Advertisement

ಮುಂಬೈ,ಚೆನ್ನೈ ತಂಡಗಳೇ ಮೆರೆಯುವುದೇಕೆ?

08:59 AM May 19, 2019 | Team Udayavani |

12ನೇ ಐಪಿಎಲ್‌ ಹಣಾಹಣಿ ಅತ್ಯಂತ ರೋಚಕವಾಗಿ ಮುಗಿದಿದೆ. ಮುಂಬೈ ಕೇವಲ ಒಂದು ರನ್‌ ಅಂತರದಿಂದ ಚೆನ್ನೈಗೆ ಸೋಲುಣಿಸಿ ದಾಖಲೆ 4ನೇ ಸಲ ಟ್ರೋಫಿ ಎತ್ತಿದ್ದು ಈಗ ಇತಿಹಾಸ. ಕಳೆದ 3 ವರ್ಷಗಳ, ಅಂದರೆ 2017ರಿಂದ ಮೊದಲ್ಗೊಂಡು 2019ರವರೆಗಿನ ಐಪಿಎಲ್‌ ಇತಿಹಾಸವನ್ನು ಗಮನಿಸಿದರೆ ಕೇವಲ ಮುಂಬೈ ಮತ್ತು ಚೆನ್ನೈ ತಂಡಗಳೇ ಚಾಂಪಿಯನ್‌ ಆಗಿ ಮೂಡಿಬಂದಿರುವುದು ಗಮನಾರ್ಹ. ಅದಕ್ಕಾಗಿಯೇ ಇರಬೇಕು, ಫೈನಲ್‌ ಬಳಿಕ ಪ್ರತಿಕ್ರಿಯಿಸಿದ ಧೋನಿ, ಇದು ಸೋಲಲ್ಲ, ನಾವು ಟ್ರೋಫಿಯನ್ನು ಪಾಸ್‌ ಮಾಡಿಕೊಂಡೆವು’ ಎಂದು ತಮಾಷೆಯಾಗಿ ಹೇಳಿದ್ದರು.

Advertisement

3 ವರ್ಷದಿಂದ ಇಬ್ಬರದೇ ಮೇಲುಗೈ
ಇದು ನಿಜ. 2017ರಲ್ಲಿ ಮುಂಬೈ ಕೇವಲ ಒಂದು ರನ್‌ ಅಂತರದಿಂದ ಪುಣೆಯನ್ನು ಮಣಿಸಿ 3ನೇ ಸಲ ಪ್ರಶಸ್ತಿ ಜಯಿಸಿತ್ತು. ಗಮನಾರ್ಹ ಸಂಗತಿಯೆಂದರೆ, ಅಂದು ಚೆನ್ನೈ ನಿಷೇಧಕ್ಕೊಳಗಾಗಿತ್ತು. ಕಳೆದ ವರ್ಷ ನಿಷೇಧ ಪೂರೈಸಿ ಮರಳಿದ ಬೆನ್ನಲ್ಲೇ ಚೆನ್ನೈ ಮತ್ತೆ ಕಿರೀಟ ಏರಿಸಿಕೊಂಡಿತು. ಈ ಬಾರಿ ಮರಳಿ ಮುಂಬೈ ಸರದಿ. ಹಾಗಾದರೆ ಐಪಿಎಲ್‌ ಗೆಲ್ಲಬಲ್ಲ ಸಾಮರ್ಥ್ಯವುಳ್ಳ ಬೇರೆ ತಂಡಗಳಿಲ್ಲವೇ? ಈ ಎರಡು ತಂಡಗಳ ಗೆಲುವಿನ ರಹಸ್ಯವಾದರೂ ಏನು? ಇದು ಕ್ರಿಕೆಟ್‌ ಅಭಿಮಾನಿಗಳನ್ನು ಕಾಡುವ ಪ್ರಶ್ನೆ.

