Advertisement

‘ಕುಡಿಯುವ ನೀರು, ದಾರಿದೀಪ ಸಮರ್ಪಕ ವ್ಯವಸ್ಥೆಗೆ ಕ್ರಮ’

05:41 AM Feb 24, 2019 | |

ಮೂಲ್ಕಿ : ಮೂಲ ಸೌಕರ್ಯಗಳಾದ ಕುಡಿಯುವ ನೀರು ಯೋಜನೆ ಮತ್ತು ದಾರಿದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸಲು ಸರಕಾರದ ಮಟ್ಟದಲ್ಲಿ ಪ್ರಾಧಿಕಾರ ರಚಿಸಿ ಕೆಲವೊಂದು ಮಹತ್ವದ ನಿರ್ಧಾರಗಳನ್ನು ರೂಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಹೇಳಿದರು.

Advertisement

ಆವರು ಮೂಲ್ಕಿ ನಗರ ಪಂಚಾಯತ್‌ ಸಮುದಾಯ ಭವನದಲ್ಲಿ ನಡೆದ ಮೂಲ್ಕಿ ಹೋಬಳಿಯ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನ ಸಭೆಯಲ್ಲಿ ಮಾತನಾಡಿದರು.

ಬಿಲ್‌ ಪಾವತಿಸದಿದ್ದರೆ ನೀರು ಸರಬರಾಜು ಕಡಿತ
ನೀರು ಸರಬರಾಜು ಸೇವೆಯನ್ನು ತ್ವರಿತವಾಗಿ ನಡೆಸಲಾಗುವುದು. ಆದರೆ ವಿದ್ಯುತ್‌ ಬಿಲ್‌ ಪಾವತಿಸದಿದ್ದರೆ ಹೇಗೆ ಸರಬರಾಜು ಕಡಿತಗೊಳಿಸಲಾಗುವುದೋ ಅದೇ ರೀತಿ ರಾಜ್ಯ ಮಟ್ಟದಲ್ಲಿ ಪ್ರಾಧಿಕಾರದ ರಚಿಸಿ ನೀರು ವಿತರಣೆ ಕಾರ್ಯದಲ್ಲೂ ಸಂಪರ್ಕ ನಿಲ್ಲಿಸ ಲಾಗುವುದು ಹಾಗೂ ಹೊಸ ಬದಲಾವಣೆ ರೂಪಿಸಲಾಗುವುದು ಎಂದು ಅವರು ತಿಳಿಸಿದರು.

ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ತತ್‌ ಕ್ಷಣದಿಂದ ಬ್ಲಿಡ್‌ ಬ್ಯಾಂಕ್‌ ಸ್ಥಾಪನೆ, ಅರಿವಳಿಕೆ ತಜ್ಞರನ್ನು ನೇಮಕ ಮಾಡಲಾಗುವುದು. ಆಸ್ಪತ್ರೆಯಲ್ಲಿ ಇರುವ ಕೆಲವೊಂದು ಮೂಲ ಸೌಕರ್ಯದ ಕೊರತೆಯನ್ನು ಕೂಡಲೇ ನೀಗಿಸಲು ಕ್ರಮ ಜರಗಿಸಲಾಗುವುದು ಎಂದು ಸಚಿವರು ಹೇಳಿದರು.

ಮೂಲ್ಕಿ ವಿಶೇಷ ತಹಶೀಲ್ದಾರ್‌ ವ್ಯಾಪ್ತಿಯ ಮೂಲ್ಕಿ ಹೋಬಳಿಯಲ್ಲಿ 94 ಸಿಸಿ ಆಧಾರದ 2,929 ಪ್ರಕರಣಗಳ ಅರ್ಜಿಯನ್ನು ಪಡೆಯಲಾಗಿದ್ದು, ಈಗಾಗಲೇ 1,988ನ್ನು ವಿಲೇವಾರಿಗೊಳಿಸಿ ಆದೇಶ ನೀಡಲಾಗಿದೆ. ಉಳಿದ ಅರ್ಜಿಗಳನ್ನು ಗ್ರಾಮ ಮಟ್ಟದಲ್ಲಿ ಕ್ರಮ ಬದ್ಧವಾಗಿ ಪೂರ್ತಿಗೊಳಿಸಿ ಆದಷ್ಟು ಬೇಗ ಈ ಸವಲತ್ತಿನ ಮೂಲಕ ಜನರಿಗೆ ವಸತಿ ಭಾಗ್ಯವನ್ನು ನೀಡುವಲ್ಲಿ ಸರಕಾರ ಕ್ರಮ ಜರಗಿಸಲಿದೆ ಎಂದು ಖಾದರ್‌ ಹೇಳಿದರು.

