Advertisement

ಬಹುಬೆಳೆ ಬೇಸಾಯ: ರೈತನಿಗೆ ಉತ್ತಮ ಆದಾಯ

08:51 PM Feb 16, 2020 | Lakshmi GovindaRaj |

ಹಾಸನ: ಜಿಲ್ಲೆಯ ಹೊಳೆನರಸೀಪುರ ತಾಲೂಕು, ಕಸಬಾ ಹೋಬಳಿಯ ಯಲೇಚಾಗಹಳ್ಳಿ ಗ್ರಾಮದ 21 ವರ್ಷದ ಯುವ ರೈತ ರವಿ ಅವರು ತಮ್ಮ 6 ಎಕರೆ ಜಮೀನಿನಲ್ಲಿ ವಿವಿಧ ತೋಟಗಾರಿಕೆ ಬೆಳೆಗಳನ್ನು ಬೆಳೆದು ವಾರ್ಷಿಕ 20 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ.

Advertisement

ರವಿ ಅವರ ತಂದೆ ಮಲ್ಲಪ್ಪ ಅವರು ಈ ಮೊದಲು ತಮ್ಮ ಜಮೀನಿನಲ್ಲಿ ರಾಗಿ ಬೆಳೆಯುತ್ತಿದ್ದರು. ಇದರಿಂದ ಅವರಿಗೆ ಒಟ್ಟು ಆದಾಯ 5 ಲಕ್ಷ ರೂ. ಬರುತ್ತಿತ್ತು. ತದನಂತರ 2011-2012 ನೇ ಸಾಲಿನ ನಂತರದ ದಿನಗಳಲ್ಲಿ ರವಿ ಅವರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಂದ ತಾಂತ್ರಿಕ ಮಾಹಿತಿ ಪಡೆದು ವಿವಿಧ ತೋಟಗಾರಿಕೆ ಬೆಳೆಗಳಾದ ಟೊಮೆಟೋವನ್ನು ಅರ್ಧ ಎಕರೆಯಲ್ಲಿ, ಚೆಂಡು ಹೂವು -2 ಎಕರೆ, ಬೀನ್ಸ್‌- ಅರ್ಧ ಎಕರೆ, ಎಲೆಕೋಸು-2 ಎಕರೆ ಮತ್ತು 75 ತೆಂಗು ಗಿಡಗಳನ್ನು ಬೆಳೆಯಲು ಮುಂದಾದರು.

ಕೃಷಿ ಸಿಂಚಾಯಿ ಯೋಜನೆ ನೆರವು: ತೋಟಗಾರಿಕೆ ಇಲಾಖೆಯಿಂದ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಅಡಿಯಲ್ಲಿ 2018-19ನೇ ಸಾಲಿನಲ್ಲಿ 90 ಸಾವಿರ ರೂ. ಗಳ ಸಹಾಯಧನ ಪಡೆದ ರವಿ ಅವರು 2.5 ಎಕರೆಯಲ್ಲಿ ಎಲೆಕೋಸು ಮತ್ತು ಟೊಮೆಟೋ ಬೆಳೆಗಳನ್ನು ಬೆಳೆದಿದ್ದಾರೆ. ಹಾಗೆಯೇ 2018-19 ನೇ ಸಾಲಿನಲ್ಲಿ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 25ಸಾವಿರ ರೂ. ಸಹಾಯಧನ ವನ್ನು 75 ತೆಂಗಿನ ಗಿಡಗಳ ನಿರ್ವಹಣೆಗೆ ಗುಂಡಿ ತೆಗೆಯುವುದು, ನಾಟಿ ಮಾಡುವುದು, ನೀರು ಹಾಯಿಸುವುದು, ಜೊತೆಗೆ ಕಳೆ ನಿಯಂತ್ರಣಕ್ಕೆ ಬಳಸಿದ್ದಾರೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಅಡಿಯಲ್ಲಿ ಹೈಬ್ರಿಡ್‌ ತರಕಾರಿ ಬೇಸಾಯಕ್ಕೆ ಸಹಾಯಧನವಾಗಿ 1,500 ರೂ., ಹೈಬ್ರಿಡ್‌ ಟೊಮೆಟೋ ಮತ್ತು ಕ್ಯಾಪ್ಸಿಕಂ ಬೆಳೆಯ ನೆಲಹೊದಿಕೆಗೆ 6,400 ರೂ. ಸಹಾಯಧನ ಪಡೆದಿದ್ದಾರೆ. ಇಲಾಖೆಯ ಯೋಜನೆಗಳ ಸಹಾಯಧನದಿಂದ ಆರ್ಥಿಕ ನೆರವು ಪಡೆದು ಯಶಸ್ವಿ ರೈತನಾಗಿ ರವಿ ಹೊರಹೊಮ್ಮಿದ್ದಾರೆ.

