Advertisement

ಮಕ್ಕಳಲ್ಲಿ ಕೋವಿಡ್‌ ಬಳಿಕ ಬಹುಅಂಗ ವ್ಯವಸ್ಥೆಯ ಉರಿಯೂತ ಕಾಯಿಲೆ

11:01 PM Dec 11, 2021 | Team Udayavani |

ಮಕ್ಕಳಲ್ಲಿ ಕೋವಿಡ್‌ ಬಳಿಕ ಬಹುಅಂಗ ವ್ಯವಸ್ಥೆಯ ಉರಿಯೂತ ಕಾಯಿಲೆ (ಪೋಸ್ಟ್‌ ಕೋವಿಡ್‌ ಮಲ್ಟಿಸಿಸ್ಟಂ ಇನ್‌ಫ್ಲಮೇಟರಿ ಸಿಂಡ್ರೋಮ್‌ ಇನ್‌ ಚಿಲ್ಡ್ರನ್‌-ಎಂಐಎಸ್‌-ಸಿ) ಎಂಬುದು ಒಂದು ಗಂಭೀರ ಅನಾರೋಗ್ಯವಾಗಿದ್ದು, ಕೊರೊನಾ ವೈರಾಣು ಕಾಯಿಲೆ 2019 (ಕೋವಿಡ್‌-19) ಜತೆಗೆ ಸಂಬಂಧ ಹೊಂದಿರುವುದಾಗಿ ಕಂಡುಬರುತ್ತಿದೆ. ಕೋವಿಡ್‌-19 ಸೋಂಕಿಗೆ ಒಳಗಾದ ಬಹುತೇಕ ಮಕ್ಕಳು ಲಘು ರೋಗಲಕ್ಷಣಗಳನ್ನಷ್ಟೇ ಹೊಂದಿರುತ್ತಾರೆ. ಆದರೆ ಎಂಐಎಸ್‌-ಸಿ ಬೆಳೆಸಿಕೊಳ್ಳುವ ಮಕ್ಕಳಲ್ಲಿ ಹೃದಯ, ಶ್ವಾಸಕೋಶಗಳು, ರಕ್ತನಾಳಗಳು, ಮೂತ್ರಪಿಂಡಗಳು, ಮಿದುಳು, ಚರ್ಮ ಅಥವಾ ಕಣ್ಣಿನಂತಹ ಕೆಲವು ಅಂಗಗಳು ತೀವ್ರವಾಗಿ ಉರಿಯೂತಕ್ಕೆ ಒಳಗಾಗುತ್ತವೆ.

Advertisement

ಬಹುಅಂಗ ವ್ಯವಸ್ಥೆಯ ಉರಿಯೂತ ಕಾಯಿಲೆ (ಎಂಐಎಸ್‌) ಮಕ್ಕಳು (ಎಂಐಎಸ್‌-ಸಿ) ಮತ್ತು ವಯಸ್ಕ (ಎಂಐಎಸ್‌-ಎ)ರನ್ನು ಬಾಧಿಸಬಹುದಾಗಿದೆ. ಎಂಐಎಸ್‌-ಸಿ ಎಂಬುದು ಕೋವಿಡ್‌-19ನ ಒಂದು ಅಪರೂಪದ ಸಂಕೀರ್ಣ ಸಮಸ್ಯೆ; ಆದರೆ ಗಂಭೀರವಾಗಿರಬಲ್ಲುದು. ಇದು ಮಾರಣಾಂತಿಕವೂ ಆಗಬಹುದು; ಆದರೆ ಈ ಅನಾರೋಗ್ಯ ಪತ್ತೆಯಾದ ಮಕ್ಕಳಲ್ಲಿ ಬಹುತೇಕರು ವೈದ್ಯಕೀಯ ಆರೈಕೆಯೊಂದಿಗೆ ಚೇತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಮಕ್ಕಳನ್ನು ಇದು ತೀವ್ರವಾಗಿ ಬಾಧಿಸುತ್ತದೆ. ಆದರೆ ಈ ಅನಾರೋಗ್ಯ ಸ್ಥಿತಿ ಪತ್ತೆಯಾದ ಮಕ್ಕಳಲ್ಲಿ ಅನೇಕ ಮಂದಿ ಒಂದೋ ಹಿಂದೆ ಕೋವಿಡ್‌-19 ಸೋಂಕಿಗೆ ಒಳಗಾಗಿರುತ್ತಾರೆ ಅಥವಾ ಕೋವಿಡ್‌-19 ಸೋಂಕುಪೀಡಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುತ್ತಾರೆ. ಮಕ್ಕಳಲ್ಲಿ ಕೋವಿಡ್‌ ಬಳಿಕ ಬಹುಅಂಗ ವ್ಯವಸ್ಥೆಯ ಉರಿಯೂತ ಕಾಯಿಲೆ (ಎಂಐಎಸ್‌-ಸಿ)ಯನ್ನು ಅಮೆರಿಕ ಮತ್ತು ಇಂಗ್ಲಂಡ್‌ಗಳ ಮಕ್ಕಳ ಆಸ್ಪತ್ರೆಗಳಲ್ಲಿ 2020ರ ಎಪ್ರಿಲ್‌ನಲ್ಲಿ ಮೊದಲ ಬಾರಿಗೆ ಗುರುತಿಸಲಾಗಿತ್ತು. ಭಾರತದಲ್ಲಿ, ಚೆನ್ನೈಯ 8 ವರ್ಷದ ಬಾಲಕನಲ್ಲಿ ಈ ಅನಾರೋಗ್ಯ ಪತ್ತೆಯಾದದ್ದು ಮೊದಲ ಪ್ರಕರಣ.

