ಮೂಲ್ಕಿ: ಮೂಲ್ಕಿ ನಗರ ಪಂಚಾಯತ್ ಆಡಳಿತ ಇಲ್ಲೊಂದು ಬೋರ್ಡು ಹಾಕಿದೆ: ಇಲ್ಲಿ ತಂಬಾಕು ವಸ್ತುಗಳನ್ನು ತಿಂದು ಉಗುಳುವುದು ಮತ್ತು ಕಸವನ್ನು ಎಸೆಯುವುದನ್ನು ನಿಷೇಧಿಸಲಾಗಿದೆ. ಉಲ್ಲಂಘಿಸಿದವರಿಗೆ 300 ರೂ. ದಂಡ ಹಾಕಲಾಗುವುದು! ಆದರೆ, ದುರಂತವೆಂದರೆ, ಈ ಬೋರ್ಡ್‌ನ ಪಕ್ಕದಲ್ಲೇ ನಿಂತು ಉಗುಳಿದರೂ ಯಾರೂ ದಂಡ ಹಾಕುತ್ತಿಲ್ಲ!
ನಗರ ಪಂಚಾಯತ್ ವ್ಯಾಪ್ತಿಯ ಮೂಲ್ಕಿ ಬಸ್ ನಿಲ್ದಾಣ ಬಳಿಯ ಹೊಟೇಲ್ ಎದುರಿನಲ್ಲಿ ರಸ್ತೆ ವಿಭಜಕದಲ್ಲಿ ಕೆಂಪು ಬಣ್ಣದಲ್ಲಿ ದೊಡ್ಡ ಬೋರ್ಡ್ ಹಾಕಲಾಗಿದೆ. ಇದರ ಎದುರು ಭಾಗದಲ್ಲೇ ನಿಂತು ನೂರಾರು ಮಂದಿ ರಸ್ತೆಯ ಪಕ್ಕದಲ್ಲೇ ಕಂಡಕಂಡಲ್ಲಿ ಉಗುಳುತ್ತಾರೆ. ಆದರೆ, ಇದುವರೆಗೆ ಯಾರೂ ಇಲ್ಲಿ ದಂಡ ವಿಧಿಸಿದ್ದರ ದಾಖಲೆ ಇಲ್ಲ!
ಪ್ರತೀ ದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಇಲ್ಲಿ ನೂರಾರು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರು ಜಮಾಯಿಸುತ್ತಾರೆ. ಊರಿನ ಗುತ್ತಿಗೆದಾರರಿಗೆ ಕೆಲಸ ದಾಳುಗಳನ್ನು ಒದಗಿಸುವ ಕೆಲಸ ಇಲ್ಲಿಂದ ನಡೆಯುತ್ತಿದೆ. ಕಾರ್ಮಿಕರು ಸುಮಾರು ಮೂರು ಗಂಟೆಗಳ ಇಲ್ಲಿದ್ದು ಮಾಡುವ ಕಸ ಮತ್ತು ಉಗುಳುವ ತಂಬಾಕು ಅಸಹ್ಯ ಮೂಡಿಸುತ್ತಿದೆ.
ದಂಡ ಹಾಕಿದರೆ ಉಗುಳುವುದು ತಪ್ಪೀತು!
ನಿಜವೆಂದರೆ ಇಲ್ಲಿ ಬೋರ್ಡ್ ಹಾಕಿದ ನಗರ ಪಂಚಾಯತ್‌ನ ಯಾವುದೇ ಅಧಿಕಾರಿ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಬೋರ್ಡ್ ಹಾಕಿದ್ದು ಕಾಟಾಚಾರಕ್ಕೆ ಎಂಬಂತಾಗಿದೆ.
ಇಲ್ಲಿ ನಿತ್ಯವೂ ಸೇರುವ ಜನರು ಕೂಲಿ ಕೆಲಸಗಾರರು, ಮಹಿಳೆಯರು ನಿಯತ್ತಿನಿಂದ ದುಡಿಯುವವರು. ಆದರೆ, ಈ ಬೋರ್ಡ್‌ಗಳನ್ನು ಓದುವಷ್ಟು ಅಕ್ಷರ ಜ್ಞಾನಿಗಳಲ್ಲ. ಬೋರ್ಡು ಹಾಕಿರುವ ನಗರ ಪಂಚಾಯತ್ ಅಧಿಕಾರಿಗಳು ಒಮ್ಮೆ ಇಲ್ಲಿಗೆ ಬಂದು ಬೋರ್ಡಿನ ವಿಚಾರವನ್ನು ತಿಳಿಸುವ ಕೆಲಸ ಮಾಡದೆ ಇದ್ದರೆ ಉಗುಳುವಿಕೆ ನಿಲ್ಲುವುದು ಕಷ್ಟ.
ಅದಕ್ಕಿಂತಲೂ ಹೆಚ್ಚಾಗಿ ಈ ಕಾರ್ಮಿಕರು ದುಡ್ಡಿನ ಮಹತ್ವ ಅರಿತವರು. ಮಧ್ಯಾಹ್ನದ ಊಟವನ್ನು ಬುತ್ತಿ ಕಟ್ಟಿಕೊಂಡೇ ಹೋಗುವ ಇವರಿಗೆ ದಂಡದ ಮೊತ್ತ ತುಂಬ ದೊಡ್ಡದು. ಹೀಗಾಗಿ ಯಾರಿಗಾದರೂ ಒಂದೆರಡು ಬಾರಿ ದಂಡ ಹಾಕಿದರೆ ಮತ್ತೆ ಜನರು ಎಚ್ಚೆತ್ತುಕೊಳ್ಳಬಹುದು ಎನ್ನುವುದು ಜನರ ಅಭಿಪ್ರಾಯ.