ಕಡಿಮೆ ಖರ್ಚು- ಇಳುವರಿ ಹೆಚ್ಚು: ಹಿಂದೆ ರಾಗಿ ಮತ್ತು ಟೊಮೆಟೋ ಬೆಳೆಗಳನ್ನು ಬೆಳೆಯುತ್ತಿದ್ದಾಗ ವೈಜ್ಞಾನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡಿರಲಿಲ್ಲ, ಆದಾಯ ಬಂದರೂ ಖರ್ಚು ತುಂಬಾ ಇರುತ್ತಿದ್ದರಿಂದ ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ನಂತರ ತೋಟಗಾರಿಕೆ ಇಲಾಖೆಯ ಮಾರ್ಗದರ್ಶನ ಪಡೆದು ಹನಿ ನೀರಾವರಿ ಅಳವಡಿಕೆಯಿಂದ ನೀರಿನ ಸದ್ಭಳಕೆ, ಭೂಮಿಯಲ್ಲಿ ತೇವಾಂಶ ಕಾಪಾಡಲು ಮತ್ತು ಕಳೆ ನಿಯಂತ್ರಿಸಲು ನೆಲೆಹೊದಿಕೆ ಬಳಕೆಯಿಂದ ಕೂಲಿ ಆಳುಗಳ ಖರ್ಚು ಕಡಿಮೆಯಾಗುತ್ತದೆ ಮತ್ತು ಹೈಬ್ರಿಡ್‌ ತರಕಾರಿ ಬೀಜಗಳ ಬಳಕೆಯಿಂದ ಉತ್ತಮ ಇಳುವರಿ ಮತ್ತು ಹೆಚ್ಚಿನ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ.

Advertisement

ಬಹು ಬೆಳೆ ಪದ್ಧತಿ ಲಾಭದಾಯಕ: ಇಲಾಖೆಯ ಹೊಸ ತಾಂತ್ರಿಕತೆಗಳು ಹಾಗೂ ಮಾರ್ಗದರ್ಶನದಿಂದಲೇ ನಾನು ಹೆಚ್ಚಿನ ಆದಾಯಗಳಿಸಲು ಸಹಾಯವಾಯಿತು. ಒಟ್ಟು 6 ಎಕರೆಯಿಂದ 20 ಲಕ್ಷ ರೂಗಳ ಆದಾಯವನ್ನು ಪಡೆಯುತ್ತಿದ್ದೇನೆ. ಒಂದು ಬೆಳೆಯನ್ನು ನಂಬಿ ಕೃಷಿ ಮಾಡುವುದು ಸೂಕ್ತವಾದ ಬೇಸಾಯ ಪದ್ಧತಿಯಲ್ಲ, ನಾಲ್ಕೈದು ಬೆಳೆ ಮಾಡಿದರೆ ಒಂದಿಲ್ಲ ಒಂದಕ್ಕೆ ಉತ್ತಮ ಬೆಲೆ ಸಿಕ್ಕಿ ಆದಾಯ ಸ್ಥಿರವಾಗಿರುತ್ತದೆ, ಜಮೀನನ್ನು ವೈಜ್ಞಾನಿಕವಾಗಿ ವಿಂಗಡಣೆ ಮಾಡಿ ಬಹು ಬೆಳೆ ಮಾಡಿದರೆ ನಷ್ಟದ ಮಾತಿಲ್ಲ. ರೈತರು ಇಲಾಖೆಯ ಸದುಪಯೋಗ ಪಡೆದುಕೊಳ್ಳಬೇಕು ಎಂಬುದು ರವಿ ಅವರ ಸಲಹೆ.

Advertisement

Udayavani is now on Telegram. Click here to join our channel and stay updated with the latest news.

Next