ಸ್ನೇಹಿತರೊಂದಿಗೆ ಗೊತ್ತಿಲ್ಲದ, ಎಷ್ಟೇ ಕಷ್ಟಕರವಾದ ದಾರಿಯೂ ಸುಗಮವಾಗುತ್ತದೆ ಎಂಬ ಮಾತಿದೆ. ನಾವು 9 ಮಂದಿ ಸ್ನೇಹಿತರೊಡಗೂಡಿ ಮುಳ್ಳಯನ ಗಿರಿ ಹತ್ತಲು ಹೊರಟಾಗ ಈ ಮಾತು ಅನುಭವಕ್ಕೂ ಬಂತು. ನೂರಾರು ನೆನಪುಗಳನ್ನು ಕಟ್ಟಿಕೊಟ್ಟ ಆ ಒಂದು ದಿನ ಬದುಕಿಗೆ ಅತ್ಯಂತ ಸಂಭ್ರಮದ ಕ್ಷಣಗಳನ್ನು ಕಟ್ಟಿಕೊಟ್ಟಿತು ಎಂದರೆ ತಪ್ಪಗಾಲಾರದು.
ಚಳಿಗಾಲದಲ್ಲಿ ಬೆಚ್ಚಗೆ ಹಾಸಿಗೆಯನ್ನು ತಬ್ಬಿ ಮಲಗುವ ನಾವು ಅಂದು ಮಾತ್ರ ಅದರ ಪರಿವೇ ಇಲ್ಲದೆ ಮುಳ್ಳಯನಗಿರಿಯತ್ತ ಹೊರಡಲು ಸಿದ್ಧರಾಗಿದ್ದೆವು. ಹಿಂದಿನ ರಾತ್ರಿ ಪ್ರಯಾಣಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳೆಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಗೊಳಿಸಿದ್ದರಿಂದ ಮರುದಿನ ಬೆಳಗ್ಗೆ ಬೇಗ ಎದ್ದು ಹೊರಡಲು ಅನುಕೂಲವಾಯಿತು.
ನಮ್ಮದು 9 ಜನರ ತಂಡ. ಒಂದೇ ವಯಸ್ಸಿನವರಲ್ಲದಿದ್ದರೂ ನಮ್ಮ ವ್ಯಕ್ತಿತ್ವ, ಆಲೋಚನೆ ಎಲ್ಲವೂ ಒಂದೇ. ರಜೆ ಬಂತೆಂದರೆ ಸಾಕು ನಮ್ಮ ಸುತ್ತಾಟ ಶುರುವಾಗುತ್ತದೆ. ಉಜಿರೆಯ ಪಿಜಿಯಿಂದ ಮುಂಜಾನೆ ಸುಮಾರು 6 ಗಂಟೆಗೆ ಹೊರಟ ನಾವು ಮೊದಲೇ ಯೋಚಿಸಿದಂತೆ ಚುಮುಚುಮು ಚಳಿಯಲ್ಲಿ ಬಸ್ಸನ್ನೇರಿ ಚಾರ್ಮಾಡಿ ಘಾಟ್‌ನಿಂದ ಪಶ್ಚಿಮ ಘಟ್ಟಗಳತ್ತ ಸಂಚರಿಸತೊಡಗಿದೆವು. ಬಸ್ಸಿನಲ್ಲಿ ಕುಳಿತಾಗ ಮುಂದಿನ ದಾರಿಯ ಕುರಿತು ಕುತೂಹಲ, ಪ್ರಕೃತಿ ಸೌಂದರ್ಯದ ವರ್ಣನೆಯೇ ಹೆಚ್ಚಾಗಿದ್ದರಿಂದ ಬಸ್ಸಿನಲ್ಲಿ ಪ್ರಯಾಣ ಮಾಡುವುದು ಕಷ್ಟ ಎನ್ನುವವರೂ ಎಲ್ಲವನ್ನೂ ಮರೆತಂತೆ ಕುಳಿತಿದ್ದರು.
