ಮುಲ್ಕಿ ಸುಂದರರಾಮ ಶೆಟ್ಟಿ ಸಂಸ್ಮರಣೆ -2017
ಮಂಗಳೂರು: ಮಂಗಳೂರಿನ ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರ ರಾಮ ಶೆಟ್ಟಿ ರಸ್ತೆ ಎಂಬುದಾಗಿ ನಾಮಕರಣಕ್ಕೆ ಸರಕಾರ ನೀಡಿರುವ ತಡೆಯಾಜ್ಞೆಯನ್ನು ತ್‌ಕ್ಷಣ ತೆರವುಗೊಳಿಸಬೇಕು ಹಾಗೂ ನಾಮಕರಣಗೊಳಿಸಿ ಈ ಹಿಂದೆ ಸರಕಾರ ಹೊರಡಿಸಿರುವ ಆದೇಶವನ್ನು ಜಾರಿಗೊಳಿಸಬೇಕು ಎಂದು ಶನಿವಾರ ನಗರದಲ್ಲಿ ಜರಗಿದ ಮುಲ್ಕಿ ಸುಂದರರಾಮ ಶೆಟ್ಟಿ ಸಂಸ್ಮರಣೆ ಕಾರ್ಯ ಕ್ರಮದಲ್ಲಿ ಆಗ್ರಹಿಸಲಾಯಿತು. ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗ ಹಾಗೂ ವಿಜಯ ಬ್ಯಾಂಕ್ ವರ್ಕರ್ ಹಾಗೂ ಆಫೀಸರ್ ಯೂನಿಯನ್ ಮಂಗಳೂರು ವಲಯ ವತಿಯಿಂದ ಪುರಭವನದಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ, ಮಹಾನ್ ಸಾಧಕ ಮುಲ್ಕಿ ಸುಂದರ ರಾಮ ಶೆಟ್ಟಿಯವರ ಹೆಸರನ್ನು ರಸ್ತೆಗೆ ಇಡುವುದಕ್ಕೆ ಆಕ್ಷೇಪ ನೋವಿನ ವಿಚಾರ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಹಾಗೂ ಮುಲ್ಕಿ ಸುಂದರರಾಮ ಶೆಟ್ಟಿ ಅಭಿಮಾನಿ ಬಳಗದ ಕಾರ್ಯಾಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ಅವರು ಲೈಟ್‌ಹೌಸ್ ಹಿಲ್ ರಸ್ತೆಗೆ ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ನಾಮಕರಣ ಪ್ರಕ್ರಿಯೆ ಕಾನೂನು ಬದ್ಧವಾಗಿಯೇ ನಡೆದಿದೆ. ಈ ರಸ್ತೆಗೆ ಸರಕಾರದ ಆದೇಶದಂತೆ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರು ಇಡಬೇಕು ಎಂಬುದು ನಮ್ಮ ಹಕ್ಕೊತ್ತಾಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಇಂಟರ್ ನ್ಯಾಶನಲ್ ಬಂಟ್ಸ್ ವೆಲ್ಪೇರ್ ಟ್ರಸ್ಟ್‌ನ ಅಧ್ಯಕ್ಷ ಹಾಗೂ ಅಭಿಮಾನಿ ಬಳಗದ ಗೌರವಾಧ್ಯಕ್ಷ ಎ. ಸದಾನಂದ ಶೆಟ್ಟಿ ಮಾತನಾಡಿ, ಸುಂದರರಾಮ ಶೆಟ್ಟಿ ಅವರು ಜಾತಿ, ಮತ ಮೀರಿ ಸಮಾಜದ ಕೆಲಸ ಮಾಡಿದ್ದಾರೆ. ರಸ್ತೆಗೆ ಹೆಸರಿಡುವ ವಿಷಯದಲ್ಲಿ ಆಕ್ಷೇಪಗಳನ್ನು ಎತ್ತಿರುವುದು ಸರಿಯಲ್ಲ ಎಂದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮೂಲ್ಕಿ ದುಗ್ಗಣ್ಣ ಸಾವಂತರು, ಪ್ರೊ| ಎಂ.ಬಿ. ಪುರಾಣಿಕ್ ಮೊದಲಾದವರು ಮಾತನಾಡಿದರು. ಎ.ಜೆ. ಶೆಟ್ಟಿ, ವಿಜಯ ಕುಮಾರ್ ಶೆಟ್ಟಿ, ಅಪ್ಪಣ್ಣ ಹೆಗ್ಡೆ, ಮೋನಪ್ಪ ಭಂಡಾರಿ, ಗಣೇಶ್ ಹೊಸಬೆಟ್ಟು, ಶಶಿಧರ ಹೆಗ್ಡೆ, ಮಹಾಬರ್ಲ ಮಾರ್ಲ, ಪ್ರದೀಪ್ ಕುಮಾರ್ ಕಲ್ಕೂರ, ಹನುಮಂತ ಕಾಮತ್, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಬದ್ರಿನಾಥ್ ಕಾಮತ್, ದೇವಿಪ್ರಸಾದ್ ಶೆಟ್ಟಿ, ಟಿ.ಕೆ. ರಾಜನ್, ಅರವಿಂದ ಪೂಂಜ, ಸವಣೂರು ಸೀತಾರಾಮ ರೈ, ಡಾ| ಆಶಾಜ್ಯೋತಿ ರೈ, ವಿಜಯಲಕ್ಷ್ಮೀ ಶೆಟ್ಟಿ, ಮನೋಹರ ಶೆಟ್ಟಿ, ದೇವಾನಂದ ಶೆಟ್ಟಿ, ಎ.ಬಿ. ಶೆಟ್ಟಿ, ಸದಾನಂದ ರೈ ಕಾಸರಗೋಡು, ಸಂತೋಷ್ ಕುಮಾರ್ ಶೆಟ್ಟಿ, ಡಾ| ಭರತ್ ಶೆಟ್ಟಿ, ಕಾಪು ಲೀಲಾಧರ ಶೆಟ್ಟಿ, ಸುಧಾಕರ ಶೆಟ್ಟಿ, ನಿಟ್ಟೆಗುತ್ತು ರವಿರಾಜ ಶೆಟ್ಟಿ, ವಸಂತ ಶೆಟ್ಟಿ, ವಿ.ಜಿ. ಪಾಲ್, ಮೂಲ್ಕಿ ಕರುಣಾಕರ ಶೆಟ್ಟಿ, ಸೀತಾಚರಣ್ ಶೆಟ್ಟಿ, ಶ್ರೀಧರ್ ಶೆಟ್ಟಿ, ರಘರಾಮ ಸುವರ್ಣ ಉಪಸ್ಥಿತರಿದ್ದರು. ಬಿ. ನಾಗರಾಜ ಶೆಟ್ಟಿ ಸ್ವಾಗತಿಸಿದರು. ರಾಜಗೋಪಾಲ ರೈ ವಂದಿಸಿದರು. ಕದ್ರಿ ನವನೀತ ಶೆಟ್ಟಿ, ಅಡ್ಯಾರ್ ಪುರುಷೋತ್ತಮ ಭಂಡಾರಿ, ಸಾಹಿಲ್ ರೈ ನಿರೂಪಿಸಿದರು.