ಉಡುಪಿ/ಮಂಗಳೂರು:ಮಂಗಳೂರಿನ ಲೈಟ್‌ಹೌಸ್ ರಸ್ತೆಗೆ ವಿಜಯ ಬ್ಯಾಂಕ್ ಶಿಲ್ಪಿ ಮುಲ್ಕಿ ಸುಂದರರಾಮ ಶೆಟ್ಟಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಮಂಗಳೂರು ಪುರಭವನದಲ್ಲಿ ಜು. 29ರಂದು ನಡೆಯುವ ಉದ್ಘಾಟನಾ ಸಮಾರಂಭಕ್ಕೆ ಆಶೀರ್ವಾದ ಕೋರಲು ಭೇಟಿಯಾದ ಸಂಘಟನೆಗಳ ಮುಖ್ಯಸ್ಥ ರೊಂದಿಗೆ ಮಾತನಾಡಿದ ಪರ್ಯಾಯ ಶ್ರೀ ಪೇಜಾವರ ಶ್ರೀಗಳು ಸರಕಾರ, ಸಂಬಂಧಪಟ್ಟ ಇಲಾಖೆಗಳು, ಪ್ರಯತ್ನ ಮಾಡಿದ ವಿಜಯ ಬ್ಯಾಂಕ್ ವರ್ಕರ್ಆರ್ಗನೈಸೇಶನ್ ಮತ್ತು ಆಫೀಸರ್ ಯೂನಿಯನ್ ಸಂಘಟನೆಯನ್ನು ಅಭಿನಂದಿಸಿದರು.
ಒಬ್ಬರ ಬದುಕು ಇನ್ನೊಬ್ಬರ ಬದುಕಿಗೆ ಪೂರಕವಾಗಿದ್ದರೆ ಅವರ ಜೀವನ ಸಾರ್ಥಕವೆನಿಸುತ್ತದೆ. ಈ ನಿಟ್ಟಿನಲ್ಲಿ ಸುಂದರರಾಮ ಶೆಟ್ಟಿಯವರ ಹೆಸರು ಜನಮನದಲ್ಲಿ ಉಳಿಯಲು 2010ರಿಂದ ಸಂಘಟನೆಯು ವಿವಿಧ ಚಟುವಟಿಕೆಗಳನ್ನು ವರ್ಷಂಪ್ರತಿ ಏರ್ಪಡಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮ ಉದ್ಘಾಟನೆಗೊಂಡದ್ದು ಪೇಜಾವರ ಶ್ರೀಗಳಿಂದ. ಸಂಘಟ ನೆಯು ಶೆಟ್ಟಿಯವರ ಹೆಸರು ಶಾಶ್ವತ ವಾಗಿ ಉಳಿಯುವಂತೆ ಮಾಡಿದ ಪ್ರಯತ್ನಗಳಲ್ಲಿ ರಸ್ತೆ ನಾಮಕರಣವೂ ಒಂದಾಗಿದೆ. ಸುಂದರರಾಮ ಶೆಟ್ಟಿಯವರ ಆಡಳಿತಾವಧಿ ಚಾರಿತ್ರಿಕವಾಗಿದ್ದು ದಕ್ಷ, ಪ್ರಾಮಾಣಿಕ ಆಡಳಿತದಿಂದ ಜಾತ್ಯ ತೀತವಾಗಿ ಸಾವಿರಾರು ಯುವಕ-ಯುವತಿಯರಿಗೆ ಉದ್ಯೋಗ ನೀಡಿದ ಅವರು ಅವಿಭಜಿತ ದ.ಕ. ಜಿಲ್ಲೆಯ ಅಭಿವೃದ್ಧಿಗೆ ವಿಶಿಷ್ಟ ಕೊಡುಗೆ ಸಲ್ಲಿಸಿದ್ದಾರೆ. ಸಮಾಜವು ಧೀಮಂತ ನಾಯಕರನ್ನು ಮರೆಯಬಾರದು ಎಂದು ಶ್ರೀಗಳು ಈ ಸಂದರ್ಭದಲ್ಲಿ ತಿಳಿಸಿದರು.
ಅಖೀಲ ಭಾರತ ತುಳು ಒಕ್ಕೂಟದ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ವಿಜಯ ಬ್ಯಾಂಕ್ ವರ್ಕರ್ ಆರ್ಗನೈಸೇಶನ್ ಅಧ್ಯಕ್ಷ ಶ್ರೀಧರ ಶೆಟ್ಟಿ ಎಂ., ವಲಯ ಕಾರ್ಯದರ್ಶಿ ರಘುರಾಮ ಸುವರ್ಣ, ಮಾಜಿ ಅಧ್ಯಕ್ಷ ಸೀತಾಚರಣ್ ಶೆಟ್ಟಿ, ಆಫೀಸರ್ ಯೂನಿಯನ್ ಮಾಜಿ ಅಧ್ಯಕ್ಷ ಮೂಲ್ಕಿ ಕರುಣಾಕರ ಶೆಟ್ಟಿ, ಶೋಭಾ ಕರುಣಾಕರ ಶೆಟ್ಟಿ, ನಿವೃತ್ತ ಪ್ರಬಂಧಕ ರಮೇಶ ಶೆಟ್ಟಿ ಉಡುಪಿ ಉಪಸ್ಥಿತರಿದ್ದರು.