ಸುಮಾರು 10 ಗಂಟೆ ವೇಳೆಗೆ ಬೆಟ್ಟದ ಕೆಳಗಿರುವ ಮುಳ್ಳಪ್ಪ ಸ್ವಾಮಿ ಬೆಟ್ಟಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಮುಗಿಸಿ ಪಕ್ಕದಲ್ಲಿದ್ದ ಹಣ್ಣಿನ ಅಂಗಡಿಯಲ್ಲಿ ಹೊಟ್ಟೆ ತುಂಬುವಷ್ಟು ಹಣ್ಣುಗಳನ್ನು ಸವಿದೆವು. ಸ್ವಲ್ಲ ತಿಂಡಿ ಕಟ್ಟಿಕೊಂಡು ಮುಳ್ಳಯ್ಯನ ಗಿರಿಯತ್ತ ಪ್ರಯಾಣ ಆರಂಭಿಸಿದೆವು. ಖಾಸಗಿ ವಾಹನವಿದ್ದರೆ ಸ್ವಲ್ಪ ದೂರದವರೆಗೆ ಹೋಗಬಹುದಿತ್ತು. ಆದರೆ ನಾವು ಅದರ ಗೋಜಿಗೆ ಹೋಗದೆ ನಡೆದೇ ಹೋಗುವ ತೀರ್ಮಾನ ಕೈಗೊಂಡಿದ್ದರಿಂದ ಗುಂಪು ಕಟ್ಟಿ ಬೆಟ್ಟ ಏರಲು ಅಣಿಯಾದೆವು. ವಿಪರ್ಯಾಸವೆಂದರೆ ನಾವೆಲ್ಲರೂ ಮೊದಲ ಬಾರಿಗೆ ಬೆಟ್ಟ ಏರುತ್ತಿದ್ದರೂ ದಣಿವು ಕಾಣಿಸಲಿಲ್ಲ. ಅಲ್ಲಿ ಕೆಲವು ಕಡೆ ಸಮತಟ್ಟಾದ ದಾರಿ, ಇನ್ನು ಕೆಲವೆಡೆ ಏರು, ಮತ್ತೆ ಹಲವೆಡೆ ಇಳಿಜಾರು… ಕೆಲವೊಮ್ಮೆ ಕಡಿದಾದ ದಾರಿ ಎತ್ತರದ ಕಲ್ಲುಗಳನ್ನು ಹತ್ತಿ ಬಂದೆವು.
ದಾರಿಯ ಮಧ್ಯೆ ಅಲ್ಲಲ್ಲಿ ವಿರಮಿಸುತ್ತಿದ್ದೆವು. ಪ್ರಕೃತಿಯ ಸೊಬಗನ್ನು ನೋಡುತ್ತಾ ಫೋಟೋ ಸೆಶನ್ ಗಳನ್ನು ಮಾಡುತ್ತಿದ್ದೆವು. ತಂಪಾದ ಗಾಳಿ ಹಚ್ಚ ಹಸುರಿನ ಪರ್ವತದ ಸೊಬಗನ್ನು ನೋಡಲು ನಮ್ಮ ಎರಡು ಕಣ್ಣುಗಳೂ ಸಾಲದಾಯಿತು. ಮೊದಲೇ ಫೋಟೋ ತೆಗೆಸಿಕೊಳ್ಳುವುದರಲ್ಲಿ ನಾವು 9 ಜನರೂ ನಿಸ್ಸಿಮರು. ಅದಕ್ಕೆ ಸರಿ ಹೊಂದುವಂತೆ ಇರುವ ಅಲ್ಲಿಯ ಪರಿಸರ ಎಲ್ಲವೂ ಕೂಡ ನಮಗೆ ಹೇಳಿ ಮಾಡಿಸಿದಂತೆ ಇತ್ತು. ಅಲ್ಲಲ್ಲಿ ದಣಿವಾರಿಸಿಕೊಂಡು ಸುಮಾರು 1.930 ಮೀ. ಉದ್ದದ ಬೆಟ್ಟವನ್ನು ಹತ್ತಿದೆವು. ಎಷ್ಟೇ ದಣಿವಾದರೂ ತೋರಗೊಡದೆ ಮುಂದೆ ಮುಂದೆ ಸಾಗುತ್ತಲೇ ಇದ್ದೆವು. ಎಷ್ಟು ಹತ್ತಿದರೂ ನಮಗೆ ಬೆಟ್ಟದ ತುದಿ ಮಾತ್ರ ಕಾಣುತ್ತಿರಲಿಲ್ಲ. ಇನ್ನೂ ದಾರಿ ಇದೆ ಮತ್ತೂ ಇದೆ ಎನ್ನುವ ನಮ್ಮ ಗುಂಪಿನವರು ಅವರೊಂದಿಗೆ ಹತ್ತುವ ಆ ಸಂಭ್ರಮ ಯಾವತ್ತಿಗೂ ಮರೆಯಲಾಗದ್ದು, ಮುಕ್ಕಾಲು ಭಾಗ ಹತ್ತಿದ ಮೇಲೆ ನಮಗೆ ಸಿಮೆಂಟ್ ರೋಡ್‌ನ ದರ್ಶನವಾಯಿತು. ಒಂದು ವೇಳೆ ವಾಹನದಲ್ಲಿ ಬರುವುದಿದ್ದರೆ ಅದಕ್ಕೆ ಸಮಯದ ಮಿತಿಯಿದೆ. ಅದು ದಿನದ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಅಲ್ಲಿ ಕೇಳಿ ತಿಳಿದೆವು.