Advertisement

ಮೂಲ್ಕಿ ನಗರ ಪಂಚಾಯತ್‌ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ನಿವೇಶನ ಒದಗಿಸುವಲ್ಲಿ ನಿವೇಶನ ಕೊರತೆ ಇರುವುದನ್ನು ನೀಗಿಸಲು ಈಗಾಗಲೇ ಶಿಮಂತೂರು -ಎಳತ್ತೂರು ಗ್ರಾಮದ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆಗಾಗಿ ಪಡೆದಿರುವ ನಿವೇಶನವನ್ನು ವಸತಿಗಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.

ಗೋಮಾಲ ಹಸ್ತಾಂತರಕ್ಕೆ ಮನವಿ
ಅತಿಕಾರಿಬೆಟ್ಟು ಪಂಚಾಯತ್‌ ವ್ಯಾಪ್ತಿಯ ಗೋಮಾಳ ಪ್ರದೇಶವನ್ನು ತತ್‌ಕ್ಷಣವೇ ಮನೆಯಿಲ್ಲದವರಿಗೆ ಒದಗಿಸುವ ಯೋಜನೆಗಾಗಿ ಸರಕಾರ ಪರಿವರ್ತನೆ ಮಾಡಿ ಕ್ರಮ ತೆಗೆದುಕೊಂಡು ಆದೇಶ ಹೊರಡಿಸುವಂತೆ ಅತಿಕಾರಿ ಬೆಟ್ಟು ಪಂಚಾಯತ್‌ ಅಧ್ಯಕ್ಷೆ ಶಾರದ ವಸಂತ್‌ ಹಾಗೂ ಉಪಾಧ್ಯಕ್ಷ ದೆಪ್ಪುಣಿಗುತ್ತು ಕಿಶೋರ್‌ ಶೆಟ್ಟಿ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದರು.

ಕಾರ್ನಾಡು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ಇರುವ ಇಲಾಖೆ ದಾರಿ ದೀಪ ಮತ್ತು ಮೂಲ ಸೌಕರ್ಯಗಳ ಬಗ್ಗೆ ನಿರ್ಲಕ್ಷ ತೋರುತ್ತಿದೆ ಎಂದು ನಗರ ಪಂಚಾಯತ್‌ ಸದಸ್ಯ ಬಿ.ಎಂ. ಆಸೀಫ್‌ ದೂರಿ ದರು. ಈ ಬಗ್ಗೆ ಸಚಿವರು ಸೂಕ್ತ ಕ್ರಮ ಜರಗಿಸುವ ಭರವಸೆ ನೀಡಿದರು. ಬಾಕಿಯಿರುವ ತೆರಿಗೆ ಮತ್ತು ನೀರಿನ ಬಿಲ್‌ ವಸೂಲಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಒಳಚರಂಡಿ, ನೀರು ಸಂಪರ್ಕ ಕಡ್ಡಾಯ
ಮುಂದಿನ ದಿನಗಳಲ್ಲಿ ಮನೆ ನಿರ್ಮಾಣದ ಪರವಾನಿಗೆ ನೀಡುವಾಗ ನೀರು ಸರಬರಾಜು ಮತ್ತು ಒಳ ಚರಂಡಿ ಸಂಪರ್ಕ ಕಡ್ಡಾಯಗೊಳಿಸಲು ಕ್ರಮ ಜರಗಿಸಂತೆ ಸಚಿ ವರು ಸೂಚಿಸಿ, ನೀರು ಸರಬರಾಜು ಮತ್ತು ತ್ಯಾಜ್ಯ ನಿರ್ವಹಣೆ ವ್ಯವಸ್ಥೆಯ ಅರೆಕಾಲಿಕಾ ಚಾಲಕರು ಮತ್ತು ಲೋಡರ್‌ ಗಳನ್ನು ಇಲಾಖೆ ಸರಕಾರದಿಂದ ನೇಮಕಾತಿ ಖಾಯಂಗೊಳಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.

