ಬೆಂಗಳೂರು: ನಗರದ ಮೆಜೆಸ್ಟಿಕ್ ನ ಹೃದಯ ಬಾಗದಲ್ಲಿರುವ ಕಪಾಲಿ ಚಿತ್ರಮಂದಿರದ ಸಮೀಪ ಎರಡು ಬಹುಮಹಡಿ ಕಟ್ಟಡಗಳು ಇಂದು ರಾತ್ರಿ ಇದ್ದಕ್ಕಿದ್ದಂತೆ ಉರುಳಿಬಿದ್ದಿವೆ.
ಕಪಾಲಿ ಥಿಯೇಟರ್ ಬಳಿ ಇದ್ದ ಅರೆವಾಣಿಜ್ಯ ಕಟ್ಟಡಗಳೆರಡು ಮಂಗಳವಾರ ರಾತ್ರಿ ನೋಡನೋಡುತ್ತಿದ್ದಂತೆ ಕುಸಿದು ಬಿತ್ತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ನಾಲ್ಕು ಮಹಡಿಯ ಒಂದು ಕಟ್ಟಡ ಹಾಗೂ ಅದಕ್ಕೆ ಹೊಂದಿಕೊಂಡ ಇನ್ನೊಂದು ಚಿಕ್ಕ ಕಟ್ಟಡ ಕುಸಿದಿದೆ. ಈ ಕಟ್ಟಡಗಳು ಕುಸಿಯುತ್ತಿರುವ ದೃಶ್ಯ ಮೊಬೈಲ್ ಕೆಮರಾದಲ್ಲಿ ಸೆರೆಯಾಗಿದ್ದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ಒಂದು ಕಾಲದಲ್ಲಿ ನಗರದ ಪ್ರತಿಷ್ಠಿತ ಹಾಗೂ ಅತೀ ದೊಡ್ಡ ಚಿತ್ರ ಮಂದಿರಗಳಲ್ಲಿ ಒಂದಾಗಿದ್ದ ಕಪಾಲಿ ಥಿಯೇಟರ್ ಬಹಳ ಸಮಯಗಳಿಂದ ಮುಚ್ಚಲ್ಪಟ್ಟಿತ್ತು. ಈ ಥಿಯೇಟರ್ ಒಡೆದು ಅಲ್ಲಿ ಮಲ್ಟಿಪ್ಲೆಕ್ಸ್ ಕಾಂಪ್ಲೆಕ್ಸ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಅದಕ್ಕಾಗಿ 80 ಅಡಿ ಆಳದಲ್ಲಿ ಹೊಂಡ ತೆಗೆಯಲಾಗಿದ್ದು, ಈ ಕಾರಣದಿಂದ ಸಮೀಪದ ಕಟ್ಟಡಗಳು ಅಪಾಯದಲ್ಲಿದ್ದವು.
ಇಲ್ಲಿ ಹೊಸ ಕಟ್ಟಡವನ್ನು ನಿರ್ಮಿಸುವ ಕೆಲಸ ಹಗಲಿರುಳು ನಡೆಯುತ್ತಿತ್ತು ಎನ್ನಲಾಗಿದ್ದು ಸಮೀಪದ ಬಹುಮಹಡಿ ಕಟ್ಟಡಗಳು ಉರುಳುವ ಸಂದರ್ಭದಲ್ಲಿ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕರು ಇದ್ದರೋ ಇಲ್ಲವೋ ಎಂಬ ಕುರಿತಾದ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.ಹಾಗೊಂದು ವೇಳೆ ಆಳದ ಹೊಂಡದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಲ್ಲಿ ಬಹುದೊಡ್ಡ ಅನಾಹುತ ಸಂಭವಿಸಿರಬಹುದಾದ ಭಯ ಇದೀಗ ವ್ಯಕ್ತವಾಗಿದೆ.
ಕಪಾಲಿ ಥಿಯೇಟರ್ ಬಹುಮಹಡಿ ವಾಹನ ನಿಲುಡೆ ಕಡ್ಟಡ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಂಡಿತ್ತು. ಈ ಸಂಬಂಧ ಸುಮಾರು ೪೦ ಅಡಿ ಆಳ ಭೂಮಿಯನ್ನು ಅಗೆಯಲಾಗಿತ್ತು. ಕಟ್ಟಡ ಬಿರುಕು ಬಿಟ್ಟ ಹಿನ್ನೆಲೆಯಲ್ಲಿ ಮೂರು ದಿನ ಮುಂಚಿತವಾಗಿಯೇ ಕಟ್ಟಡದಲ್ಲಿದ್ದವರನ್ನು ತೆರವುಗೊಳಿಸಲಾಗಿತ್ತು. ಉದ್ದೇಶಿತ ಕಟ್ಟಡವು ಹೋಟೆಲ್ ಮತ್ತು ಪಿಜಿಗೆ ಬಳಕೆ ಆಗುತ್ತಿತ್ತು.