Advertisement

ನಗರದ ಅವೈಜ್ಞಾನಿಕ ತಿರುವುಗಳನ್ನು ಸರಿಪಡಿಸುವಂತೆ ಆಗ್ರಹ

09:57 PM Mar 31, 2021 | Team Udayavani |

ಮೂಲ್ಕಿ: ಬಸ್‌ ನಿಲ್ದಾಣದ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಾಸಗಿ ಹೊಟೇಲ್‌ನ ಎದುರಿನ ತಿರುವು ಅವೈಜ್ಞಾನಿಕವಾಗಿದ್ದು ಇದನ್ನು ತತ್‌ಕ್ಷಣ ದಿಂದ ಮುಚ್ಚಿ, ಆರ್‌.ಆರ್‌. ಟವರ್‌ ಅಥವಾ ಬಪ್ಪನಾಡು ದೇವಸ್ಥಾನದ ಎದುರಿನಿಂದ ತಿರುವಿಗೆ ವ್ಯವಸ್ಥೆ ಮಾಡಿಕೊಡುವಂತೆ ಪೊಲೀಸ್‌ ಇಲಾಖೆಗೆ ಪತ್ರ ಬರೆಯಲು ಮೂಲ್ಕಿ ನಗರ ಪಂಚಾಯತ್‌ನ ಮಾಸಿಕ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ನಗರ ಪಂಚಾಯತ್‌ ಅಧ್ಯಕ್ಷ ಸುಭಾಷ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಹೆದ್ದಾರಿ ತಿರುವು ಬಗ್ಗೆ ಮಹತ್ವದ ಚರ್ಚೆಗಳು ನಡೆದವು.

ಉಡುಪಿಯಿಂದ ಮಂಗಳೂರಿನತ್ತ ಹೋಗುವ ಬಸ್‌ ನಿಲುಗಡೆ ತೀರಾ ಅವೈಜ್ಞಾ ನಿಕವಾಗಿದ್ದು, ಇಲ್ಲಿ ಸರಣಿ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರಾದ ಯೋಗೀಶ್‌ ಕೋಟ್ಯಾನ್‌, ವಿಮಲಾ ಪೂಜಾರಿ ಹಾಗೂ ಹರ್ಷರಾಜ್‌ ಶೆಟ್ಟಿ ಸಭೆಯಲ್ಲಿ  ಆಗ್ರಹಿಸಿದರು.

ಚಿತ್ರಾಪುನಲ್ಲಿ  ಉದ್ಯಾನ ನಿರ್ಮಾಣಕ್ಕೆ ಆಗ್ರಹ :

ಚಿತ್ರಾಪು ಗ್ರಾಮದ ಜನರು ಉದ್ಯಾನವೊಂದನ್ನು ನಿರ್ಮಿಸಲು ಮನವಿ ಮಾಡಿದ್ದಾರೆ. ಇದಕ್ಕಾಗಿ ಸೂಕ್ತ ಜಾಗ ಲಭ್ಯವಿದೆ. ನಗರ ಪಂಚಾಯತ್‌ನ ಕ್ರಿಯಾ ಯೋಜನೆಯಲ್ಲಿ ಇದನ್ನು ಪರಿಗಣಿಸಬೇಕು ಎಂದು ಸದಸ್ಯೆ ರಾಧಿಕಾ ಯಾದವ ಕೋಟ್ಯಾನ್‌ ಸಭೆಯಲ್ಲಿ ಪ್ರಸ್ತಾವಿಸಿದರು. ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ ಮುಂದಿನ ಕ್ರಿಯಾ ಯೋಜನೆಯಲ್ಲಿ ಸೇರಿಸುವ ಭರವಸೆ ನೀಡಿದರು.

Advertisement

ನಗರ ಪಂಚಾಯತ್‌ನ ಹಿಂದಿನ ಆಡಳಿತ ಅವಧಿಯಲ್ಲಿ 3 ಕೋ.ರೂ. ಅನುದಾನ ನೀಡಿರುವುದು ಉಪಯೋಗವಾಗಿಲ್ಲ. ಬಸ್‌ ನಿಲ್ದಾಣದ ಕಾಮಗಾರಿ ಶೀಘ್ರ ಮುಗಿಸುವಂತೆ ಅಧ್ಯಕ್ಷರು ಕ್ರಮ ವಹಿಸಬೇಕು ಎಂದು ಸದಸ್ಯೆ ವಿಮಲಾ ಕೋಟ್ಯಾನ್‌ ಸಭೆಗೆ ತಿಳಿಸಿದರು.

