Advertisement

ಮೂಳೂರು ತೊಟ್ಟಂ ಪರಿಸರದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಶಾಸಕರ ಭೇಟಿ ; ಪರಿಶೀಲನೆ

09:44 PM Jul 05, 2022 | Team Udayavani |

ಕಾಪು : ಕಾಪು ಪುರಸಭಾ ವ್ಯಾಪ್ತಿಯ ಮೂಳೂರು ತೊಟ್ಟಂ ಪರಿಸರದಲ್ಲಿ ಮಂಗಳವಾರವೂ ಕಡಲ್ಕೊರೆತ ತೀವ್ರಗೊಂಡಿದ್ದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮತ್ತು ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಸ್ಥಳಕ್ಕೆ ಭೇಟಿ ನೀಡಿ, ಹಾನಿ ಪರಿಶೀಲನೆ ನಡೆಸಿದರು.

Advertisement

ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ, ಹಾನಿ ಪರಿಶೀಲಿಸಿದ ಜಿಲ್ಲಾಽಕಾರಿ ಸ್ಥಳೀಯರ ಜೊತೆಗೆ ಮಾತುಕತೆ ನಡೆಸಿದರು. ಶಾಸಕರ ಜೊತೆಗೆ ಸುದೀರ್ಘವಾಗಿ ಚರ್ಚೆ ನಡೆಸಿ, ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಸ್ಥಳದಲ್ಲಿ ತುರ್ತಾಗಿ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತಾಗಿ ಸಮಾಲೋಚಿಸಿದರು.

ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೋಡೆಯೇ ಸೂಕ್ತ ಪರಿಹಾರ : ಡಿಸಿ
ಈ ಸಂದರ್ಭ ಜಿಲ್ಲಾಧಿಕಾರಿ ಕೂರ್ಮಾ ರಾವ್ ಮಾತನಾಡಿ, ಕಡಲ್ಕೊರೆತ ಸಮಸ್ಯೆಯು ಕರಾವಳಿ ಭಾಗದ ಜನರನ್ನು ಪ್ರತೀ ವರ್ಷ ಮಳೆಗಾಲದಲ್ಲಿ ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರವೇ ಸೂಕ್ತವಾಗಿದ್ದು ತಾಂತ್ರಿಕ ವಿಭಾಗದ ಅಧಿಕಾರಿಗಳಿಂದ ವಾಸ್ತವಿಕವಾದ ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳಲಾಗಿದೆ. ಜಿಲ್ಲಾಡಳಿತ ಮತ್ತು ಸರಕಾರದ ಮಟ್ಟದಲ್ಲೂ ಶಾಶ್ವತ ತಡೆಗೋಡೆ ರಚನೆ ಬಗ್ಗೆ ಚಿಂತನೆ ನಡೆಯುತ್ತಿದ್ದು ಮೂಳೂರಿನ ಕಡಲ್ಕೊರೆತ ಪ್ರದೇಶದಲ್ಲಿ ತುರ್ತಾಗಿ ತಾತ್ಕಾಲಿಕ ತಡೆಗೋಡೆ ರಚನೆಯ ಮೂಲಕವಾಗಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ತುರ್ತು ತಾತ್ಕಾಲಿಕ ತಡೆಗೋಡೆ ರಚನೆಗೆ ಕ್ರಮ : ಶಾಸಕ ಲಾಲಾಜಿ ಆರ್. ಮೆಂಡನ್
ಶಾಸಕ ಲಾಲಾಜಿ ಆರ್. ಮೆಂಡನ್ ಮಾತನಾಡಿ, ಕಾಪು ಕ್ಷೇತ್ರದ 25 ಕಿ.ಮೀ. ಉದ್ದದ ಕಡಲ ತೀರದಲ್ಲಿ ಕಾಪು, ಪೊಲಿಪು, ಕೈಪುಂಜಾಲು, ಮೂಳೂರು, ತೊಟ್ಟಂ, ಉಚ್ಚಿಲ, ಎರ್ಮಾಳು, ಪಡುಬಿದ್ರಿ ಸಹಿತ 7-8 ಕಡೆಗಳಲ್ಲಿ ಪ್ರತೀ ವರ್ಷ ಕಡಲ್ಕೊರೆತದ ತೀವ್ರತೆ ಕಂಡು ಬರುತ್ತಿದೆ. ಕಡಲ್ಕೊರೆತ ತಡೆಗಾಗಿ ವಿವಿಧೆಡೆ ಎಡಿಬಿ ಯೋಜನೆಯಡಿ ಶಾಶ್ವತ ತಡೆಗೋಡೆ ರಚನೆ ಕಾಮಗಾರಿ ನಡೆಯುತ್ತಿದೆ. ಮೂಳೂರಿನ 250 – 300 ಮೀಟರ್ ಪ್ರದೇಶದಲ್ಲಿ ತುರ್ತಾಗಿ ತಡೆಗೋಡೆ ರಚನೆ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಮತ್ತು ಮೀನುಗಾರಿಕಾ ಸಚಿವರೊಂದಿಗೆ ಸಮಾಲೋಚಿಸಿ, ತಡೆಗೋಡೆ ರಚಿಸಲು ಅನುದಾನ ಬಿಡುಗಡೆಗೊಳಿಸುವಂತೆ ಸರಕಾರವನ್ನು ಒತ್ತಾಯಿಸಲಾಗಿದೆ. ಪರಿಸ್ಥಿತಿಯ ಗಂಭೀರತೆಯನ್ನು ನೋಡಿಕೊಂಡು ಅಗತ್ಯವಿರುವಲ್ಲಿ ತುರ್ತು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.

ಕಾಪು ತಹಶೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಕಂದಾಯ ನೀರಿಕ್ಷಕ ಸುಧಿರ್ ಕುಮಾರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ್ ನಾವಡ, ಮೀನುಗಾರಿಕೆ ಹಾಗೂ ಬಂದರು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಉದಯ ಕುಮಾರ್, ಸಹಾಯಕ ಇಂಜಿನಿಯರ್ ಜಯರಾಜ್, ಪೊಲೀಸ್ ಉಪನಿರೀಕ್ಷಕ ಶ್ರೀಶೈಲ ಮುರಗೋಡ, ಪ್ರಮುಖರಾದ ಗೋಪಾಲಕೃಷ್ಣ ರಾವ್, ಚಂದ್ರಪ್ಪ ಕುಕ್ಯಾನ್, ಮಹಾಲಿಂಗ ಅಂಚನ್, ಧಿರೇಶ್ ಕುಮಾರ್, ಸುಭಾಷಿಣಿ, ವಿಕೇಶ್, ವಾಸು ಬಂಗೇರ, ಸುಕೇಶ್ ಕುಮಾರ್, ಸುಜಯ್ ಮೊದಲಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next