ಮುಂಬಯಿ: ನಗರದಲ್ಲಿ ಕೃಷ್ಣ ಜನ್ಮಾಷ್ಟಮಿ ಬಳಿಕದ ಸಂಭ್ರಮದ ‘ದಹಿ ಹಂಡಿ'(ಮೊಸರು ಕುಡಿಕೆ) ಆಚರಣೆಯ ಭಾಗವಾಗಿ ಮೊಸರು ಕುಡಿಕೆ ಉತ್ಸವದಲ್ಲಿ ಮಾನವ ಪಿರಮಿಡ್‌ಗಳನ್ನು ರೂಪಿಸುವಲ್ಲಿ ತೊಡಗಿದ್ದ ಒಟ್ಟು 245 ಯುವಕರು (ಗೋವಿಂದಾಸ್) ಗಾಯಗೊಂಡಿದ್ದಾರೆ ಎಂದು ನಾಗರಿಕ ಅಧಿಕಾರಿಗಳು ಬುಧವಾರ(ಆ 28) ತಿಳಿಸಿದ್ದಾರೆ.
ಈ ಗಾಯಾಳುಗಳಲ್ಲಿ 32 ಮಂದಿಯನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, 213 ಮಂದಿಯನ್ನು ಚಿಕಿತ್ಸೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೊಸರು ಕುಡಿಕೆ ಉತ್ಸವದಲ್ಲಿ ಲಕ್ಷಾಂತರ ಮಂದಿ ಭಾಗವಹಿಸಿದ್ದು ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಲ್ಲಿ ಸಾಂಪ್ರದಾಯಿಕವಾಗಿ ಸಂಭ್ರಮದಿಂದ ಆಚರಿಸಲಾಗುತ್ತದೆ.
ಮೊಸರು ತುಂಬಿದ ಮಣ್ಣಿನ ಪಾತ್ರೆಗಳನ್ನು ಒಡೆಯಲು ಸಾಹಸ ತೋರಿ ಬಹು-ಹಂತದ ಮಾನವ ಪಿರಮಿಡ್‌ಗಳನ್ನು ರಚಿಸುವ ವೇಳೆ ಹಲವಾರು ಯುವಕರು ಕೆಳ ಬಿದ್ದು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡಿರುವ ಹನ್ನೊಂದು ಮಂದಿಯನ್ನು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಡೆಸುತ್ತಿರುವ ಕೆಇಎಂ ಆಸ್ಪತ್ರೆಗೆ, ತಲಾ ನಾಲ್ವರನ್ನು ರಾಜವಾಡಿ ಮತ್ತು ಸಿಯಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಸೌಲಭ್ಯದಲ್ಲಿ, ಒಬ್ಬರನ್ನು ಜೆಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉತ್ಸವದ ಸಂದರ್ಭದಲ್ಲಿ ಭದ್ರತೆ ಮತ್ತು ಕಾನೂನು ಸುವ್ಯವಸ್ಥೆಗಾಗಿ ಮಹಾನಗರದಲ್ಲಿ 11,000 ಕ್ಕೂ ಹೆಚ್ಚು ಪೊಲೀಸ್ ಸಿಬಂದಿಗಳನ್ನು ನಿಯೋಜಿಸಲಾಗಿತ್ತು.