Advertisement

ದಣಿವರಿಯದ ನಾಯಕ 2 ಬಾರಿ ಪ್ರಧಾನಿ ಹುದ್ದೆ ಮಿಸ್‌!

11:46 PM Oct 10, 2022 | Team Udayavani |

ಭಾರತೀಯ ರಾಜಕೀಯ ಇತಿಹಾಸದಲ್ಲಿ ಕೆಲವೊಂದು ಹೆಸರುಗಳನ್ನು ಮರೆಯುವುದು ಅಸಾಧ್ಯ. ಅದರಲ್ಲೂ ಕೆಲ ನಾಯಕರು ರಾಷ್ಟ್ರ ರಾಜಕಾರಣಿದ ಇತಿಹಾಸವನ್ನೇ ಬದಲಿಸಿಬಿಟ್ಟರು. ಅಂಥವರ ಸಾಲಿಗೆ ಲಾಲು ಪ್ರಸಾದ್‌ ಯಾದವ್‌, ಮುಲಾಯಂ ಸಿಂಗ್‌ ಯಾದವ್‌, ನಿತೀಶ್‌ಕುಮಾರ್‌, ಮಮತಾ ಬ್ಯಾನರ್ಜಿ, ಚಂದ್ರಶೇಖರ್‌, ಕರುಣಾನಿಧಿ, ಜಯಲಲಿತಾ, ಎಚ್‌.ಡಿ. ದೇವೇಗೌಡ, ರಾಮಕೃಷ್ಣ ಹೆಗಡೆರಂಥವರು ನಿಲ್ಲುತ್ತಾರೆ. ಇಂಥ ಪ್ರಮುಖ ಸ್ಥಾನದಲ್ಲಿ ಇದ್ದ ಉತ್ತರ ಪ್ರದೇಶದ ಹಿರಿಯ ರಾಜಕಾರಣಿ ಮುಲಾಯಂ ಸಿಂಗ್‌ ಯಾದವ್‌ ಇನ್ನಿಲ್ಲವಾಗಿದ್ದಾರೆ. ಎರಡು ಬಾರಿ ಪ್ರಧಾನಿ ಹುದ್ದೆಯ ಸನಿಹಕ್ಕೆ ಬಂದು ಅದರಿಂದ ತಪ್ಪಿಸಿ ಕೊಂಡವರು ಇವರು… ಇವರ ಕುರಿತಂತೆ ಒಂದು ನೋಟ ಇಲ್ಲಿದೆ…

Advertisement

ಮನೆಯವರಿಂದಲೇ ವಿರೋಧ
ರಾಷ್ಟ್ರ ರಾಜಕಾರಣದಲ್ಲಿ ಅಷ್ಟೆಲ್ಲ ಮಿಂಚಿದ್ದರೂ, ಮುಲಾಯಂಸಿಂಗ್‌ ಯಾದವ್‌ ಅವರಿಗೆ ರಾಜಕೀಯವಾಗಿ ಮುಳುವಾಗಿದ್ದು ಮನೆಯವರೇ. ಪುತ್ರ ಅಖೀಲೇಶ್‌ ಯಾದವ್‌, ಸಹೋದರ ಶಿವಪಾಲ್‌ ಯಾದವ್‌ ಸೇರಿದಂತೆ ಪ್ರಮುಖರು ಮುಲಾಯಂ ಮಾತು ಕೇಳದಂತೆ ಆಗಿಬಿಟ್ಟರು. ದೀರ್ಘ‌ಕಾಲಿನ ಜೋಡಿ ಎಂದೇ ಗುರುತಿಸಿಕೊಂಡಿದ್ದ ಅಮರ್‌ ಸಿಂಗ್‌ ಕೂಡ ಮುಲಾಯಂರಿಂದ ಅಂತರ ಕಾಯ್ದುಕೊಂಡರು. 2015ರ ಬಳಿಕ ಹೆಚ್ಚು ಕಡಿಮೆ ಮುಲಾಯಂ ಸಿಂಗ್‌ ಯಾದವ್‌ ಅವರು ರಾಜಕೀಯವಾಗಿ ಅಷ್ಟೇನೂ ಪ್ರಬಲ ನಿರ್ಧಾರ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ.

