ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ನಿರ್ದೇಶಕ ರಿಷಭ್ ಕೂಡಾ ತಮ್ಮ ಬೇಸರವನ್ನು ಹೊರಹಾಕಿದ್ದಾರೆ.
Advertisement
“ದಿ ವಿಲನ್’ ಚಿತ್ರದ ಮೂಲಕವೇ ಮಲ್ಟಿಪ್ಲೆಕ್ಸ್‌ಗಳು ಕನ್ನಡ ನಿರ್ಮಾಪಕರಿಗೆ ಕೊಡುತ್ತಿರುವ ಶೇಕಡಾವಾರು ಹೆಚ್ಚಿಸಬೇಕು ಎಂದು ಪ್ರೇಮ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದರು. ಆದರೆ, ಸ್ಥಳೀಯ ಮಾಲ್‌ಗಳು ಬಿಟ್ಟರೆ ಇತರೆ ಮಲ್ಟಿಪ್ಲೆಕ್ಸ್‌ಗಳು ಇದಕ್ಕೆ ಪ್ರತಿಕ್ರಿಯಿಸಲೇ ಇಲ್ಲ. ಈಗ ನಟ ಶಿವರಾಜಕುಮಾರ್ ಕೂಡಾ ಈ ಬಗ್ಗೆ ಸಿಟ್ಟಾಗಿದ್ದಾರೆ. ಬೇರೆ ಭಾಷೆಗೆ ಎಷ್ಟು ಶೇಕಡಾವಾರು ಕೊಡುತ್ತಿರೋ ಅಷ್ಟೇ ನಮಗೂ ಕೊಡಿ. ಇಲ್ಲದಿದ್ದರೆ ಎಲ್ಲರಿಗೂ ಒಂದೇ ಶೇಕಡಾವಾರು ನಿಗದಿ ಮಾಡಿ’ ಎಂದು ಶಿವಣ್ಣ ಹೇಳಿದ್ದಾರೆ.
ಯಾವುದಾದರೂ ರಾಜ್ಯಕ್ಕೆ ಹೋಗಿ ಬಿಝಿನೆಸ್ ಮಾಡುತ್ತೀರಿ ಅಂದರೆ ಅಲ್ಲಿನ ನೆಲ, ಜಲ, ಭಾಷೆ, ಸಂಸðƒತಿಗೆ ಗೌರವ ಕೊಡಬೇಕು. ಅದು ಬಿಟ್ಟು ನೀವು ಹೇಳಿದ್ದನ್ನು ಕೇಳಿಕೊಂಡು ಇರಲು ನಾವೇನು ಮುಟ್ಟಾಳ ರಲ್ಲ. ಬೇರೆ ಭಾಷೆಗಳಿಗೆ ಹೆಚ್ಚು ಶೇಕಡವಾರು ಕೊಟ್ಟು ಕನ್ನಡವನ್ನು ಕಡೆಗಣಿಸೋದು ಸರಿಯಲ್ಲ. ಅವರಿಗೆ ಎಷ್ಟು ಕೊಡುತ್ತೀರೋ ನಮಗೂ ಅಷ್ಟೇ ಕೊಡಿ.ಇಲ್ಲದಿದ್ದರೆ ಎಲ್ಲರಿಗೂ ಒಂದೇ ನಿಯಮ ಪಾಲಿಸಿ’ ಎಂದು ಖಡಕ್ ಆಗಿ ಹೇಳಿದ್ದಾರೆ. ಇದೇ ವೇಳೆ ಒಳ್ಳೆಯ, ಚೆನ್ನಾಗಿ ಹೋಗುತ್ತಿರುವ ಕನ್ನಡ ಸಿನಿಮಾಗಳನ್ನು ಏಕಾಏಕಿ ತೆಗೆದುಹಾಕುವ ಮಲ್ಟಿಪ್ಲೆಕ್ಸ್‌ಗಳ ವಿರುದ್ಧವೂ ಶಿವಣ್ಣ ಗರಂ ಆಗಿದ್ದಾರೆ. “ಸಿನಿಮಾ ಎಂದ ಮೇಲೆ ಸಿನಿಮಾ. ಅಲ್ಲಿ ಸಣ್ಣ ಸಿನಿಮಾ ದೊಡ್ಡ ಸಿನಿಮಾ ಎಂದಿಲ್ಲ. ಅದೆಷ್ಟೋ ಒಳ್ಳೆಯ ಹಾಗೂ ಚೆನ್ನಾಗಿ ಹೋಗುತ್ತಿರುವ ಸಿನಿಮಾಗಳ ಶೋಗಳನ್ನು ಮಲ್ಟಿಪ್ಲೆಕ್ಸ್‌ಗಳು ಏಕಾಏಕಿ ರದ್ದು ಮಾಡುತ್ತವೆ. ಇನ್ನು ಮುಂದೆ ಯಾರಿಗಾದರೂ ಈ ತರಹ ಆದರೆ