ವಿಜಯ ಸನ್ನಿಧಿ ಬಳಿಯ ರಿಕ್ಷಾ ಪಾರ್ಕಿಂಗ್‌ಗೆ ತಂಗುದಾಣವನ್ನು ನಿರ್ಮಿಸಲು ರಿಕ್ಷಾ ಚಾಲಕರು ನೀಡಿದ ಮನವಿಯನ್ನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.

ಮೂರು ಕಡೆಗಳಲ್ಲಿ ಬೋರ್‌ವೆಲ್‌ ತೋಡಲು ಇಲಾಖೆ ಅನುಮತಿ ನೀಡಿರು ವುದನ್ನು ಅಧ್ಯಕ್ಷರು ಸಭೆಗೆ ತಿಳಿಸಿದಾಗ, ಇದಕ್ಕೆ ಸದಸ್ಯೆ ವಂದನಾ ಕಾಮತ್‌ ಅವರು ಪ್ರತಿಕ್ರಿಯಿಸಿ, ಅಂತರ್ಜಲ ಇರದ ಜಾಗ ದಲ್ಲಿ ಬೋರೆವೆಲ್‌ ಕೊರೆಯದಂತೆ ಕ್ರಮ ವಹಿಸಬೇಕಿದ್ದು, ಅನುದಾನವನ್ನು ವ್ಯರ್ಥ ವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮೂಲ್ಕಿ ಪರಿಸರದ ಮಟ್ಟು ಬಳಿಯಲ್ಲಿ 15 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ವಾಗಬೇಕಾಗಿದ್ದ ಶಾಶ್ವತ ಕುಡಿಯುವ ನೀರಿನ ಯೋಜನೆ ಸದ್ಯ ಸಾಧ್ಯವಾಗದು. ಈ ಕಾಮಗಾರಿ ನಡೆಯುವಾಗ ಪರಿಸರದ ಮನೆಗಳು ಮುಳುಗುವ ಸೂಚನೆಯನ್ನು ತಜ್ಞ ಅಧಿಕಾರಿಗಳು ನೀಡಿದ್ದಾರೆ. ಹಾಗಾಗಿ ಈ ಯೋಜನೆಯನ್ನು ಇತರೆಡೆಗೆ ಸ್ಥಳಾಂತರಿಸಲು ಯೋಚನೆ ನಡೆಯುತ್ತಿದೆ ಎಂಬ ಅಭಿಪ್ರಾಯವ್ಯಕ್ತವಾಯಿತು. ಇದಕ್ಕೆ ಅಧ್ಯಕ್ಷರು ಉತ್ತರಿಸಿ, ಈ ಹಿಂದೆ ಜಿಲ್ಲಾಧಿಕಾರಿ ಆಗಿದ್ದ ಪೊನ್ನುರಾಜ್‌ ಅವರು ಒಂದು ವರ್ಷ ಕಳೆದರೆ ಅಡ್ಯಾರ್‌ ಅಣೆಕಟ್ಟಿನಿಂದ ಬೇಕಾದಷ್ಟು ನೀರು ಸಂಗ್ರಹವಾಗುತ್ತದೆ. ಲಭ್ಯತೆಗಿಂತ ಅಧಿಕ ನೀರು ನಿಮಗೆ ದೊರೆಯುತ್ತದೆ ಎಂದು ಹೇಳಿರುವುದನ್ನು ಸಭೆಯಲ್ಲಿ ತಿಳಿಸಿದರು.

ಟ್ಯಾಂಕರ್‌ ಮೂಲಕ ನೀರು ಸರಬರಾಜು :

ನ.ಪಂ. ವ್ಯಾಪ್ತಿ ಯಲ್ಲಿ ನೀರಿನ ಸಮಸ್ಯೆ ಆರಂಭವಾಗುವ ಮುನ್ಸೂಚನೆ ಹಿನ್ನೆಲೆ ಯಲ್ಲಿ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡುವ ವ್ಯವಸ್ಥೆಗೆ ಟೆಂಡರು ಪ್ರಕ್ರಿಯೆ ನಡೆಸಿರುವುದನ್ನು ಸಭೆಯಲ್ಲಿ ತಿಳಿಸಲಾಯಿತು.

