Advertisement
ರೈತರ ಅಭ್ಯುದಯದ ದೃಷ್ಟಿಯಿಂದ ಹುಟ್ಟಿದ ವಿಜಯ ಬ್ಯಾಂಕ್ನಲ್ಲಿ ಆಸ್ತಿ ಕಳಕೊಂಡ ಯುವಕ- ಯುವತಿಯರಿಗೆ ಜಾತಿಮತ ಭೇದವಿಲ್ಲದೆ ಉದ್ಯೋಗ ಕೊಟ್ಟು ಸಮಾಜದಲ್ಲಿ ಉತ್ತಮ ಸ್ಥಾನಮಾನಕ್ಕೆ ಕಾರಣರಾಗಿ ವಿಜಯಾ ಬ್ಯಾಂಕಿನ ಕೀರ್ತಿಯನ್ನು ಶಿಖರಕ್ಕೇರಿಸಿದವರು ಮೂಲ್ಕಿ ಸುಂದರರಾಮ್ ಶೆಟ್ಟಿ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಎಲ್ಲೆಡೆ ಮೂಲ್ಕಿ ಸುಂದರರಾಮ್ ಶೆಟ್ಟಿಯವರು ಇಂದಿಗೂ ಮನೆಮಾತಾಗಿದ್ದಾರೆ. ಶ್ರೇಷ್ಠ ಚಿಂತಕರಾಗಿ, ದೂರದೃಷ್ಟಿಯ ಬ್ಯಾಂಕರ್ ಆಗಿ, ಸಾಹಸಮಯಿಯಾಗಿ, ನುಡಿದಂತೆ ನಡೆದ ಈ ಮಹಾನ್ ವ್ಯಕ್ತಿಯ ಬದುಕು ಮತ್ತು ಅವರು ಕೈಗೊಂಡ ಕೆಲಸಗಳ ಸಾಧನೆಗಳು ರೋಚಕವಾಗಿವೆ.
Related Articles
Advertisement
1969ರ ಜುಲೈ ತಿಂಗಳಿನಲ್ಲಿ ದೇಶದ 14 ದೊಡ್ಡ ದೊಡ್ಡ ಖಾಸಗೀ ಬ್ಯಾಂಕ್ಗಳು ರಾಷ್ಟ್ರೀಕರಣಗೊಂಡ ಸಮಯದಲ್ಲಿ ರಾಷ್ಟ್ರೀಕರಣವಾಗದ ವಿಜಯಾ ಬ್ಯಾಂಕಿನ ಪೂರ್ಣಾವಧಿಯ ಅಧ್ಯಕ್ಷರಾಗಿ 1969 ರಿಂದ 1979ರ ತನಕ ಸೇವೆ ಸಲ್ಲಿಸಿದ ಸುಂದರರಾಮ್ ಶೆಟ್ಟಿಯವರು ಬ್ಯಾಂಕಿನ ಅತ್ಯದ್ಭುತ ಯಶಸ್ಸಿಗೆ ಕಾರಣಕರ್ತರಾದರು. ಅವರ ಅಧ್ಯಕ್ಷಾವಧಿ ಬ್ಯಾಂಕಿನ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯುವಂತಹದು. ಬ್ಯಾಂಕಿನ ಅಭಿವೃದ್ಧಿಯ ಅನುಕೂಲತೆಗಾಗಿ ಬ್ಯಾಂಕಿನ ಪ್ರಧಾನ ಕಚೇರಿಯನ್ನು ಮಂಗಳೂರಿನಿಂದ ಬೆಂಗಳೂರಿಗೆ ಸ್ಥಳಾಂತರಿಸಿದ ಸುಂದರರಾಮ್ ಶೆಟ್ಟಿಯವರು ಈ ಅವಧಿಯಲ್ಲಿ 550 ಹೊಸ ಬ್ಯಾಂಕ್ ಶಾಖೆಗಳನ್ನು ದೇಶಾದ್ಯಂತ ತೆರೆದು ಬ್ಯಾಂಕಿನ ಸಿಬಂದಿ ಸಂಖ್ಯೆಯನ್ನು 9,000ಕ್ಕೆ ಏರಿಸಿದರು. ದಕ್ಷಿಣಕನ್ನಡ ಜಿಲ್ಲೆಯ ಸಣ್ಣ ಬ್ಯಾಂಕ್ ಎಂಬುದಾಗಿ ಪರಿಗಣಿಸಲ್ಪಡುತ್ತಿದ್ದ ವಿಜಯ ಬ್ಯಾಂಕ್ನ ಶಾಖೆಗಳನ್ನು ದೇಶದ ಉದ್ದಗಲಕ್ಕೂ ಪಸರಿಸಿ, ಬೆಳೆಸಿ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು ಸುಂದರರಾಮ್ ಶೆಟ್ಟಿಯವರ ಬಹುದೊಡ್ಡ ಸಾಧನೆ. ಭೂ ಸುಧಾರಣಾ ಕಾಯ್ದೆ ಅನ್ವಯ ದಕ್ಷಿಣಕನ್ನಡದಲ್ಲಿ ಸಾವಿರಾರು ಜನ ತಮ್ಮ ಕೃಷಿ ಭೂಮಿ ಕಳೆದುಕೊಂಡು ಯಾವ ಆದಾಯದ ಮೂಲವೂ ಇಲ್ಲದೆಯೇ ನಿರ್ಗತಿಕರಾದಾಗ ಸಂಕಷ್ಟದಲ್ಲಿದ್ದ ಅಂತಹ ಕುಟುಂಬಗಳಿಗೆ, ಬಡ ಕುಟುಂಬಗಳ ಯುವಕ-ಯುವತಿಯರಿಗೆ, ವಿಧವೆಯರಿಗೆ, ಅಂಗವಿಕಲರಿಗೆ ಬ್ಯಾಂಕಿನಲ್ಲಿ ಉದ್ಯೋಗ ನೀಡಿದ್ದರ ಫಲವಾಗಿ ಅವರೆಲ್ಲರ ಆರ್ಥಿಕ ಚೈತನ್ಯ ಪಡೆಯುವಲ್ಲಿ ಸುಂದರರಾಮ್ ಶೆಟ್ಟಿಯವರು ಮಹತ್ತರ ಪಾತ್ರ ವಹಿಸಿದರು. ಹಲವಾರು ಕುಗ್ರಾಮಗಳಲ್ಲಿ ಕೂಡ ವಿಜಯಾ ಬ್ಯಾಂಕಿನ ಶಾಖೆಗಳನ್ನು ತೆರೆದು ಕೃಷಿವಲಯದಲ್ಲಿ ಗ್ರಾಮೀಣ ಜನರ ಬದುಕು ಹಸನಾಗುವುದರಲ್ಲಿ ನೆರವಾಗಿ ದೀನರ ಬದುಕಿನ ಬಗ್ಗೆ ತಮಗಿದ್ದ ಕಾಳಜಿಯಿಂದ ಸಮಾಜವನ್ನು ಎತ್ತಿ ಹಿಡಿಯುವ ಶಕ್ತಿಯಾದರು. ಸುಂದರರಾಮ್ ಶೆಟ್ಟಿಯವರು ಅಜಾನುಬಾಹು, ಸುರೂಪಿ. ಅವರ ಒಟ್ಟು ವ್ಯಕ್ತಿತ್ವದಲ್ಲಿ ಘನತೆ, ಗಾಂಭೀರ್ಯಗಳು ಅಚ್ಚೊತ್ತಿದ್ದವು. ಯಾರಿಗೇ ಆದರೂ ಅವರ ಮೊದಲ ಭೇಟಿಯಲ್ಲಿಯೇ ಮಹಾನ್ ವ್ಯಕ್ತಿಯನ್ನು ಕಂಡ ಅನುಭೂತಿಯಾಗುತ್ತಿತ್ತು. ಈ ಕಾಲದಲ್ಲಿ ಅನೇಕರು ಹೇಗೋ ದಕ್ಕಿಸಿಕೊಂಡ ಸ್ಥಾನದಿಂದ ದೊಡ್ಡವರು ಅನಿಸಿಕೊಳ್ಳುತ್ತಾರೆ. ಆದರೆ ಸುಂದರರಾಮ್ ಶೆಟ್ಟಿಯವರ ವ್ಯಕ್ತಿತ್ವದ ಹಿರಿಮೆಯಿಂದ ಸಮಾಜದ ಗೌರವಯುತ ಸ್ಥಾನಮಾನಗಳು ಅವರನ್ನು ಅರಸಿಕೊಂಡು ಬರುತ್ತಿದ್ದವು.