ಭಾರತೀಯ ಮಕ್ಕಳ ಚಿಕಿತ್ಸಾ ತಜ್ಞರ ಅಕಾಡೆಮಿ (ಐಎಪಿ)ಯು 2020ರ ಮೇ 22ರಂದು ಹೊರಡಿಸಿದ ಹೇಳಿಕೆಯ ಪ್ರಕಾರ ರೋಗ ಪ್ರತಿರೋಧ ವ್ಯವಸ್ಥೆಯ ಅನಿಯಮಿತತೆಯಿಂದಾಗಿ ಲಕ್ಷಣರಹಿತ ಅಥವಾ ಲಕ್ಷಣ ಸಹಿತ ಕೋವಿಡ್‌-19 ಸೋಂಕಿನ 2ರಿಂದ 6 ವಾರಗಳ ಬಳಿಕ ಮಕ್ಕಳಲ್ಲಿ ಕೋವಿಡ್‌ ಬಳಿಕ ಬಹುಅಂಗ ವ್ಯವಸ್ಥೆಯ ಉರಿಯೂತ ಕಾಯಿಲೆ (ಎಂಐಎಸ್‌-ಸಿ) ಕೆಲವು ಪ್ರಕರಣಗಳಲ್ಲಿ ಕಂಡುಬರಬಹುದಾಗಿದೆ.

ರೋಗ ಪತ್ತೆ
ಎಂಐಎಸ್‌-ಸಿ ಹೊಂದಿರುವ ಮಕ್ಕಳಲ್ಲಿ ಪ್ರಸ್ತುತ ಕೋವಿಡ್‌-19 ಸೋಂಕು ಪರೀಕ್ಷೆಯ ವರದಿ ನೆಗೆಟಿವ್‌ ಇರುತ್ತದೆ. ಇದರರ್ಥ ಅವರಲ್ಲಿ ಕೋವಿಡ್‌-19ಗೆ ಕಾರಣವಾಗುವ ವೈರಾಣುಗಳು ಇರುವುದಿಲ್ಲ. ಆದರೆ ಈ ಮಕ್ಕಳ ಆ್ಯಂಟಿಬಾಡಿ ಪರೀಕ್ಷೆಗಳಲ್ಲಿ ಪಾಸಿಟಿವ್‌ ಬರುವುದರಿಂದ ಅವರು ಇತ್ತೀಚೆಗೆ ಕೋವಿಡ್‌-19 ಸೋಂಕಿಗೆ ಒಳಗಾಗಿರುವುದು ತಿಳಿದುಬರುತ್ತದೆ.