ಮೊದಲು ಹೋಗಿ ನಾನು ಪ್ರತಿಭಟಿಸುತ್ತೇನೆ. ಅದು ಯಾರದ್ದೇ ಸಿನಿಮಾ ಆಗಿರಲಿ. ಅವರು ಸಿನಿಮಾವನ್ನು 50 ಲಕ್ಷದಲ್ಲಿ ಮಾಡಿದ್ದಾರೋ ಒಂದು ಕೋಟಿ ಯಲ್ಲಿ ಮಾಡಿದ್ದಾರೋ ಅನ್ನೋದು ಮುಖ್ಯವಲ್ಲ. ಸಿನಿಮಾವನ್ನು ಜನ ಎಂಜಾಯ್ ಮಾಡುತ್ತಿದ್ದಾರಾ ಅನ್ನೋದಷ್ಟೇ ಮುಖ್ಯ. ಕನ್ನಡ ಸಿನಿಮಾಗಳ ಶೋ ರದ್ದು ಮಾಡುವ ಬದಲು ಬೇರೆ ಭಾಷೆಗೆ ಕೊಟ್ಟಿರುವ ಹೆಚ್ಚಿನ ಶೋಗಳನ್ನು ಕಡಿಮೆ ಮಾಡಿ ಬೇರೆಯವರಿಗೆ ಕೊಡಿ. ಈ ತರಹ ಹೊಂದಾಣಿಕೆ ಮಾಡಬೇಕೇ ಹೊರತು ಯಾರಿಗೂ ತೊಂದರೆ ಕೊಡಬಾರದು’ ಎಂದು ಶಿವಣ್ಣ ನೇರವಾಗಿ ಹೇಳಿದ್ದಾರೆ.
Related Articles
ಇತ್ತೀಚಿನ ದಿನದಲ್ಲಿ ಯಾವುದೇ ಸ್ಟಾರ್ ಇಲ್ಲದೇ ದೊಡ್ಡ ಮಟ್ಟದಲ್ಲಿ ಸುದ್ದಿ ಹಾಗೂ ಕಲೆಕ್ಷನ್ ಮಾಡಿದ ಸಿನಿಮಾ ಯಾವುದೆಂದರೆ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು – ಕೊಡುಗೆ ರಾಮಣ್ಣ ರೈ’ ಕಡೆಗೆ ಎಲ್ಲರೂ ಕೈ ತೋರಿಸುತ್ತಾರೆ. ರಿಷಭ್ ಶೆಟ್ಟಿ ನಿರ್ಮಾಣ, ನಿರ್ದೇಶನದ ಈ ಚಿತ್ರ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ಹೊಸ ಹೊಸ ಪ್ರೇಕ್ಷಕರು ಬಂದು ಸಿನಿಮಾ ನೋಡುತ್ತಿದ್ದಾರೆ. ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆದರೂ ರಿಷಭ್, ಮಲ್ಟಿಪ್ಲೆಕ್ಸ್‌ಗಳಲ್ಲಿ ಹೆಚ್ಚು ಶೋ ಪಡೆಯೋಕೆ ಕಷ್ಟಪಡುತ್ತಿದ್ದಾರಂತೆ.
Advertisement
ಅವರ ಕಣ್ಣೆದುರೇ ಪರಭಾಷಾ ಸಿನಿಮಾಗಳಿಗೆ ಅತಿ ಹೆಚ್ಚು ಥಿಯೇ ಟರ್, ಶೋ ಸಿಗುತ್ತಿರುವುದನ್ನು ನೋಡಿ ರಿಷಭ್‌ಗೆ ಬೇಸರವಾಗಿದೆ. ಈ ತರಹವಾದರೆ ಕನ್ನಡ ಸಿನಿಮಾಗಳ ಕಥೆಯೇನು ಎಂಬ ಪ್ರಶ್ನೆಯೊಂದಿಗೆ ರಿಷಭ್ 50ನೇ ದಿನದ ಸಂಭ್ರಮದ ವೇದಿಕೆಯಲ್ಲೇ ತಮ್ಮ ಬೇಸರವನ್ನೂ ತೋಡಿಕೊಂಡಿದ್ದಾರೆ. ಅದು ಅವರ ಮಾತಲ್ಲೇ …”ನಮ್ಮ ಸಿನಿಮಾದ ಇರುವ ಶೋಗಳು ಹೌಸ್‌ಫುಲ್ ಆಗ್ತಾ ಇವೆ. ಆದರೂ ನಮಗೆ ಹೆಚ್ಚಿನ ಶೋ ಸಿಗುತ್ತಿಲ್ಲ. ಆದರೆ, ಒಂದು ತೆಲುಗು ಸಿನಿಮಾಕ್ಕೆ 225 ಥಿಯೇಟರ್ ಸಿಗುತ್ತದೆ.