ಸ್ಥಿತಪ್ರಜ್ಞ ಸುಂದರ್ರಾಮ್ ಶೆಟ್ಟಿ: ಮಣಿಪಾಲದ ಪೈ ಕುಟುಂಬದ ಶ್ರೇಷ್ಠ ವ್ಯಕ್ತಿಗಳಾದ ಡಾ| ಟಿ.ಎಂ.ಎ. ಪೈ, ಟಿ. ಎ. ಪೈ ಮತ್ತು ಕೆ. ಕೆ. ಪೈ ಅವರೊಂದಿಗೆ ಅತ್ಯಂತ ಅನ್ಯೋನ್ಯ ಸಂಬಂಧವಿಟ್ಟುಕೊಂಡಿದ್ದ ಸುಂದರರಾಮ್ ಶೆಟ್ಟಿಯವರು ಟಿ. ಎ. ಪೈ ಮತ್ತು ಕೆ.ಕೆ. ಪೈ ಅವರಿಂದ ಮಾರ್ಗದರ್ಶನ ಪಡೆಯುತ್ತಿದ್ದರು. ಇಂತಹ ಅನ್ಯೋನ್ಯತೆಯ ಸಂದರ್ಭದಲ್ಲಿ ಒಮ್ಮೆ ಅಗ್ನಿ ಪರೀಕ್ಷೆಯನ್ನು ಅವರು ಎದುರಿಸಬೇಕಾಯಿತು. ತುರ್ತು ಪರಿಸ್ಥಿತಿಯ ಅತಿರೇಕಗಳಿಂದ ಪ್ರಧಾನಿ ಪಟ್ಟವನ್ನು ಕಳಕೊಂಡು ಮರಳಿ ಪ್ರಧಾನಿಯಾಗಲು ಪ್ರಯತ್ನಿಸುತ್ತಿದ್ದ ಇಂದಿರಾ ಗಾಂಧಿಯವರು 1980ರ ಲೋಕಸಭಾ ಚುನಾವಣೆಯ ತಯಾರಿ ನಡೆಸುವಾಗ ಸುಂದರರಾಮ್ ಶೆಟ್ಟಿಯವರನ್ನು ಉಡುಪಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿಸಲು ಆಗಿನ ಕರ್ನಾಟಕದ ಮುಖ್ಯಮಂತ್ರಿ ಗುಂಡುರಾಯರ ಮೂಲಕ ಸೂಚನೆ ಕಳುಹಿಸಿದರು. ಇಂದಿರಾ ಕಾಂಗ್ರೆಸ್ನ ವಿರುದ್ಧ ಟಿ. ಎ. ಪೈಯವರು ಉಡುಪಿ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲಿದ್ದು, ಅವರನ್ನು ಎದುರಿಸಲು ಸುಂದರರಾಮ್ ಶೆಟ್ಟಿಯವರೇ ಸೂಕ್ತ ವ್ಯಕ್ತಿ ಎಂಬುದು ಇಂದಿರಾ ಗಾಂಧಿಯವರ ಅಭಿಪ್ರಾಯವಾಗಿತ್ತು. ಗೆದ್ದರೆ ಮುಂದೆ ಅಧಿಕಾರಕ್ಕೆ ಬರಬಹುದಾದ ಕೇಂದ್ರದ ತನ್ನ ಮಂತ್ರಿ ಮಂಡಳದಲ್ಲಿ ಸ್ಥಾನ ನೀಡುವುದಾಗಿಯೂ ಸೂಚನೆ ನೀಡಿದ್ದರು. ಆದರೆ ಸುಂದರರಾಮ್ ಶೆಟ್ಟಿಯವರು ಸ್ಥಿಪ್ರಜ್ಞತೆ ಪ್ರದರ್ಶಿಸಿದ, ತನ್ನ ಮಿತ್ರ ಟಿ.ಎ. ಪೈಯವರ ಎದುರು ತಾನು ಸ್ಪರ್ಧಿಸಲಾರೆ ಎಂದು ಇಂದಿರಾರ ಸೂಚನೆಯನ್ನು ನಯವಾಗಿ ತಿರಸ್ಕರಿಸಿದರು. ಬಹುಷಃ ಆಗ ಇಂದಿರಾ ಗಾಂಧಿಯವರ ಚುನಾವಣಾ ಕೊಡುಗೆಯನ್ನು ಸ್ವೀಕರಿಸಿದ್ದರೆ ಶೆಟ್ಟಿಯವರು ಕೇಂದ್ರ ಮಂತ್ರಿ ಮಂಡಳ ಸೇರಿ ಚಟುವಟಿಕೆಯಿಂದಿದ್ದು ಇನ್ನಷ್ಟು ಕಾಲ ಬದುಕಿ ಜನಸೇವೆ ಮಾಡುವಲ್ಲಿ ಸಫಲರಾಗುತ್ತಿದ್ದರು. ಬ್ಯಾಂಕಿನಿಂದ ನಿವೃತ್ತರಾಗಿ ಸುಮ್ಮನೆ ಕಾಲ ಕಳೆಯಲಾಗದ ಈ ವ್ಯಕ್ತಿ ನವಂಬರ್ 1, 1981ರಂದು ತಮ್ಮ 66ನೇ ವಯಸ್ಸಿನಲ್ಲಿ ಅಮೆರಿಕದಲ್ಲಿ ನಡೆದ ಒಂದು ಸಣ್ಣ ಶಸ್ತ್ರಚಿಕಿತ್ಸೆ ಸಫಲವಾಗದೆ ವಿಧಿವಶರಾದರು.
ಸುಂದರರಾಮ್ ಶೆಟ್ಟಿಯವರಿಂದ ಜೀವನದ ದಾರಿ ಕಂಡುಕೊಂಡ ಸಾವಿರಾರು ಮನೆಗಳಿವೆ. ಈ ಮಹಾ ಸಾಧಕನ ಮಹತ್ಕಾರ್ಯಗಳು, ಅವರ ಆದರ್ಶಗಳ ಅರಿವನ್ನು ಇಂದಿನ ಮತ್ತು ಮುಂದಿನ ತಲೆಮಾರಿಗೆ ಮೂಡಿಸುವ ಸಲುವಾಗಿ ಅವರ ಹುಟ್ಟೂರು ಮೂಲ್ಕಿಯ ಕೊಲಾ°ಡಿನಲ್ಲಿ ಸುಂದರರಾಮ್ ಶೆಟ್ಟಿ ಸ್ಮಾರಕ ಸಮುಚ್ಚಯವನ್ನು ಅವರ ಅಭಿಮಾನಿಗಳು ನಿರ್ಮಿಸುತ್ತಿದ್ದಾರೆ.
– ಸತ್ಯೋದಯ ಹೆಗ್ಡೆ