ಬೆಂಗಳೂರು: ರಾಜ್ಯದಲ್ಲಿ ಸಂಭವಿಸುವ ನೈಸರ್ಗಿಕ ವಿಕೋಪ, ಅಗ್ನಿ ಅವಘಡ ಹಾಗೂ ಕಟ್ಟಡ ಕುಸಿತದಂತಹ ತುರ್ತು ಸಂದರ್ಭದಲ್ಲಿ ತ್ವರಿತ ಕಾರ್ಯಾಚರಣೆ ಹಾಗೂ ಸಿಬ್ಬಂದಿ ಕರೆದೊಯ್ಯಲು ಮಲ್ಟಿರೋಲ್ ಹೆಲಿಕಾಪ್ಟರ್ ಬಳಕೆಗೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮುಂದಾಗಿದೆ.
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಿಂದ ಮಲ್ಟಿರೋಲ್(ಬಹುಪಯೋಗಿ) ಹೆಲಿಕಾಪ್ಟರ್ ಅನ್ನು ಗುತ್ತಿಗೆ ಅಥವಾ ಬಾಡಿಗೆ ರೂಪದಲ್ಲಿ ಪಡೆಯುವ ಪ್ರಸ್ತಾವನೆಗೆ ಇದೀಗ ಚಾಲನೆ ಸಿಕ್ಕಿದೆ.
ಈ ಸಂಬಂಧ ಸರ್ಕಾರದ ಮುಖ್ಯಕಾರ್ಯದರ್ಶಿ, ಗೃಹ ಇಲಾಖೆಯ ಕಾರ್ಯದರ್ಶಿಗಳ ಜತೆ ನಾಲ್ಕೈದು ಬಾರಿ ಚರ್ಚೆ ನಡೆಸಿದ್ದು, ಎಚ್ಎಎಲ್ ಜತೆ ಒಪ್ಪಂದ ಮಾಡಿಕೊಳ್ಳಲು ಮೌಖೀಕ ಸೂಚನೆ ಸಿಕ್ಕಿದೆ. ಆದರೆ, ಖರೀದಿ ಮಾಡಲು ಸಾಧ್ಯವಿಲ್ಲ. ಸರ್ಕಾರದಿಂದ ಇಲಾಖೆಗೆ ಬರುವ ಅನುದಾನವನ್ನು ಆಧರಿಸಿ ಹೆಲಿಕಾಪ್ಟರ್ ಅನ್ನು ಗುತ್ತಿಗೆ ರೂಪದಲ್ಲಿ ಪಡೆಯಬೇಕೋ ಅಥವಾ ಬಾಡಿಗೆ ಆಧಾರದಲ್ಲಿ ಪಡೆಯಬೇಕೋ ಎಂಬ ಬಗ್ಗೆ ಲೆಕ್ಕಾಚಾರದ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.
ಹೀಗಾಗಿ ಎಚ್ಎಎಲ್ನ ಹಿರಿಯ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದು, ಸದ್ಯದಲ್ಲೇ ರಾಜ್ಯದಲ್ಲೂ ವಿದೇಶಿ ಮಾದರಿಯಲ್ಲಿ ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಚರಣೆ ನಡೆಯಲಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ವಿದೇಶಗಳಲ್ಲಿ ತುರ್ತು ಸೇವೆಗಳ ಇಲಾಖೆಗಳು ಸ್ವಂತ ಹೆಲಿಕಾಪ್ಟ್ರ್‌ಗಳನ್ನು ಹೊಂದಿದ್ದು, ಕ್ಷಣಾರ್ಧದಲ್ಲಿ ಸಿಬ್ಬಂದಿಯನ್ನು ಘಟನಾ ಸ್ಥಳಕ್ಕೆ ಕರೆದೊಯ್ದು ರಕ್ಷಣಾ ಕಾರ್ಯ ಮಾಡಬಹುದು. ಈ ಎಲ್ಲ ವಿಚಾರ ಗಮನದಲ್ಲಿಟ್ಟುಕೊಂಡು ಹೆಲಿಕಾಪ್ಟರ್ ಗುತ್ತಿಗೆ ಪಡೆಯಲು ನಿರ್ಧರಿಸಲಾಗಿದೆ. ಈಗಾಗಲೇ ಎರಡು ಬಾರಿ ಎಚ್ಎಎಲ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಹೆಲಿಕಾಪ್ಟರ್ ಗುತ್ತಿಗೆ ಹಾಗೂ ಅದರ ನಿರ್ವಹಣೆಯ ಖರ್ಚುವೆಚ್ಚಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಉಪಯೋಗ ಏನು?
ಹೆಲಿಕಾಪ್ಟರ್ ಗುತ್ತಿಗೆ ಅಥವಾ ಬಾಡಿಗೆ ಪಡೆಯುವುದರಿಂದ ಹತ್ತಾರು ಪ್ರಯೋಜನಗಳಿವೆ. ಬಹುಮಹಡಿ ಕಟ್ಟಡದಲ್ಲಿ ಅಗ್ನಿ ಅನಾಹುತ ಸಂಭವಿಸಿದಾಗ ಹೆಲಿಕಾಪ್ಟರ್‌ನಿಂದ ಮೇಲಿಂದಲೇ ಸಿಬ್ಬಂದಿ ಮತ್ತು ನೀರು ಕೊಂಡೊಯ್ಯಬಹುದು. ಎತ್ತರ ಪ್ರದೇಶದಿಂದ ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡಬಹುದು. ಬೇಸಿಗೆಯಲ್ಲಿ ಅರಣ್ಯಪ್ರದೇಶದಲ್ಲಿ ಸಂಭವಿಸುವ ಕಾಡ್ಗಿಚ್ಚು ನಿಯಂತ್ರಿಸಲು ಹೆಲಿಕಾಪ್ಟರ್ ಮೂಲಕವೇ ನೀರು ಹಾಕಬಹುದು. ನಷ್ಟದ ಪ್ರಮಾಣ ತಿಳಿಯಲು ವೈಮಾನಿಕ ಸರ್ವೇ, ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ರಕ್ಷಣಾ ಇಲಾಖೆ ಅನುಮತಿ ಪಡೆಯುವ ಅನಿವಾರ್ಯ ತಪ್ಪಲಿದೆ. ಮಳೆಗಾಲದಲ್ಲಿ ಉಂಟಾಗುವ ಪ್ರವಾಹದ ವೈಮಾನಿಕ ಸರ್ವೇ ಹಾಗೂ ತಗ್ಗು ಪ್ರದೇಶದಿಂದ ಸುರಕ್ಷಿತ ಪ್ರದೇಶಕ್ಕೆ ಜನರ ಸ್ಥಳಾಂತರ, ದೊಡ್ಡ ಮಟ್ಟದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆಗೆ ಸಿಬ್ಬಂದಿ ಕರೆದುಕೊಂಡು ಹೋಗಲು, ವೈದ್ಯಕೀಯ ನೆರವು ಹೀಗೆ ಬಹುಪಯೋಗಿಯಾಗಿ ಹೆಲಿಕಾಪ್ಟರ್ ಬಳಕೆಯಾಗಲಿದೆ.
-ಮೋಹನ್ ಭದ್ರಾವತಿ