ಎಂಐಎಸ್‌-ಸಿಯನ್ನು ಖಚಿತಪಡಿಸಿಕೊಳ್ಳಲು ವಿಭಿನ್ನ ಪರೀಕ್ಷೆಗಳನ್ನು ಬಳಸಿಕೊಳ್ಳಲಾಗುತ್ತದೆ-
– ರಕ್ತ ಮತ್ತು ಮೂತ್ರ ಪರೀಕ್ಷೆಗಳಂತಹ ಪ್ರಯೋಗಾಲಯ ಪರೀಕ್ಷೆಗಳು ಮತ್ತು ರಕ್ತದಲ್ಲಿ ಉರಿಯೂತ ಸೂಚಕಗಳು ಅಸಹಜ ಪ್ರಮಾಣದಲ್ಲಿ ಇವೆಯೇ ಎಂಬುದನ್ನು ಪತ್ತೆ ಮಾಡುವ ಪರೀಕ್ಷೆಗಳು.
– ಎದೆಯ ಎಕ್ಸ್‌ರೇ, ಹೊಟ್ಟೆಯ ಅಲ್ಟ್ರಾಸೌಂಡ್‌ ಅಥವಾ ಸಿಟಿ ಸ್ಕ್ಯಾನ್‌ನಂತಹ ಇಮೇಜಿಂಗ್‌ ಪರೀಕ್ಷೆಗಳು.
– ಹೃದಯದ ಎಲೆಕ್ಟ್ರಿಕಲ್‌ ಚಟುವಟಿಕೆಯ ಮಾಪನವಾಗಿರುವ ಎಲೆಕ್ಟ್ರೋಕಾರ್ಡಿಯಾಗ್ರಾಂ ಮತ್ತು ಎಕೊಕಾರ್ಡಿಯಾಗ್ರಾಂ (ಹೃದಯದ ಅಲ್ಟ್ರಾಸೌಂಡ್‌).

Advertisement

ಉಂಟಾಗುವಿಕೆ
ಎಂಐಎಸ್‌-ಸಿಯು ಅಪರೂಪದ ಅನಾರೋಗ್ಯವಾಗಿದ್ದು, ಹದಿಹರಯದವರು ಮತ್ತು ಶಾಲಾ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತದೆ. ಐಎಪಿಯ ಪ್ರಕಾರ ಪ್ರತೀ 1 ಲಕ್ಷ ಜನಸಂಖ್ಯೆಯಲ್ಲಿ 12 ಎಂಐಎಸ್‌-ಸಿ ಪ್ರಕರಣಗಳು ಕಂಡುಬರುತ್ತವೆ. ಆರು ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳಲ್ಲಿ ಇದು ಕಂಡುಬಂದಿರುವುದು ಕಡಿಮೆ. ಆರರಿಂದ 12 ವರ್ಷ ವಯೋಮಾನದ ಮಕ್ಕಳಲ್ಲಿ ಇದರ ಉಂಟಾಗುವಿಕೆ ದುಪ್ಪಟ್ಟು ಮತ್ತು 12ರಿಂದ 18 ವರ್ಷ ವಯೋಮಾನದವರಲ್ಲಿ ಇದರ ಸಾಧ್ಯತೆ ಮೂರು ಪಟ್ಟು ಇರುತ್ತದೆ. ಬೊಜ್ಜು ಹೊಂದಿರುವ ಮಕ್ಕಳಲ್ಲಿ ಇದರ ಉಂಟಾಗುವಿಕೆ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ.

