Advertisement

ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ‘ರಿಯಲ್ ಹೀರೋ’ ಆಗಿ ಮೂಡಿಬಂದ ನಟ ಸೋನೂ ಸೂದ್

08:36 AM May 12, 2020 | Hari Prasad |

ಮುಂಬಯಿ: ಅರುಂಧತಿ ಚಿತ್ರದ ಮೂಲಕ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ನಟ ಸೋನೂ ಸೂದ್ ಅವರು ಕೋವಿಡ್ ಸಂಬಂಧಿತ ಈ ಲಾಕ್ ಡೌನ್ ಅವಧಿಯಲ್ಲಿ ಮಾನವೀಯ ಕಾರ್ಯದ ಮೂಲಕ ತಾವು ‘ರಿಯಲ್ ಹೀರೋ’ ಎಂಬುದನ್ನು ಸಾಬೀತುಪಡಿಸಿದ್ದಾರೆ.

Advertisement

ಮಹಾರಾಷ್ಟ್ರದ ಥಾಣೆಯಲ್ಲಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಕರ್ನಾಟಕದ ವಲಸೆ ಕಾರ್ಮಿಕರಿಗೆ ತಾವೇ ಖುದ್ದಾಗಿ ಬಸ್ ವ್ಯವಸ್ಥೆಯನ್ನು ಮಾಡಿಕೊಟ್ಟು ಅವರನ್ನು ಅವರ ಮನೆಗಳಿಗೆ ಕಳುಹಿಸಿಕೊಡುವ ಕಾರ್ಯವನ್ನು ಮಾಡಿದ್ದಾರೆ. ಸೋನೂ ಸೂದ್ ಅವರ ಈ ಮಾನವೀಯ ಕಳಕಳಿಗೆ ಇದೀಗ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಲಾಕ್ ಡೌನ್ ಅವಧಿಯಲ್ಲಿ ಅಂತರ ರಾಜ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದ್ದ ಕಾರಣ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಕುಟುಂಬ ಸಹಿತವಾಗಿ ಕಾಲ್ನಡಿಗೆಯಲ್ಲೇ ತಮ್ಮ ತಮ್ಮ ಊರುಗಳಿಗೆ ಪ್ರಯಾಣಿಸುತ್ತಿರುವುದನ್ನು ಕಂಡು ನಟ ಸೋನೂ ಸೂದ್ ಅವರು ಕಳವಳಗೊಂಡಿದ್ದಾರೆ. ಈ ಘಟನೆಯೇ ಸೋನೂ ಅವರಿಗೆ ಈ ಮಾನವೀಯ ಕಾರ್ಯ ಕೈಗೊಳ್ಳಲು ಪ್ರೇರಣೆಯಾಯಿತಂತೆ.

ಇಂದು ಥಾಣೆಯಿಂದ ಹೊರಟ 10 ಬಸ್ಸುಗಳಲ್ಲಿ 350 ವಲಸೆ ಕಾರ್ಮಿಕರು ಗುಲ್ಬರ್ಗಾಕ್ಕೆ ಪ್ರಯಾಣ ಬೆಳೆಸಿದರು. ಈ ಸಂಧರ್ಭದಲ್ಲಿ ಸ್ವತಃ ಸೋನೂ ಸೂದ್ ಅವರೇ ಬಸ್ಸು ನಿಲ್ದಾಣಕ್ಕೆ ಬಂದು ಕರ್ನಾಟಕದ ವಲಸೆ ಕಾರ್ಮಿಕರಿಗೆ ಬೈ ಬೈ ಹೇಳಿದರು.

ಥಾಣೆಯಿಂದ ವಲಸೆ ಕಾರ್ಮಿಕರನ್ನು ಕರ್ನಾಟಕಕ್ಕೆ ಕಳುಹಿಸಿಕೊಡುವ ನಿಟ್ಟಿನಲ್ಲಿ ನಟ ಸೋನೂ ಸೂದ್ ಅವರು ಮಹಾರಾಷ್ಟ್ರ ಹಾಗೂ ಕರ್ನಾಟಕ ಸರಕಾರಗಳಿಂದ ನಿರ್ಧಿಷ್ಟ ಒಪ್ಪಿಗೆಯನ್ನು ಪಡೆದುಕೊಂಡಿದ್ದರು.

Advertisement

‘ಕೋವಿಡ್ ಮಹಾಮಾರಿಗೆ ಜಗತ್ತೇ ತತ್ತರಿಸುತ್ತಿರುವ ಈ ಸಂಕಷ್ಟದ ಸಂದರ್ಭದಲ್ಲಿ ಪ್ರತೀಯೊಬ್ಬರೂ ತಮ್ಮ ತಮ್ಮ ಕುಟುಂಬ ಸದಸ್ಯರ ಜೊತೆಯಲ್ಲಿ ಇರಲು ಬಯಸುತ್ತಾರೆ ಎಂಬುದು ನನ್ನ ಬಲವಾದ ನಂಬಿಕೆಯಾಗಿದೆ. ಹಾಗಾಗಿ ಕರ್ನಾಟಕದ ಈ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಎರಡೂ ರಾಜ್ಯ ಸರಕಾರಗಳ ಒಪ್ಪಿಗೆಯನ್ನು ಪಡೆದುಕೊಂಡು ಈ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದ್ದೇನೆ’ ಎಂದು ನಟ ಸೋನೂ ಸೂದ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

ಈ ಹಿಂದೆಯೂ ಸೋನೂ ಸೂದ್ ಅವರು ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ಕಳುಹಿಸಿಕೊಡುವಂತೆ ಸರಕಾರಗಳನ್ನು ಒತ್ತಾಯಿಸಿದ್ದರು. ಇದರ ಹೊರತಾಗಿಯೂ ನಟ ಸೂದ್ ಅವರು ಪಂಜಾಬ್ ನ ವಿವಿಧ ಆಸ್ಪತ್ರೆಗಳ ವೈದ್ಯರಿಗೆ 1500 ವೈಯಕ್ತಿಕ ಸುರಕ್ಷಾ ಕಿಟ್ ಗಳನ್ನು ವಿತರಿಸಿದ್ದರು.

ಮತ್ತು ರಂಝಾನ್ ತಿಂಗಳಿನಲ್ಲಿ ಮುಂಬಯಿ ನಗರದಲ್ಲಿರುವ ವಲಸಿಗರಿಗೆ ಪ್ರತೀದಿನ 25 ಸಾವಿರ ಆಹಾ ಪೊಟ್ಟಣಗಳನ್ನು ವಿತರಿಸುವ ಮೂಲಕವೂ ಈ ನಟ ಲಾಕ್ ಡೌನ್ ಅವಧಿಯಲ್ಲಿ ತನ್ನ ಮಾನವೀಯ ಕಾರ್ಯವನ್ನು ಮಾಡಿದ್ದು ಈ ಹಿಂದೆ ವರದಿಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next