ರೋಹಿತ್‌ ಸಮರ್ಥ ನಾಯಕತ್ವ
ರೋಹಿತ್‌ ಶರ್ಮ ಅವರ ಸಮರ್ಥ ಹಾಗೂ ಶಾಂತ ನಾಯಕತ್ವ ಮುಂಬೈ ಯಶಸ್ಸಿನ ಪ್ರಮುಖ ಅಂಶಗಳಲ್ಲೊಂದು. ನಾಯಕತ್ವದ ವಿಚಾರದಲ್ಲಿ ರೋಹಿತ್‌ ಧೋನಿಗಿಂತಲೂ ಕೂಲ್‌! ಚೆನ್ನೈ ಮತ್ತು ಮುಂಬೈ ಎರಡೂ ಐಪಿಎಲ್‌ನ ಸ್ಥಿರ ತಂಡ’ಗಳೆಂಬ ಹೆಗ್ಗಳಿಕೆ ಪಡೆದಿವೆ. 2013ರಿಂದ ಮೊದಲ್ಗೊಂಡು ಈ 7 ವರ್ಷಗಳ ಅವಧಿಯಲ್ಲಿ ಮುಂಬೈ 4 ಸಲ ಐಪಿಎಲ್‌ ಚಾಂಪಿಯನ್‌ ಆಗಿರುವುದೇ ಇದಕ್ಕೆ ಸಾಕ್ಷಿ. ಅರ್ಥಾತ್‌, ವರ್ಷ ಬಿಟ್ಟು ವರ್ಷ ಮುಂಬೈ ಕಿರೀಟ ಏರಿಸಿಕೊಳ್ಳುತ್ತಲೇ ಬಂದಿದೆ. ರೋಹಿತ್‌ ಪಡೆಯ ಪಾಲಿಗೆ ಇದೊಂದು ಟ್ರೆಂಡ್‌ ಆಗಿದೆ! ಹಾಗೆಯೇ ಚೆನ್ನೈ. ಅತ್ಯಧಿಕ 8 ಐಪಿಎಲ್‌ ಫೈನಲ್‌ಗ‌ಳಲ್ಲಿ ಆಡಿದ ದಾಖಲೆ ಹೊಂದಿದೆ. ಕೇವಲ 3 ಸಲ ಚಾಂಪಿಯನ್‌ ಆದರೂ ನಿರಂತರವಾಗಿ ಪ್ರಶಸ್ತಿ ಸುತ್ತಿನತ್ತ ಓಟ ಬೆಳೆಸುತ್ತ ಸ್ಥಿರ ಪ್ರದರ್ಶನ ಕಾಯ್ದುಕೊಂಡು ಬಂದಿದೆ. 2 ವರ್ಷಗಳ ನಿಷೇಧ ಮುಗಿಸಿ ಬಂದೊಡನೆಯೇ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದು ಚೆನ್ನೈ ಹೆಗ್ಗಳಿಕೆ.

ಹೊಂದಾಣಿಕೆಯೇ ಮುಖ್ಯಾಂಶ
ಎರಡೂ ತಂಡಗಳನ್ನು ಸಮೀಕರಿಸಿ ಹೇಳುವುದಾದರೆ ಹೊಂದಾಣಿಕೆಯ ಆಟ ಇವುಗಳ ಮುಖ್ಯಾಂಶ. ಬಹಳ ವರ್ಷಗಳಿಂದ ಅನೇಕ ಮಂದಿ ಖಾಯಂ ಸದಸ್ಯರು ಒಟ್ಟಿಗೇ ಆಡುತ್ತಿರುವುದರಿಂದ ಇವರ ನಡುವೆ ಗೊಂದಲಕ್ಕೆ ಅವಕಾಶವೇ ಇಲ್ಲ.

ಸಮತೋಲಿತ ಅನುಭವಿಗಳ ಪಡೆ
ಎರಡೂ ಅತ್ಯಂತ ಸಮತೋಲಿತ ತಂಡಗಳು. ಅನುಭವಿಗಳು ಜಾಸ್ತಿ. ಇವರೇ ತಂಡದ ಆಸ್ತಿ. ಮೂಲತಃ ಟಿ20 ಹುಚ್ಚಾಪಟ್ಟೆ ಬ್ಯಾಟಿಂಗಿನ ಆಡುಂಬೊಲ. ಆದರೆ ಮುಂಬೈ, ಚೆನ್ನೈ ಶಿಸ್ತಿನ ಹಾಗೂ ಲೆಕ್ಕಾಚಾರದ ಆಟಕ್ಕೆ ಹೆಸರುವಾಸಿ. ಸೂಕ್ತ ಸಂದರ್ಭಗಳಲ್ಲಿ ತಂಡದ ಅಗತ್ಯವನ್ನು ಮನಗಂಡು ಆಡುವುದೊಂದು ಹೆಚ್ಚುಗಾರಿಕೆ.

