Advertisement

Multi-level ಪಾರ್ಕಿಂಗ್‌ ಕಾಮಗಾರಿಗೆ ವೇಗ

04:30 PM Sep 24, 2024 | Team Udayavani |

ಮಹಾನಗರ: ನಗರದ ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣದಲ್ಲಿ ನಿರ್ಮಾಣವಾಗುತ್ತಿರುವ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಾಮಗಾರಿಗೆ ಸಂಬಂಧಿಸಿ ‘ಉದಯವಾಣಿ ಸುದಿನ’ದಲ್ಲಿ ಸೆ. 18ರಿಂದ ಸೆ. 23ರ ವರೆಗೆ ಪ್ರಕಟವಾದ ‘ಮಲ್ಟಿಲೆವೆಲ್‌ ಪಾರ್ಕಿಂಗ್‌ ಇನ್ನೆಷ್ಟು ವರ್ಷ ಬೇಕು?’ ಅಭಿಯಾನ ಆಡಳಿತ ವ್ಯವಸ್ಥೆಯ ಕಣ್ಣು ತೆರೆಸಿದೆ. ಕುಂಟುತ್ತಾ ಸಾಗುತ್ತಿರುವ ಯೋಜನೆಯ ಹಿನ್ನೆಲೆ – ಮುನ್ನೆಲೆಗಳ ಬಗ್ಗೆ ವಿವರವಾಗಿ ಪ್ರಸ್ತುತ ಪಡಿಸಿದ ವರದಿಗೆ ಆಡಳಿತ ವ್ಯವಸ್ಥೆ ಸ್ಪಂದಿಸಿದೆ.

Advertisement

ಸ್ಮಾರ್ಟ್‌ ಸಿಟಿ ವತಿಯಿಂದ 95 ಕೋಟಿ ರೂ. ವೆಚ್ಚದಲ್ಲಿ ಬಿಒಟಿ- ನಿರ್ಮಾಣ, ನಿರ್ವಹಣೆ, ಹಸ್ತಾಂತರ ಸ್ವರೂಪದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ಯೋಜನೆ ಹಲವಾರು ಕಾರಣಗಳಿಂದ ವೇಗ ಕಳೆದುಕೊಂಡಿತ್ತು. ಇದೀಗ ಬಹು ನಿರೀಕ್ಷಿತ ಯೋಜನೆಯನ್ನು ತುರ್ತಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಒಮ್ಮತದ ತೀರ್ಮಾನ ವ್ಯಕ್ತವಾಗಿದೆ.

ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌, ಶಾಸಕ ವೇದವ್ಯಾಸ ಕಾಮತ್‌ ಮತ್ತು ಮಂಗಳೂರು ಸ್ಮಾರ್ಟ್‌ ಸಿಟಿ ವ್ಯವಸ್ಥಾಪಕ ನಿರ್ದೇಶಕ ರಾಜು ಕೆ. ಅವರು ಈ ಕುರಿತಂತೆ ‘ಉದಯವಾಣಿ ಸುದಿನ’ ಜತೆಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಅದರ ಜತೆಗೆ, ಈ ಯೋಜನೆಯ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಪ್ರಮುಖರಾದ ಅನುರಾಧಾ ಪ್ರಭು ಅವರು, ಹಲವು ಸವಾಲುಗಳನ್ನು ದಾಟಿದ್ದೇವೆ, ಸಾಕಷ್ಟು ಹಣ ಖರ್ಚು ಮಾಡಿದ್ದೇವೆ. ಎಲ್ಲ ಸವಾಲುಗಳನ್ನು ಮೀರಿ ತ್ವರಿತವಾಗಿ ಕಾಮಗಾರಿ ನಡೆಸಿ ಮಂಗಳೂರಿಗೆ ವಿಶಿಷ್ಟವಾದ ಕೊಡುಗೆಯನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.

Advertisement

ಸ್ಥಗಿತದ ಕಾರಣ ಗೊತ್ತಾಗಿದೆ; ಶೀಘ್ರ ಮರುಚಾಲನೆ ಸಿಗಲಿದೆ
ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಕಾಮಗಾರಿ ಸ್ಥಗಿತಗೊಂಡಿರುವ ಬಗ್ಗೆ ಮತ್ತು ಕಾಮಗಾರಿಯನ್ನು ಆರಂಭಿಸುವ ಬಗ್ಗೆ ಉದಯವಾಣಿ ‘ಸುದಿನ’ ಕೈಗೊಂಡಿರುವ ಅಭಿಯಾನವನ್ನು ಗಮನಿಸಿದ್ದೇನೆ. ನಗರದ ಪಾರ್ಕಿಂಗ್‌ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಶೀಘ್ರ ಮುಗಿಸುವ ಅಗತ್ಯವಿದೆ. ಯೋಜನೆ ಸ್ಥಗಿತಗೊಂಡಿರುವ ಕಾರಣಗಳ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದೇನೆ. ಕಾಮಗಾರಿಯನ್ನು ಮುಂದುವರಿಸಲು ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯವರು ಕೂಡಾ ಉತ್ಸುಕರಾಗಿರುವುದರಿಂದ. ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ ಈ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗವುದು. ಮಂಗಳೂರಿನ ತುರ್ತು ಅಗತ್ಯದ ಯೋಜನೆಯನ್ನು ಕಾಲಮಿತಿಯೊಳಗೆ ಮಾಡಿ ಜನರಿಗೆ ನೀಡುವ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು.
– ಯು.ಟಿ. ಖಾದರ್‌, ವಿಧಾನ ಸಭಾಧ್ಯಕ್ಷರು