“ಕಿರಿಕ್ ಪಾರ್ಟಿ’ಯಂತಹ ಸಿನಿಮಾ ಮಾಡಿದ ನಂತರವೂ ನನಗೆ ಸಿಕ್ಕಿದ್ದು ಕೇವಲ 75 ಥಿಯೇಟರ್. ಒಂದು ತೆಲುಗು ಸಿನಿಮಾಕ್ಕೆ 250ಕ್ಕೂ ಹೆಚ್ಚು ಥಿಯೇಟರ್ ಇಲ್ಲಿ ಸಿಗುತ್ತದೆ ಮತ್ತು ನಮ್ಮಲ್ಲಿ ಸೂಪರ್‌ಸ್ಟಾರ್‌ಗಳ ಸಿನಿಮಾ ಯಾವ ಮಟ್ಟಕ್ಕೆ ರಿಲೀಸ್ ಮಾಡ್ತಾರೋ, ಆ ಮಟ್ಟಕ್ಕೆ ಬೇರೆ ಭಾಷೆಯ ಸಿನಿಮಾಗಳನ್ನು ಇಲ್ಲಿ ಬಿಡುಗಡೆ ಮಾಡುತ್ತಾರೆ. ಆ ಸಿನಿಮಾಗಳಿಗೆ ಅಷ್ಟೇ ಜನನೂ ಬರುತ್ತಾರೆ. ನಾವು ಥಿಯೇಟರ್ ವಿಸಿಟ್ ಮಾಡಿದಾಗ “ಟಗರು’ ಆದ ಮೇಲೆ “ರ್‍ಯಾಂಬೋ-2′ ಚೆನ್ನಾಗಿ ಹೋಯಿತು. ಆ ನಂತರ ಜನ ಬರುತ್ತಿರೋದು ನಿಮ್ಮ ಸಿನಿಮಾಕ್ಕೆ ಎಂದು ಥಿಯೇಟರ್‌ನವರು ಹೇಳಿದರು. ನನಗೆ ನಿಜಕ್ಕೂ ಆಶ್ಚರ್ಯವಾಯಿತು, ಜನ ಸಿನಿಮಾ ನೋಡೋದು ಬಿಟ್ಟಿದ್ದಾರಾ ಅಥವಾ ನಾವೇ ಒಳ್ಳೆಯಸಿನಿಮಾ ಕೊಡ್ತಾ ಇಲ್ವಾ ಎಂದು. ಇವತ್ತು ತೆಲುಗು ಸಿನಿಮಾ ರಿಲೀಸ್ ಆದಾಗ ಅದು ಎಲ್ಲಾ ಕಡೆಗೆ ಹೋಗುತ್ತದೆ. ಹಾಗಂತ ಕರ್ನಾಟಕದ ತುಂಬಾ ತೆಲುಗಿನವರೇ ಇಲ್ಲ. ಶೇ.40 ರಷ್ಟು ತೆಲುಗಿನವರು ನೋಡಿದರೂ, ಶೇ.60 ರಷ್ಟು ಕನ್ನಡದವರೇ ಹೋಗಿ ಸಿನಿಮಾ ನೋಡುತ್ತಿದ್ದಾರೆ. ನಮ್ಮ ಸಿನಿಮಾ ಚೆನ್ನಾಗಿದ್ದೂ, ಸ್ಕೋಪ್ ಇದ್ದೂ ಕೂಡಾ ಅದನ್ನು ಜನರಿಗೆ ತಲುಪಿಸೋಕೆ ತುಂಬಾ ಕಷ್ಟಪಡಬೇಕಾಗುತ್ತದೆ. ಸಿನಿಮಾ ಬಿಡುಗಡೆಯಾಗಿ 50 ದಿನವಾದರೂ ಇವತ್ತಿಗೂ ನಾವು ಪ್ರಮೋಶನ್ ನಿಲ್ಲಿಸಿಲ್ಲ, ಒಂಚೂರು ತಣ್ಣಗಾದ್ರೆ ಜನರಿಗೆ ರೀಚ್ ಆಗೋದಿಲ್ಲ ಎಂಬ ಭಯ. ಅದೇ ಬೇರೆ ಭಾಷೆಯ ಸಿನಿಮಾ ಚೆನ್ನಾಗಿದೆ ಅಂದ ಕೂಡಲೇ ಅದು ಬಾಯಿ ಮಾತು ಮೂಲಕ ರೀಚ್ ಆಗುವ ರೀತಿಯೇ ಬೇರೆ, ಅದಕ್ಕೆ ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿಗುವ ಶೋ, ಗೌರವವೇ ಬೇರೆ.