ಶ್ಮಶಾನ ಕಾಮಗಾರಿ :

ಧಾರ್ಮಿಕ ದತ್ತಿ ಇಲಾಖೆಯ ಮೂಲಕ ಮೂಲ್ಕಿಯ ಶ್ಮಶಾನ ಕಾಮಗಾರಿಗೆ 5 ಲಕ್ಷ ರೂ. ಅನುದಾನ ಬಂದಿರುವುದನ್ನು ನಗರ ಪಂಚಾಯತ್‌ ಮೂಲಕ ಕಾಮಗಾರಿ ನಡೆಸಲು ತೀರ್ಮಾನಿಸಲಾಯಿತು.

ಬಪ್ಪನಾಡು ಜಾತ್ರೆ: ನಿಯಮ ಪಾಲನೆ ಅಗತ್ಯ :

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಜಾತ್ರೆಯು ಆರಂಭ ಗೊಂಡಿದ್ದು, ಧಾರ್ಮಿಕ ದತ್ತಿ ಇಲಾಖೆಯ ಸೂಚನೆ ಮತ್ತು ಮಾರ್ಗದರ್ಶನದಂತೆ ದೇಗುಲದ ಅಡಳಿತ ಮಂಡಳಿಯು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಹಾಗೂ ನೀತಿ ನಿಯಮಗಳು° ತಪ್ಪದೆ ಪಾಲಿಸುವಂತೆ ನಗರ ಪಂಚಾಯತ್‌ನಿಂದಲೂ ತಿಳಿಸಲಾಗಿದೆ ಎಂದು ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ಸಭೆಗೆ ತಿಳಿಸಿದರು.

ಕೋವಿಡ್ ಪಾಸಿಟಿವ್‌ :

ಮೂಲ್ಕಿ  ನಗರ ಪಂಚಾಯತ್‌ ವ್ಯಾಪ್ತಿಯ ಶಾಲೆಯೊಂದರ ಸಿಬಂದಿ ಹಲ್ಲು ಚಿಕಿತ್ಸೆಗಾಗಿ ಆಸ್ಪತ್ರೆಗೆ ತೆರಳಿದಾಗ ಕೋವಿಡ್ ಪಾಸಿಟಿವ್‌ ಪತ್ತೆಯಾಗಿದೆ. ಅವರು ಸೂಕ್ತವಾಗಿ ನಿಯಮ ಪಾಲಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಖ್ಯಾಧಿಕಾರಿಗಳು ತಿಳಿಸಿದರು.

ಕೋವಿಡ್ ತಡೆಗೆ ಸರಕಾರ ಕೋಟ್ಯಂತರ ರೂ. ಅನುದಾನವನ್ನು ಖರ್ಚು ಮಾಡಿದೆ. ಆದರೆ ಮೂಲ್ಕಿ ನಗರ ಪಂಚಾಯತ್‌ಗೆ ಎಷ್ಟು ಅನುದಾನ ಬಂದಿದೆ ಎಂದು ಸದಸ್ಯ ಯೋಗೀಶ್‌ ಕೋಟ್ಯಾನ್‌ ಕೇಳಿದಾಗ ಯಾವುದೇ ಅನುದಾನ ಬಂದಿರುವ ಬಗ್ಗೆ ದಾಖಲೆ ಇರದಿರುವುದು ಸ್ಪಷ್ಟವಾಯಿತು.

ಮೂಲ್ಕಿ ರೇಶನ್‌ ಅಂಗಡಿಯೊಂದರಿಂದ ತಂದಿರುವ ಗೋಧಿಯಲ್ಲಿ ಸಿಮೆಂಟು ಹರಳುಗಳು ಇರುವುದನ್ನು ಸಭೆಯಲ್ಲಿ ಸದಸ್ಯ ಬೋಳ ಬಾಲಚಂದ್ರ ಕಾಮತ್‌ ಪ್ರದರ್ಶಿಸಿದರು. ಸಂಬಂಧಿಸಿದ ರೇಶನ್‌ ಅಂಗಡಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಪಂಚಾಯತ್‌ಗೆ

ಎಂಜಿನಿಯರ್‌ ಮತ್ತು ಸಿಬಂದಿ ಕೊರತೆ ನೀಗಿಸಲು ಸಂಸದರು ಮತ್ತು ಶಾಸಕರ ಮೂಲಕ ಒತ್ತಡ ಹೇರುವಂತೆ ಸದಸ್ಯ ಯೋಗೀಶ್‌ ಕೋಟ್ಯಾನ್‌ ಆಗ್ರಹಿಸಿದರು. ಮುಖ್ಯಾಧಿಕಾರಿ ಪಿ. ಚಂದ್ರ ಪೂಜಾರಿ ನಿರ್ಣಯಗಳನ್ನು ಮಂಡಿಸಿದರು. ಉಪಾಧ್ಯಕ್ಷ ಸತೀಶ್‌ ಅಂಚನ್‌ ಮತ್ತು ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌ ಚರ್ಚೆಯಲ್ಲಿ ಪಾಲ್ಗೊಂಡರು.

