Advertisement

ಬಹುತ್ವವೇ ಭಾರತದ ನಿಜವಾದ ಸೌಂದರ್ಯ: ದಲೈಲಾಮ

12:43 PM Dec 27, 2017 | Team Udayavani |

ತುಮಕೂರು: ಪ್ರಾಚೀನ ಶಿಕ್ಷಣ ಪದ್ಧತಿಯಲ್ಲಿರುವ ಜ್ಞಾನವನ್ನು ಇಂದಿನ ಯಾಂತ್ರಿಕೃತ ಶಿಕ್ಷಣ ಪದ್ದತಿಯ ಜತೆ ಮೇಳೈಸುವ ಕೆಲಸ ಆಗಬೇಕಾಗಿದೆ. ಭೌತಿಕ ಪ್ರಗತಿಗಿಂತ, ಬೌದ್ಧಿಕ ಪ್ರಗತಿಗೆ ಒತ್ತು ನೀಡುವ, ಮಾನವೀಯ ಗುಣಗಳನ್ನು ಕಲಿಸುವ ಶಿಕ್ಷಣದ ಅಗತ್ಯವಿದೆ’ ಎಂದು ಟಿಬೆಟಿಯನ್‌ ಧರ್ಮಗುರು ದಲೈಲಾಮ ತಿಳಿಸಿದರು.

Advertisement

ತುಮಕೂರು ವಿವಿಯ ಡಾ.ಶ್ರೀ ಶಿವಕುಮಾರಸ್ವಾಮೀಜಿ ಸಭಾಂಗಣದಲ್ಲಿ ಮಂಗಳವಾರ ತುಮಕೂರು ವಿವಿ ಹಾಗು ಬೈಲುಕುಪ್ಪೆಯ ಸಿರಾ ಜೇ ಮೊನಾಸ್ಟಿಕ್‌ ವಿವಿ ವತಿಯಿಂದ ಏರ್ಪಡಿಸಿದ್ದ “ಆಧುನಿಕ ಯುಗಕ್ಕಾಗಿ ಸಾರ್ವತ್ರಿಕ ನೈತಿಕತೆಯ ಪ್ರಸ್ತುತತೆ’ ಎಂಬ ವಿಷಯ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ಇಡೀ ವಿಶ್ವವೇ ಭಾರತೀಯ ಪ್ರಾಚೀನ ಜ್ಞಾನಕ್ಕಾಗಿ ಹಾತೊರೆಯುತ್ತಿದ್ದರೆ, ಭಾರತ ಮಾತ್ರ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆ ಮಾಡಲು ಪೈಪೋಟಿ ನಡೆಸುತ್ತಿರುವುದಕ್ಕೆ ವಿಷಾದಿಸಿದರು. ಬಹುತ್ವವನ್ನು ಭಾರತ ತನ್ನ ಒಡಲಲ್ಲಿ ಸಾವಿರಾರು ವರ್ಷಗಳಿಂದ ಪೋಷಿಸಿಕೊಂಡು ಬರುತ್ತಿದೆ. ಇದೇ ನಿಜವಾದ ಭಾರತದ ಸೌಂದರ್ಯ, ಐರೋಪ್ಯ ಒಕ್ಕೂಟ ನಮ್ಮ ಕಣ್ಣಮುಂದೆಯೇ ಹಲವು ಚೂರಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಇನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುತ್ತಿದೆ. ಇದನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ನುಡಿದರು.

ಉಪನ್ಯಾಸದ ನಂತರ ನಡೆದ ಸಂವಾದದಲ್ಲಿ ಸಮಾಜದಲ್ಲಿ ನಡೆಯುತ್ತಿರುವ ಪರಿಸ್ಥಿತಿ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ
ಹಸನ್ಮುಖೀಗಳಾಗಿ ಉತ್ತರಿಸಿದ ದಲೈಲಾಮ ಅವರು, “ಅನಾದಿ ಕಾಲದಿಂದಲೂ ಕಾಪಾಡಿಕೊಂಡು ಬಂದಿರುವ ಸೆಕ್ಯುಲರ್‌ ತತ್ವವನ್ನು 
ಮುಂದುವರಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ’ಎಂದರು.