ಇದು ತುಂಬಾ ಬೇಸರದ ವಿಷಯ. ಹಾಗಂತ ನಾನು ಬೇರೆ ಭಾಷೆಯ ಸಿನಿಮಾಗಳನ್ನು ನೋಡಬಾರದು ಎಂದು ಹೇಳುವುದಿಲ್ಲ. ಸಿನಿಮಾಕ್ಕೆ ಭಾಷೆಯ ಹಂಗಿಲ್ಲ ನಿಜ. ಆದರೆ ನಮ್ಮ ಕನ್ನಡ ಸಿನಿಮಾಗಳಿಗೆ ಇಲ್ಲಿ ಎಷ್ಟು ಆದ್ಯತೆ ಸಿಗುತ್ತಿದೆ ಅನ್ನೋದು ಕೂಡಾ ಮುಖ್ಯ. ನಮ್ಮ ಸಿನಿಮಾಗಳಿಗೆ ಆದ್ಯತೆ ಕೊಟ್ಟರೆ ಒಳ್ಳೆಯದು’ ಎನ್ನುವುದು ರಿಷಭ್ ಮಾತು. ಶೇ.75 ಹೊಸ ಆಡಿಯನ್ಸ್;
ರಿಷಭ್ ಶೆಟ್ಟಿ ತಮ್ಮ “ಸರ್ಕಾರಿ ಶಾಲೆ’ಗೆ ಬಂದ ಪ್ರೇಕ್ಷಕರ ಕುರಿತಾಗಿ ಒಂದು ಸಮೀಕ್ಷೆ ನಡೆಸಿದ್ದಾರೆ. ಅದರಿಂದ ಅವರಿಗೆ ಗೊತ್ತಾಗಿರುವ ಸತ್ಯವೆಂದರೆ ಶೇ 75 ರಷ್ಟು ಹೊಸ ಪ್ರೇಕ್ಷಕರು ಬಂದು ತಮ್ಮ ಸಿನಿಮಾ ನೋಡಿರುವುದು. “ನಾವು ನಡೆಸಿದ ಸಮೀಕ್ಷೆ ಪ್ರಕಾರ, ಶೇ 5 ರೆಗ್ಯುಲರ್ ಆಡಿಯನ್ಸ್, ಶೇ 20 “ಕಿರಿಕ್ ಪಾರ್ಟಿ’ಯ ಆಡಿಯನ್ಸ್ ಹಾಗೂ ಶೇ 75 ಹೊಸ ಪ್ರೇಕ್ಷಕರು ಬಂದು ಸಿನಿಮಾ ನೋಡಿದ್ದಾರೆ. ವಯಸ್ಸಿನ ಮಿತಿ ಇಲ್ಲದೇ ಕುಟುಂಬ ಸಮೇತರಾಗಿ ಹೊಸ ಪ್ರೇಕ್ಷಕರು ಸಿನಿಮಾ ನೋಡಿದ್ದಾರೆ. ಅದೆಷ್ಟೋ ಮಂದಿ, “ನಾವು ಸಿನಿಮಾ ನೋಡಿ 20 ವರ್ಷ ಆಗಿತ್ತು. ಈಗ ನಿಮ್ಮ ಸಿನಿಮಾನೇ ನೋಡ್ತಾ ಇರೋದು’ ಎಂದರು’ ಎನ್ನುತ್ತಾ ತಮ್ಮ ಅನಿಸಿಕೆಯನ್ನು ಬಿಚ್ಚಿಡುತ್ತಾರೆ ರಿಷಭ್ ಶೆಟ್ಟಿ. ಪರಭಾಷೆಯಲ್ಲಿ ನಮ್ಮನ್ನು ಮೂಸಲ್ಲ:
