ಮಾಡಲಾಯಿತು. ದಿಲ್ಲಿಯಲ್ಲಿ ನಡೆದ ದಾಳಿಯ 10ನೇ ಸಂಸ್ಮರಣೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next