ಧರ್ಮ ಎಂಬುದು ಭಾರತದಂತಹ ದೇಶದಲ್ಲಿ ಸ್ವಂತ ವಿಷಯ. ಜಾತಿ, ಧರ್ಮದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆಯಿಂದ ನಡೆಯುವ ಹಿಂಸೆಗಳಿಗೆ ಕಡಿವಾಣ ಹಾಕಬೇಕಿದೆ. ಈ ನಿಟ್ಟಿನಲ್ಲಿ ಯುವ ಜನತೆ ಎಚ್ಚರಿಕೆಯ ಹೆಜ್ಜೆಗಳನ್ನು ಇಡಬೇಕಾಗಿದೆ. ಭಾರತದ ರಾಜಕಾರಣಿಗಳು ಜಾತ್ಯತೀತ ತತ್ವವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿರುವುದೇ ಬೇರೆ ಬೇರೆ ರೀತಿಯ ಹಿಂಸೆಗೆ ಕಾರಣ. ಇದನ್ನು ಹೋಗಲಾಡಿಸಲು
ಶಿಕ್ಷಣ ಒಂದೇ ದಾರಿ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ.ಜಯಶೀಲ ಮಾತನಾಡಿ, 2012ರಲ್ಲಿ ತುಮಕೂರು ವಿವಿ ಬೈಲುಕುಪ್ಪೆಯ ಸಿರಾ ಜೇ ಮೋನಾಸ್ಟಿಕ್‌ ವಿವಿಯೊಂದಿಗೆ ಒಪ್ಪಂದ ಮಾಡಿಕೊಂಡ ನಂತರ, ನಾಲ್ಕನೇ ಬಾರಿಗೆ ದಲೈಲಾಮ ಅವರು ತುಮಕೂರಿಗೆ ಭೇಟಿ ನೀಡುತ್ತಿದ್ದಾರೆ. ಅನೇಕ ವಿಚಾರಗಳ ಕುರಿತು ಮಾತನಾಡುವ ಮೂಲಕ ಯುವ ಜನರಲ್ಲಿ ಶಾಂತಿ, ಸಹಬಾಳ್ವೆಯ ಸಂದೇಶ ಸಾರಿದ್ದಾರೆ ಎಂದು ಹೇಳಿದರು.

Advertisement

ಬೈಲುಕಪ್ಪೆಯ ಸಿರಾ ಜೇ ಮೋನಾಸ್ಟಿಕ್‌ ವಿವಿ ಕುಲಪತಿ ತೇನಿನ್‌ ಚೋಸೇಂಗ್‌ ರಿನ್‌ಪೋಂಚೆ ಮಾತನಾಡಿ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬುದ್ದನ ವಿಚಾರ ಕುರಿತ ಪುಸ್ತಕಗಳ ಭಾಷಾಂತರ ಹಾಗೂ ವಿಚಾರ ಸಂಕಿರಣ, ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ವೇದಿಕೆಯಲ್ಲಿ ಸಿರಾ ಜೆ ಮೋನಾಸ್ಟಿಕ್‌ ವಿವಿಯ ಮುಖ್ಯಕಾರ್ಯದರ್ಶಿ ಗಿಷೇ ತುಪ್‌ಟನ್‌ ವಾಂಗ್‌ ಚುಕ್‌ ಮತ್ತು ತುಮಕೂರು ವಿವಿ ಕುಲಸಚಿವ ಪೊ›.ಬಿ.ಎಸ್‌ ಗುಂಜಾಳ್‌, ಸಮಾಜಕಾರ್ಯ  ವಿಭಾಗದ ಮುಖ್ಯಸ್ಥ ಡಾ.ರಮೇಶ್‌ ಉಪಸ್ಥಿತರಿದ್ದರು. ಸಾರ್ವಜನಿಕ ಉಪನ್ಯಾಸದಲ್ಲಿ ವಿವಿಧ ಶಾಲಾ ಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next