ಉದಯವಾಣಿ ವರದಿಯಿಂದ ಮತ್ತೂಮ್ಮೆ ಭರವಸೆ ಮೂಡಿದೆ
ರಾಜ್ಯದಲ್ಲಿಯೇ ಮೊದಲ ಬಾರಿಗೆ ಎಂಬಂತೆ ಮಂಗಳೂರಿನ ಕೇಂದ್ರ ಮಾರುಕಟ್ಟೆ ಮತ್ತು ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆಯನ್ನು ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಿಒಟಿ ಸ್ವರೂಪದಲ್ಲಿ ಕಳೆದ ಸರಕಾರದ ಅವಧಿಯಲ್ಲಿ ರೂಪಿಸಲಾಯಿತು. ಕೇಂದ್ರ ಮಾರುಕಟ್ಟೆ ಕಾಮಗಾರಿ ವೇಗವಾಗಿ ಸಾಗಿ ಈಗ ಅಂತಿಮ ಹಂತಕ್ಕೆ ಬಂದಿದೆ. ಎಂಎಲ್‌ಸಿಪಿ ಯೋಜನೆ ಮಾತ್ರ ಆರಂಭಿಕವಾಗಿ ವೇಗ ಪಡೆದರೂ ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದೆ. ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು, ಸ್ಮಾರ್ಟ್‌ ಸಿಟಿ ಅಧಿಕಾರಿಗಳು ಇಲ್ಲಿರುವ ಗೊಂದಲಗಳನ್ನು ನಿವಾರಿಸಿ, ಕಾಮಗಾರಿಗೆ ವೇಗ ನೀಡಬೇಕು. ಮಂಗಳೂರಿನ ಪಾರ್ಕಿಂಗ್‌ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಎಂಎಲ್‌ಸಿಪಿ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಉದಯವಾಣಿಯ ಅಭಿಯಾನವು ಕಾಮಗಾರಿ ಮತ್ತೆ ಆರಂಭಿಸುವ ಹೊಸ ಭರವಸೆ ಉಂಟು ಮಾಡಿದೆ.
– ವೇದವ್ಯಾಸ ಕಾಮತ್‌, ಶಾಸಕರು

ಅದೇ ಗುತ್ತಿಗೆ ಸಂಸ್ಥೆಯಿಂದ ಕಾಮಗಾರಿ ಮುಂದುವರಿಕೆ
ಮಂಗಳೂರು ಸ್ಮಾರ್ಟ್‌ ಸಿಟಿಯ ಪ್ರಮುಖ ಯೋಜನೆಗಳಲ್ಲಿ ಒಂದಾ ಗಿರುವ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆ ಕೆಲವು ಕಾರಣ ಗಳಿಂದ ಸ್ಥಗಿತ ಗೊಂಡಿತ್ತು. ತಾಂತ್ರಿಕ ಹಾಗೂ ಇತರ ಕೆಲವು ವಿಚಾರಗಳಿಂದ ಕಾಮಗಾರಿ ವೇಗ ಪಡೆಯಲು ಸಾಧ್ಯವಾಗಿಲ್ಲ. ಇದೀಗ ಗುತ್ತಿಗೆ ಸಂಸ್ಥೆಯ ಪ್ರಮುಖರು ಮತ್ತೆ ನಮ್ಮನ್ನು ಸಂಪರ್ಕಿಸಿದ್ದು, ಯೋಜನೆಯನ್ನು ಮುಂದು ವರಿಸುತ್ತೇವೆ ಎಂದು ಹೇಳಿದ್ದಾರೆ. ಮುಂದುವರಿಸಲು ಅವಕಾಶವೂ ಇದೆ. ಯಾವ ರೀತಿ ಯೋಜನೆಯನ್ನು ಮುಂದುವರಿಬೇಕು ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮಗೊಳಿಸಲಾಗುವುದು.
– ರಾಜು ಕೆ. ವ್ಯವಸ್ಥಾಪಕ ನಿರ್ದೇಶಕರು, ಮಂಗಳೂರು ಸ್ಮಾರ್ಟ್‌ ಸಿಟಿ

ಚಿತ್ರ ಸಂಗ್ರಹ: ಯಜ್ಞ ಮಂಗಳೂರು

 

Advertisement

Udayavani is now on Telegram. Click here to join our channel and stay updated with the latest news.

Next