ಕಾರಣಗಳು
ಈ ಕಾಯಿಲೆಯು ಸಾರ್ಸ್‌ -ಕೊವ್‌-2 ವೈರಸ್‌ ಸೋಂಕಿಗೆ ಈಡಾದ ಸುಮಾರು ನಾಲ್ಕು ವಾರಗಳ ಬಳಿಕ ದೇಹದಲ್ಲಿ ಉಂಟಾಗುವ ಉರಿಯೂತ ಪ್ರತಿಕ್ರಿಯೆ. ಎಂಐಎಸ್‌-ಸಿಗೆ ತುತ್ತಾದ ಮಕ್ಕಳು 24 ತಾಸು ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜ್ವರ ಹೊಂದಿ ತೀವ್ರ ಅನಾರೋಗ್ಯಕ್ಕೆ ಈಡಾಗುತ್ತಾರೆ, ತಮ್ಮ ದೇಹದಲ್ಲಿ ಉರಿಯೂತವನ್ನು ಬೆಳೆಸಿಕೊಳ್ಳುತ್ತಾರೆ, ಕರುಳು, ಹೃದಯ, ಮಿದುಳು, ಶ್ವಾಸಕೋಶಗಳು, ಚರ್ಮ ಮತ್ತು ಮೂತ್ರಪಿಂಡಗಳಂತಹ ಅನೇಕ ಅಂಗಾಂಗಗಳಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ಇಲ್ಲಿ ಪಟ್ಟಿ ಮಾಡಲಾಗಿರುವ ಯಾವುದೇ ಸಮಸ್ಯೆಗಳು ಮಕ್ಕಳಲ್ಲಿ ಕಂಡುಬಂದರೆ ತತ್‌ಕ್ಷಣ ನಿಮ್ಮ ಮಗುವಿನ ವೈದ್ಯರನ್ನು ಸಂಪರ್ಕಿಸಿ:

– ಜ್ವರ (100.4 ಡಿಗ್ರಿ ಫ್ಯಾರನ್‌ಹೀಟ್‌ ಅಥವಾ ಹೆಚ್ಚು)- 24 ತಾಸು ಅಥವಾ ಅದಕ್ಕಿಂತ ಹೆಚ್ಚು ಅವಧಿಯದು.
– ಹೊಟ್ಟೆ ನೋವು, ಭೇದಿ ಅಥವಾ ವಾಂತಿ.
– ಕುತ್ತಿಗೆ ನೋವು.
– ಚರ್ಮದಲ್ಲಿ ದದ್ದುಗಳು ಅಥವಾ ಚರ್ಮದ ಬಣ್ಣ ಬದಲಾಗುವುದು.
– ಕಣ್ಣುಗಳು ಕೆಂಪೇರಿರುವುದು.
– ತುಂಬಾ ದಣಿದಿರುವುದು.
– ಉಸಿರುಕಟ್ಟುವುದು.
– ಕಡಿಮೆಯಾಗದ ಎದೆಯಲ್ಲಿ ಒತ್ತಡ ಅಥವಾ ನೋವು.
– ಗೊಂದಲಗೊಂಡಿರುವುದು.
– ಅಸಹಜವಾಗಿ ನಿದ್ದೆ ತೂಗಿದಂತಿರುವುದು, ಎಚ್ಚರವಿರಲು ಕಷ್ಟವಾಗುವುದು.
– ತುಟಿಗಳು ಅಥವಾ ಮುಖ ನೀಲಿಗಟ್ಟಿರುವುದು.ಎಂಐಎಸ್‌-ಸಿಯ ತುರ್ತು ಎಚ್ಚರಿಕೆಯ ಸೂಚನೆಗಳು
– ತೀವ್ರ ಹೊಟ್ಟೆನೋವು.
– ಉಸಿರಾಡಲು ಕಷ್ಟವಾಗುವುದು.
– ಕಳೆಗುಂದಿದ, ಕಂದು ಅಥವಾ ನೀಲಿಗಟ್ಟಿದ ಚರ್ಮ, ತುಟಿಗಳು ಅಥವಾ ಉಗುರುಗಳು- ಚರ್ಮದ ಬಣ್ಣ ಗಾಢವಾಗುವುದು.
– ಎಚ್ಚರಗೊಳ್ಳದಿರುವುದು ಅಥವಾ ಎಚ್ಚರವಿರಲು ಕಷ್ಟವಾಗುವುದು.

ಚಿಕಿತ್ಸೆ
ಎಂಐಎಸ್‌-ಸಿಗೆ ತುತ್ತಾಗಿರುವ ಬಹುತೇಕ ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಕೆಲವರಿಗೆ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯ ಅಗತ್ಯವಿರುತ್ತದೆ. ಚಿಕಿತ್ಸೆಯು ಸಾಮಾನ್ಯವಾಗಿ ಸಪೋರ್ಟಿವ್‌ ಕೇರ್‌ ಮತ್ತು ಉರಿಯೂತಕ್ಕಿಡಾದ ಜೀವಧಾರಕ ಅಂಗಗಳಲ್ಲಿ ಶಾಶ್ವತ ಹಾನಿ ಉಂಟಾಗುವುದನ್ನು ತಡೆಯಲು ಉರಿಯೂತವನ್ನು ಕಡಿಮೆ ಮಾಡುವ ಕ್ರಮಗಳನ್ನು ಒಳಗೊಂಡಿರುತ್ತದೆ.