ಅಲ್ಲಿಂದ ಮುಂದೆ ಮೆಟ್ಟಿಲುಗಳನ್ನು ಏರಿ, ಕಡಿದಾದ ದಾರಿಯಲ್ಲಿ ಸಾಗಿದ ಬೆಟ್ಟ ಸನಿಹವಾದಂತೆ ಕಂಡು ಬಂತು. ಅಲ್ಲಿ ನಿಂತು ಪ್ರಕೃತಿ ಸೌಂದರ್ಯವನ್ನು ಸವಿಯುವುದೇ ಕಣ್ಣಿಗೆ ಹಬ್ಬ. ಮಳೆ, ಚಳಿಗಾಲದಲ್ಲಿ ಇಲ್ಲಿ ಮಂಜು ಆವರಿಸಿಕೊಂಡಿರುತ್ತದೆ. ನಾವು ಈ ಮಂಜನ್ನು ಸೀಳಿಕೊಂಡು ಮುಂದೆ ಸಾಗಿದಾಗ ಕಲ್ಲಿನಿಂದ ನಿರ್ಮಿಸಿದ ದ್ವಾರ ಕಂಡಿತು. ಅಲ್ಲಿಂದ ಮುಂದೆ ದೇವಸ್ಥಾನವೊಂದಿದೆ. ಅಲ್ಲಿ ದೇವರ ದರ್ಶನ ಪಡೆದು ಬಂದಾಗ ಅಷ್ಟು ಎತ್ತರದ ಪರ್ವತ ಏರಿದ ಸಂಭ್ರಮ ಒಂದು ಕಡೆಯಾದರೆ ಕರ್ನಾಟಕದ ಅತಿ ದೊಡ್ಡ ಪರ್ವತ ಏರಿದೆವು ಎನ್ನುವ ಖುಷಿ ಮತ್ತೊಂದು ಕಡೆಯಾಗಿತ್ತು. ಅಲ್ಲೇ ಇದ್ದ ಟ್ಯಾಪ್ ವೊಂದರಿಂದ ನೀರು ಕುಡಿದು ದಣಿವಾರಿಸಿಕೊಂಡೆವು. μÅಜ್ ನಲ್ಲಿಟ್ಟ ನೀರಿಗಿಂತಲೂ ತಂಪಾಗಿತ್ತು ಆ ನೀರು. ಅಲ್ಲಿಯ ಸೊಬಗನ್ನು ಸವಿಯುತ್ತ ಸಂಜೆಯಾದದ್ದೇ ತಿಳಿಯಲಿಲ್ಲ. ಕತ್ತಲಾವರಿಸುತ್ತಿದ್ದಂತೆ ಹತ್ತಿರವಿರುವ ಸ್ನೇಹಿತೆಯ ಮನೆಗೆ ತೆರಳಿದೆವು.
ರೂಟ್ ಮ್ಯಾಪ್
. ಮಂಗಳೂರಿನಿಂದ 172 ಕಿ.ಮೀ. ದೂರ.
. ಬೆಟ್ಟದ ಅರ್ಧದವರೆಗೆ ಖಾಸಗಿ ವಾಹನಗಳ ಮೂಲಕ ತೆರಳಬಹುದು.
· ಬೆಟ್ಟ ಹತ್ತುವಾಗ ನೀರು, ತಿಂಡಿ ಜತೆಗೆ ಇರಲಿ. ಮಳೆಗಾಲದಲ್ಲಿ ಪ್ರಯಾಣ ಬೇಡ.
· ಹತ್ತಿರದಲ್ಲಿದೆ ಝರಿ ವಾಟರ್ ಫಾಲ್ಸ್, ಹೀರೆಕೊಳಲೆ ಲೇಕ್, ಬಾಬಾಬುಡನ್ ಗಿರಿ, ರಾಕ್ ಗಾರ್ಡನ್.
ಪ್ರೀತಿ ಭಟ್ ಗುಣವಂತೆ