ಸರದಿಯಂತೆ ನೀರು ಸರಬರಾಜು ಮಾಡಿ :

ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯ ಕೆ.ಎಸ್‌. ರಾವ್‌ ನಗರದ ಕೆಲವರು ನೀರು ಸರಬರಾಜು ವ್ಯವಸ್ಥೆಯ ಮೇಲೆ ಒತ್ತಡ ಹಾಕಿ ನೀರು ವಿತರಣೆಯಲ್ಲಿ ವ್ಯತ್ಯಯವಾಗುವಂತೆ ಮಾಡುತ್ತಿದ್ದಾರೆ.

ಎಲ್ಲರಿಗೂ ನ್ಯಾಯಯುತವಾಗಿ ನೀರು ವಿತರಣೆ ಆಗಲಿ ಎಂದು ವಿಮಲಾ ಪೂಜಾರಿ ಮತ್ತು ಶಾಂತಾ ಕಿರೋಡಿಯನ್‌ ಸಭೆಯಲ್ಲಿ ತಿಳಿಸಿದಾಗ, ಇನ್ನು ಮುಂದೆ ನೀರನ್ನು ಸರದಿ ಪ್ರಕಾರ ಸರಬರಾಜು ಮಾಡುವಂತೆ ನೀರು ಸರಬರಾಜು ವಿಭಾಗದ ಮುಖ್ಯಸ್ಥರಿಗೆ ಸೂಚನೆ ನೀಡಿದರು.

12 ಸಾವಿರದಲ್ಲಿ ನಮಗೆ 100 ಮಾತ್ರ :

ನಂದಿಕೂರಿನ ಯುಪಿಸಿಎಲ್‌ನ ಮೂಲಕ ಪ್ರತಿನಿತ್ಯ 12 ಸಾವಿರ ಮೆ.ವ್ಯಾ. ವಿದ್ಯುತ್‌ ಉತ್ಪಾದನೆಯಾಗುತ್ತಿದ್ದರೂ ಉಡುಪಿ ಮತ್ತು ದ.ಕ. ಜಿಲ್ಲೆಗೆ ಕೇವಲ 100 ಮೆ.ವ್ಯಾ. ವಿದ್ಯುತ್‌ ಲಭ್ಯವಿದ್ದು ಉಳಿದ ವಿದ್ಯುತ್‌ ಹಾಸನ ಮತ್ತು ಈ ಮಾರ್ಗದ ಇತರೆಡೆಗಳಿಗೆ ಬಳಕೆ ಆಗುತ್ತಿದೆ. ವಿದ್ಯುತ್‌ ಉತ್ಪಾದನೆಗೆ ಸ್ಥಳೀಯ ಸಂಪನ್ಮೂಲ ಬಳಕೆಯಾಗುತ್ತದೆ. ಇದರ ಲಾಭವನ್ನು ಬೇರೆಯವರು ಪಡೆಯುತ್ತಿದ್ದಾರೆ ಎಂದು ಹೇಳಿ ಹರ್ಷರಾಜ್‌ ಶೆಟ್ಟಿ  ಹಾಗೂ ಯೋಗೀಶ್‌ ಕೋಟ್ಯಾನ್‌ ಅವರು ವಿದ್ಯುತ್‌ ಕಡಿತದ ಬಗ್ಗೆ ಸಭೆಗೆ ಮನವರಿಕೆ ಮಾಡಿದರು. ಇದಕ್ಕೆ ಉತ್ತರಿಸಿದ ಮೂಲ್ಕಿ ವಿದ್ಯುತ್‌ ಇಲಾಖೆಯ ಅಧಿಕಾರಿ ವಿವೇಕಾನಂದ ಶೆಣೈ  ಈಗ ಲೋಡ್‌ ಶೆಡ್ಡಿಂಗ್‌ ಇಲ್ಲ ಎಂದು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next