ಮಗುವಿನ ರೋಗ ಲಕ್ಷಣಗಳು ಮತ್ತು ಪರೀಕ್ಷೆಗಳ ಫ‌ಲಿತಾಂಶಗಳನ್ನು ಆಧರಿಸಿ ಚಿಕಿತ್ಸೆಯನ್ನು ಆರಂಭಿಸಲಾಗುತ್ತದೆ. ಸಪೋರ್ಟಿವ್‌ ಆರೈಕೆಯು ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ
– ನಿರ್ಜಲೀಕರಣಗೊಂಡಿದ್ದರೆ ದ್ರವಾಂಶ ಪೂರೈಕೆ. ದ್ರವಾಂಶವನ್ನು ರಕ್ತನಾಳಗಳ ಮೂಲಕ ಒದಗಿಸಲಾಗುತ್ತದೆ.
– ಉಸಿರಾಟ ಸಹಾಯಕ್ಕಾಗಿ ಆಮ್ಲಜನಕ.
– ಆಘಾತಕ್ಕೆ ಸಂಬಂಧಿಸಿದ ಕಡಿಮೆ ರಕ್ತದೊತ್ತಡವನ್ನು ಸಹಜ ಸ್ಥಿತಿಗೆ ತರಲು ಅಥವಾ ಹೃದಯದ ಚಟುವಟಿಕೆಗೆ ನೆರವಾಗಲು ಇನೊಟ್ರೊಪಿಕ್‌ ಔಷಧಗಳು.
– ಉಸಿರಾಟ ಸಹಾಯ ಯಂತ್ರ (ವೆಂಟಿಲೇಟರ್‌).
– ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಆ್ಯಸ್ಪಿರಿನ್‌ ಅಥವಾ ಹೆಪಾರಿನ್‌ನಂತಹ ಔಷಧಗಳು. ಊತ ಮತ್ತು ಉರಿಯೂತಗಳನ್ನು ಕಡಿಮೆ ಮಾಡುವ ಚಿಕಿತ್ಸೆಗಳಲ್ಲಿ ಈ ಕೆಳಗಿನವು ಒಳಗೊಂಡಿರಬಹುದು:
– ಸ್ಟೀರಾಯ್ಡ ಚಿಕಿತ್ಸೆ
– ಉರಿಯೂತಕ್ಕೆ ಕಾರಣವಾಗುವ ಸೈಟೊಕಿನ್‌ಗಳು ಎಂದು ಕರೆಯಲ್ಪಡುವ ಪ್ರೊಟೀನ್‌ಗಳ ಪ್ರಮಾಣವನ್ನು ಕಡಿಮೆ ಮಾಡಲು ಗುರಿ ನಿರ್ದೇಶಿತ ಚಿಕಿತ್ಸೆಗಳಂತಹ ಇತರ ಚಿಕಿತ್ಸೆಗಳು.

ಸಂಕೀರ್ಣ ಸಮಸ್ಯೆಗಳು
ಅನೇಕ ತಜ್ಞರು ಎಂಐಎಸ್‌-ಸಿಯನ್ನು ಕೋವಿಡ್‌-19ನ ಸಂಕೀರ್ಣ ಸಮಸ್ಯೆ ಎಂಬುದಾಗಿ ಪರಿಗಣಿಸುತ್ತಾರೆ. ಆದಷ್ಟು ಬೇಗನೆ ಇದನ್ನು ಪತ್ತೆಹಚ್ಚಿ ಸಮರ್ಪಕವಾದ ಚಿಕಿತ್ಸೆ ಒದಗಿಸದೆ ಇದ್ದಲ್ಲಿ ಇದು ಹೃದಯ, ಶ್ವಾಸಕೋಶಗಳು ಅಥವಾ ಮೂತ್ರಪಿಂಡಗಳಂತಹ ಪ್ರಮುಖ ಅಂಗಗಳಿಗೆ ಗಂಭೀರ ಹಾನಿಯನ್ನು ಉಂಟು ಮಾಡಬಹುದು. ಅಪರೂಪದ ಪ್ರಕರಣಗಳಲ್ಲಿ ಎಂಐಎಸ್‌-ಸಿಯು ಶಾಶ್ವತ ಹಾನಿ ಅಥವಾ ಸಾವಿಗೂ ಕಾರಣವಾಗಬಹುದು.