ತಾಲೂಕು ರಚನೆ, ಟೋಲ್‌ ಸಮಸ್ಯೆ, ಮೂಲ್ಕಿ ಅಭಿವೃದ್ಧಿ ಸಮಿತಿ ಮತ್ತು ವಿವಿಧ ಸಮಸ್ಯೆಗಳ ಬಗ್ಗೆ ಹೋಬಳಿಯ ವಿವಿಧ ಭಾಗಗಳ ಜನರು ಸಚಿವರಿಗೆ ಮನವಿ ಸಲ್ಲಿಸಿದರು.

ಮಾಜಿ ಸಚಿವ ಕೆ. ಅಭಯಚಂದ್ರ, ಮೂಲ್ಕಿ ನಗರ ಪಂಚಾಯತ್‌ ಅಧ್ಯಕ್ಷ ಸುನೀಲ್‌ ಆಳ್ವ, ಸ್ಥಾಯೀ ಸಮಿತಿ ಅಧ್ಯಕ್ಷ ಶೈಲೇಶ್‌ ಕುಮಾರ್‌, ತಹಶೀಲ್ದಾರ್‌ ಮಾಣಿಕ್ಯಂ, ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಸದಸ್ಯರಾದ ಶರತ್‌ ಕುಬೆವೂರು, ಶುಭಲತಾ, ಕಿಲ್ಪಾಡಿ ಪಂಚಾಯತ್‌ ಅಧ್ಯಕ್ಷೆ ಶಾರದ ವಸಂತ್‌, ನ.ಪಂ. ಸದಸ್ಯರಾದ ಬಿ.ಎಂ. ಆಸೀಫ್, ಬಶೀರ್‌ ಕುಳಾಯಿ, ವಿಮಲಾ ಪೂಜಾರಿ, ಪುತ್ತು ಬಾವಾ, ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಲೂಕು ರಚನೆ ಜಿಲ್ಲಾಧಿಕಾರಿಗೆ ನಿರ್ದೇಶನ 
ಮೂಲ್ಕಿಯನ್ನು ತಾಲೂಕು ಆಗಿ ಪರಿವರ್ತಿಸಬೇಕು ಎಂಬುದು ಮೂಲ್ಕಿ ನಾಗರಿಕ ಅಭಿವೃದ್ಧಿ ಸಮಿತಿಯ ಮೂಲಕ ಸಾರ್ವಜನಿಕರ ಬೇಡಿಕೆಯಾಗಿದ್ದು, ಸರಕಾರ ಅದಷ್ಟು ಬೇಗನೇ ತಾಲೂಕು ರಚನೆ, ಅಗ್ನಿ ಶಾಮಕ ದಳ ಸ್ಥಾಪನೆ ಮಾಡುವಂತೆ ಮಾಜಿ ಸಚಿವ ಅಭಯಚಂದ್ರ ಒತ್ತಾಯಿಸಿ ದಾಗ ಜಿಲ್ಲಾಧಿಕಾರಿಗಳ ಮೂಲಕ ಪೂರಕ ಮಾಹಿತಿಯನ್ನು ಪಡೆದು ಸರಕಾರಕ್ಕೆ ವರದಿ ಸಲ್ಲಿಕೆ ಮಾಡಲು ಸೂಚಿಸಲಾಗಿದ್ದು, ಆದಷ್ಟು ಶೀಘ್ರದಲ್ಲಿ ಜನರ ಬೇಡಿಕೆಯನ್ನು ಈಡೇರಿಸಲಾಗುವುದು ಎಂದು ಖಾದರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next