ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂದಾದರೂ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಮಾತಿಗೆ ಇದೀಗ ಹೊಸ ಬಲ ಬಂದಿದೆ. ಇಷ್ಟು ದಿನ ನಾಲ್ಕು ಜನರು ಒಂದೆಡೆ ಸೇರಿದಾಗಲೆಲ್ಲಾ ಕೇಳಿ ಬರುತ್ತಿದ್ದ ಒತ್ತಾಯ ಇದೀಗ ಆಂದೋಲನದ ರೂಪ ಪಡೆದಿದ್ದು, ಪ್ರಬಲ ಹೋರಾಟ ಮತ್ತು ಜನಾಭಿಪ್ರಾಯ ರೂಪಿಸಲು ಪ್ರಯತ್ನಗಳು ನಡೆಯುತ್ತಿವೆ.
ಉತ್ತರಕನ್ನಡ ಜಿಲ್ಲೆಯಲ್ಲಿ ಒಂದು ಸುಸಜ್ಜಿತವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಅತ್ಯಗತ್ಯವಿದ್ದು, ತ್ವರಿತವಾಗಿ ನಿರ್ಮಾಣ ಮಾಡಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಗ್ಯ ಸಚಿವ ಸುಧಾಕರ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು, ಈ ವಿಷಯದ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಇಂದೊಂದು ವಿಶೇಷ, ಅತ್ಯಗತ್ಯ ಪ್ರಕರಣವಾಗಿ ಪರಿಗಣಿಸಿ ಶೀಘ್ರದಲ್ಲಿಯೇ ಆಸ್ಪತ್ರೆ ನಿರ್ಮಿಸಲು ಅಗತ್ಯ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಸ್ಪಂದಿಸಿ ಟ್ವೀಟ್ ಮಾಡಿದ್ದಾರೆ. ಶಿರಸಿಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರು ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಅಗತ್ಯತೆಗೆ ಪಕ್ಷಾತೀತವಾಗಿ ಎಲ್ಲರೂ ಈವರೆಗೆ ವಿಫಲರಾಗಿದ್ದೇವೆ. ಇನ್ನು ಮುಂದೆ ಇದರ ನಿರ್ಮಾಣಕ್ಕೆ ಸರ್ವರ ನೆರವು ಅಗತ್ಯ ಎಂದರು.
ಇದನ್ನೂ ಓದಿ: ಹೇಮಂತ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು: ಅಧಿಪತ್ಯ ಸಾಧಿಸಲು ನಡೆಯಿತೇ ಹತ್ಯೆ?
ಶಿರಸಿಯಲ್ಲಿ 175 ಕೋಟಿ ರೂ. ವಿಶೇಷ ಸೌಲಭ್ಯಗಳ ಆಸ್ಪತ್ರೆ ಕಾಗೇರಿ ಅವರ ಪ್ರಯತ್ನದಿಂದ ನಿರ್ಮಾಣ ಆಗುತ್ತಿದ್ದು ,ಅದಕ್ಕೆ ಸಕಲ ಸೌಲಭ್ಯ ಕೊಡಬೇಕು. ಕಾರವಾರ ಅಥವಾ ಕುಮಟಾದಲ್ಲೂ ಇಂಥದೊಂದು ಆಸ್ಪತ್ರೆ ನಿರ್ಮಾಣ ಆಗಲಿ ಎಂಬ ಬೇಡಿಕೆ ಜನರಿಂದ ವ್ಯಕ್ತವಾಗಿದೆ.