ನೀವು ಅಥವಾ ನಿಮ್ಮ ಮಗು ಕೊರೊನಾ ಲಸಿಕೆ ಹಾಕಿಸಿಕೊಳ್ಳದೆ ಇದ್ದಲ್ಲಿ ಕೋವಿಡ್‌-19 ವೈರಾಣು ಸೋಂಕು ತಗಲುವುದನ್ನು ಮತ್ತು ನಿಮ್ಮಿಂದ ಅದು ಇತರರಿಗೆ ಹರಡುವುದನ್ನು ತಡೆಯಲು ಅನೇಕ ಕ್ರಮಗಳನ್ನು ಕೈಗೊಳ್ಳಬಹುದು. ಕೋವಿಡ್‌-19 ವೈರಾಣು ಸೋಂಕಿಗೆ ತುತ್ತಾಗುವುದನ್ನು ತಡೆಯಲು ಸಿಡಿಸಿಯು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸುವಂತೆ ಶಿಫಾರಸು ಮಾಡುತ್ತದೆ.

ನಿರ್ಬಂಧಕ ಕ್ರಮಗಳು
– ಕೈಗಳನ್ನು ಶುಚಿಯಾಗಿ ಇರಿಸಿಕೊಳ್ಳಿ: ಕೈಗಳನ್ನು ಸಾಬೂನು ಮತ್ತು ನೀರು ಉಪಯೋಗಿಸಿ ಕನಿಷ್ಠ 20 ಸೆಕೆಂಡ್‌ಗಳ ಕಾಲ ಆಗಾಗ ತೊಳೆದುಕೊಳ್ಳಿ. ಸಾಬೂನು, ನೀರು ಲಭ್ಯವಿಲ್ಲದೆ ಇದ್ದಲ್ಲಿ ಕನಿಷ್ಠ ಶೇ. 60 ಆಲ್ಕೊಹಾಲ್‌ ಇರುವ ಹ್ಯಾಂಡ್‌ಸ್ಯಾನಿಟೈಸರ್‌ ಉಪಯೋಗಿಸಿ ಕೈಗಳನ್ನು ಶುಚಿಗೊಳಿಸಿ.
– ಅನಾರೋಗ್ಯಪೀಡಿತರಿಂದ ದೂರವಿರಿ: ನಿರ್ದಿಷ್ಟವಾಗಿ ಕೆಮ್ಮುವ, ಸೀನುವ ಅಥವಾ ಅನಾರೋಗ್ಯ ಪೀಡಿತರಂತಿರುವ, ರೋಗ ಪ್ರಸಾರಕರಂತೆ ಕಾಣುವ ಇತರ ಲಕ್ಷಣಗಳನ್ನು ಹೊಂದಿರುವ ಜನರಿಂದ ಆದಷ್ಟು ದೂರವಿರಿ.
– ಸಾಮಾಜಿಕ ಅಂತರವನ್ನು ಪಾಲಿಸಿ: ಮನೆಯಿಂದ ಹೊರಗೆ ಹೋದ ಸಂದರ್ಭದಲ್ಲಿ ನೀವು ಮತ್ತು ನಿಮ್ಮ ಮಗು ಇತರರಿಂದ ಕನಿಷ್ಠ ಆರು ಅಡಿ (2 ಮೀಟರ್‌) ಅಂತರ ಕಾಯ್ದುಕೊಳ್ಳಿ.
– ಬಟ್ಟೆಯಿಂದ ಮಾಡಿದ ಫೇಸ್‌ ಮಾಸ್ಕ್ ಧರಿಸಿ: ಕೋವಿಡ್‌-19 ಸೋಂಕು ಹರಡುವ ಅಪಾಯ ಹೆಚ್ಚಿರುವ ಒಳಾಂಗಣ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಹೊರಾಂಗಣ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಾಗ ನೀವು ಮತ್ತು ನಿಮ್ಮ ಮಗು – ಮಗುವಿಗೆ 2 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದ್ದಲ್ಲಿ – ಮೂಗು ಮತ್ತು ಬಾಯಿಗಳನ್ನು ಮುಚ್ಚುವಂತೆ ಮಾಸ್ಕ್ ಧರಿಸಿ. ನೀವು ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿರುವಿರೋ ಇಲ್ಲವೋ ಎಂಬುದನ್ನು ಆಧರಿಸಿ ಮಾಸ್ಕ್ ಧಾರಣೆಯ ಮಾರ್ಗದರ್ಶಿ ಸೂತ್ರಗಳು ಬದಲಾಗುತ್ತವೆ.