Advertisement

ಒಬ್ಬರನ್ನೇ ಅವಲಂಬಿಸಿಲ್ಲ
ಕೆಲವು ತಂಡಗಳಿರುತ್ತವೆ…. ಅಲ್ಲಿ ಕೊಹ್ಲಿ, ಎಬಿಡಿ, ಗೇಲ್‌, ರಸೆಲ್‌, ಪಂತ್‌ ಬ್ಯಾಟ್‌ ಬೀಸಿದರಷ್ಟೇ ಅವುಗಳಿಗೆ ಗೆಲುವು, ಉಳಿಗಾಲ. ಆದರೆ ಮುಂಬೈ, ಚೆನ್ನೈಗಳಲ್ಲಿ ಈ ಸ್ಥಿತಿ ಇಲ್ಲ. ಇಲ್ಲಿ ಆಪತ್ಕಾಲಕ್ಕೆ ಎಲ್ಲರೂ ನೆರವಿಗೆ ನಿಲ್ಲುತ್ತಾರೆ. ಹಾಗೆಯೇ ಆಡಳಿತ ಮಂಡಳಿಗಳ ಬೆಂಬಲ ದೊಡ್ಡ ಮಟ್ಟದಲ್ಲಿ ಸಿಗುತ್ತಿದೆ. “ಅಂಬಾನಿ ತಂಡ’ ಮೈದಾನದಲ್ಲೇ ಬೀಡುಬಿಟ್ಟಿರುತ್ತದೆ. ಗೆದ್ದರೂ, ಸೋತರೂ ಬೆನ್ನು ತಟ್ಟುವುದನ್ನು ಮರೆಯುವುದಿಲ್ಲ. ತಂಡ ನಿರಂತರ ಮೇಲುಗೈ ಸಾಧಿಸದೇ ಉಳಿದೀತಾದರೂ ಹೇಗೆ?

ಫೈನಲ್‌ ಹಾದಿ ಸಲೀಸು
ಈವರೆಗಿನ ಹನ್ನೆರಡೂ ಐಪಿಎಲ್‌ ಫೈನಲ್‌ಗ‌ಳನ್ನು ಗಮನಿಸಿ. ಇಲ್ಲಿ ಚೆನ್ನೈ, ಮುಂಬೈ ತಂಡಗಳದ್ದೇ ಪ್ರಾಬಲ್ಯ. 9 ಫೈನಲ್‌ಗ‌ಳಲ್ಲಿ ಒಂದೋ ಚೆನ್ನೈ, ಇಲ್ಲವೇ ಮುಂಬೈ ಇದ್ದೇ ಇದೆ. 4 ಸಲ ಈ ತಂಡಗಳೇ ಫೈನಲ್‌ನಲ್ಲಿ ಪರಸ್ಪರ ಎದುರಾಗಿವೆ. ಬರೀ ಗೆಲುವಷ್ಟೇ ಅಲ್ಲ, ಗೆಲುವಿನ ರೀತಿ ಹಾಗೂ ಗೆಲುವಿನ ಲಯವೂ ಚಾಂಪಿಯನ್ನರನ್ನು ರೂಪಿಸುವಲ್ಲಿ ಮುಖ್ಯ ಪಾತ್ರವಹಿಸುತ್ತವೆ ಎಂಬುದಕ್ಕೆ ಈ 2 ತಂಡಗಳಿಗಿಂತ ಉತ್ತಮ ನಿದರ್ಶನ ಬೇಕಿಲ್ಲ.

-ಪ್ರೇಮಾನಂದ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next