ಪರಭಾಷೆಯಲ್ಲಿ ಕನ್ನಡ ಸಿನಿಮಾಗಳನ್ನು ಬಿಡುಗಡೆ ಮಾಡುವಾಗ ಎದುರಿಸುವ ಕಷ್ಟದ ಬಗ್ಗೆಯೂ ರಿಷಭ್ ಮಾತನಾಡಿದ್ದಾರೆ. “ನಮ್ಮಲ್ಲಿ ಸುಲಭವಾಗಿ ಬೇರೆ ಭಾಷೆಯ ಸಿನಿಮಾಗಳನ್ನು ಬಿಡುಗಡೆ ಮಾಡುತ್ತಾರೆ. ಅದೇ ರೀತಿ ನಾವು ಬೇರೆ ಭಾಷೆಗೆ ರಿಲೀಸ್ ಮಾಡಲು ಹೋದರೆ ಅಲ್ಲಿ ಯಾರೂ ನಮ್ಮನ್ನು ಮೂಸೋದಿಲ್ಲ. ಈ ಹಿಂದೆ ನೀನಾಸಂ ಸತೀಶ್ ಅವರು “ಅಯೋಗ್ಯ’ ಬಿಡುಗಡೆ ಸಮಯದಲ್ಲಿ ಹೊರರಾಜ್ಯಗಳಲ್ಲಿ ತಮಗಾದ ತೊಂದರೆಯನ್ನು ಹೇಳಿಕೊಂಡಿದ್ದರು. ಅದು ನಿಜಕ್ಕೂ ಸತ್ಯ. ನಾವು ಬೇರೆ ಬೇರೆ ಮಲ್ಟಿಪ್ಲೆಕ್ಸ್‌ಗಳಿಗೆ ಹೋಗಿ ಕಾಡಿ-ಬೇಡಿ, ಕೈ ಕಾಲು ಹಿಡಿದು ಅವರಲ್ಲಿ ಶೋಗಳನ್ನು ಕೇಳಬೇಕು. ಇಲ್ಲಿವರೆಗೆ ಹೊರರಾಜ್ಯಗಳಲ್ಲಿ ಬಿಡುಗಡೆಯಾಗಿರುವ ಕನ್ನಡ ಸಿನಿಮಾಗಳಲ್ಲಿ ಅತಿ ಹೆಚ್ಚು ಕಲೆಕ್ಷನ್ ಆಗಿರೋದು ನಮ್ಮ ಸಿನಿಮಾವಂತೆ. ಒಟ್ಟು ಬೇರೆ ರಾಜ್ಯಗಳ ಕಲೆಕ್ಷನ್ ತಗೊಂಡು ನೋಡಿದ್ರೆ ಕೇವಲ 35 ಲಕ್ಷ ರೂಪಾಯಿ ಕಲೆಕ್ಷನ್
ಆಗಿದೆ. ಅದೇ ನಮ್ಮಲ್ಲಿ ಬೇರೆ ಭಾಷೆಯ ಸಿನಿಮಾಗಳ ಒಂದೆರಡು ಶೋಗಳಲ್ಲಿ ಅಷ್ಟು ಕಲೆಕ್ಷನ್ ಬರುತ್ತದೆ. ನಮ್ಮ ಸಿನಿಮಾ ಚೆನ್ನಾಗಿದೆ ಎಂದು ಗೊತ್ತಾದ ನಂತರವೂ ನಾವು ಒದ್ದಾಡಬೇಕು. ಕುಟುಂಬ ಸಮೇತ ಜನ ಬಂದು ಸಿನಿಮಾ ನೋಡುವಂತಾಗಲು ಇನ್ನೇನೂ ಮಾಡಬೇಕೋ ಗೊತ್ತಿಲ್ಲ. ಗಿಮಿಕ್ ಮಾಡಿ, ದೊಡ್ಡ ಬ್ಯಾಂಗ್ ಜೊತೆ ಬರಬೇಕೇನೊ….. ನಮ್ಮ ಕನ್ನಡ ಸಿನಿಮಾ ಉಳಿಯಬೇಕಾದರೆ ಮಂಡಳಿ, ಸರ್ಕಾರ ಕ್ರಮತೆಗೆದುಕೊಳ್ಳಬೇಕು. ಆಗಷ್ಟೇ ಒಳ್ಳೆಯ ಸಿನಿಮಾ ಬರಲು ಸಾಧ್ಯ’ ಎನ್ನುವುದು ರಿಷಭ್ ಮಾತು.