– ನಿಮ್ಮ ಮೂಗು, ಕಣ್ಣುಗಳು ಮತ್ತು ಬಾಯಿಯನ್ನು ಮುಟ್ಟುವುದನ್ನು ತಪ್ಪಿಸಿ: ನಿಮ್ಮ ಮಗುವಿಗೆ ನೀವು ಮಾದರಿಯಾಗಿ ಮತ್ತು ಆತ/ ಆಕೆ ಮೂಗು, ಕಣ್ಣುಗಳು, ಬಾಯಿ, ಮುಖ ಮುಟ್ಟಿಕೊಳ್ಳದಿರಲಿ.
– ನೀವು ಕೆಮ್ಮುವಾಗ ಅಥವಾ ಸೀನುವಾಗ ಬಾಯಿಯನ್ನು ಟಿಶ್ಯೂವಿನಿಂದ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಿ: ನೀವು ಮತ್ತು ನಿಮ್ಮ ಮಗು ಕೆಮ್ಮುವಾಗ ಅಥವಾ ಸೀನುವಾಗ ಸೂಕ್ಷ್ಮಾಣಗಳು ಪ್ರಸಾರವಾಗದಂತೆ ತಡೆಯಲು ಬಾಯಿಯನ್ನು ಮುಚ್ಚಿಕೊಳ್ಳುವುದನ್ನು ಪಾಲಿಸಿ.-
– ಹೆಚ್ಚು ಸ್ಪರ್ಶಿಸುವ ವಸ್ತು, ಮೇಲ್ಮೈ ಗಳನ್ನು ಪ್ರತೀದಿನವೂ ಸೋಂಕು ಮುಕ್ತಗೊಳಿಸಿ:
ಇಂತಹ ವಸ್ತು/ ಮೇಲ್ಮೈ ಗಳಲ್ಲಿ ಬಾಗಿಲುಗಳ ಹಿಡಿಕೆಗಳು, ದೀಪದ ಸ್ವಿಚ್‌ಗಳು, ರಿಮೋಟ್‌ಗಳು, ಹಿಡಿಕೆಗಳು, ಮೇಜಿನ ಮೇಲ್ಮೈ ಕುರ್ಚಿಗಳು, ಕೀಬೋರ್ಡ್‌ಗಳು, ಸಿಂಕ್‌ ಮತ್ತು ಶೌಚಾಲಯಗಳು ಸೇರಿವೆ.

– ಕ್ಲಾರಾ ಪ್ರಮೀಳಾ ಡಿ’ಸೋಜಾ
ಅಸಿಸ್ಟೆಂಟ್‌ ಲೆಕ್ಚರರ್‌, ಮಣಿಪಾಲ ನರ್ಸಿಂಗ್‌ ಕಾಲೇಜು, ಮಾಹೆ, ಮಣಿಪಾಲ

– ಡಾ| ಶ್ರೀಕಿರಣ ಹೆಬ್ಟಾರ್‌
ವಿಭಾಗ ಮುಖ್ಯಸ್ಥರು, ಮಕ್ಕಳ ಚಿಕಿತ್ಸಾ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ

– ಡಾ| ಲೀನಾ ಸಿಕ್ವೇರಾ
ಪ್ರಾಂಶುಪಾಲರು, ಮಣಿಪಾಲ ನರ್ಸಿಂಗ್‌ ಕಾಲೇಜು, ಮಾಹೆ, ಮಣಿಪಾಲ

Advertisement

Udayavani is now on Telegram. Click here to join our channel and stay updated with the latest news.

Next