ಕುಸ್ತಿ ಪಟು, ನೇತಾಜಿ ಎಂದೇ ಹೆಸರುವಾಸಿ
ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಮುಲಾಯಂ ಸಿಂಗ್‌ ಅವರದ್ದು ಬಹುಮುಖ ವ್ಯಕ್ತಿತ್ವ. ಆರಂಭದಲ್ಲಿ ರಾಮ ಮನೋಹರ ಲೋಹಿಯಾ ಅವರ ಗರಡಿ ಯಲ್ಲಿ ಬೆಳೆದ ಮುಲಾಯಂ, ಸ್ವತಂತ್ರವಾಗಿ ಸಮಾಜವಾದಿ ಪಕ್ಷ ಕಟ್ಟಿ ಅತ್ಯದ್ಭುತವಾಗಿ ಬೆಳೆಸಿದವರು. ನಿಜವಾಗಿ ಹೇಳಬೇಕು ಎಂದರೆ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನ ಈಗಿನ ಸ್ಥಿತಿಗೆ ಇವರೇ ಕಾರಣ. ಅಂದ ಹಾಗೆ, ಮುಲಾಯಂ ಅವರು ಹುಟ್ಟಿದ್ದು 1939ರ ನವೆಂಬರ್‌ 22 ರಂದು. ಉತ್ತರ ಪ್ರದೇಶದ ಎಟ್ವಾ ಜಿಲ್ಲೆಯ ಸೈಫಾಯಿ ಎಂಬ ಗ್ರಾಮದಲ್ಲಿ ಜನನ. ಗ್ರಾಮೀಣ ಭಾಗದ ಬಡ ಕುಟುಂಬದ ಮುಲಾಯಂ ಅವರು ಆರಂಭದಲ್ಲಿ ಕುಸ್ತಿಪಟುವಾಗಬೇಕು ಎಂದುಕೊಂಡಿದ್ದರು. ಆದರೆ ಆಗ್ರಾ ವಿಶ್ವವಿದ್ಯಾನಿಲಯದಲ್ಲಿ ಮಾಸ್ಟರ್‌ ಪದವಿ ಪಡೆದ ಇವರು, ಸರಕಾರಿ ಶಿಕ್ಷಕರಾದರು.

ಅನಂತರ ರಾಜಕೀಯ ಪ್ರವೇಶಿಸಿದ ಮುಲಾಯಂ ಹಿಂದಿರುಗಿ ನೋಡಿದ್ದೇ ಇಲ್ಲ. ಬಿಜೆಪಿಯ ರಾಮಮಂದಿರ ಮತ್ತು ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಗಳ ಮೇಲಿದ್ದ ಹಿಡಿತವನ್ನು ಸರಿಯಾಗಿ ಅರಿತುಕೊಂಡಿದ್ದ ಅವರು, ಬಿಜೆಪಿಯ ರಾಮಮಂದಿರ ರಥಯಾತ್ರೆ ವೇಳೆ ಮುಸ್ಲಿಮರ ಪರ ನಿಂತು ಅವರ ಪಾಲಿಗೆ ಹೀರೋ ಆದರು. ಈ ಮೂಲಕ ಕಾಂಗ್ರೆಸ್‌ನ ಅಲ್ಪಸಂಖ್ಯಾತ ಮತಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.

ಹಾಗೆಯೇ ವಿ.ಪಿ.ಸಿಂಗ್‌ ಸರಕಾರದಲ್ಲಿ ಜಾರಿಯಾದ ಮಂಡಲ್‌ ಕಮಿಷನ್‌ ವರದಿಯನ್ನು ಉತ್ತರ ಪ್ರದೇಶದಲ್ಲಿ ಜಾರಿ ಮಾಡಿ, ಹಿಂದುಳಿದವರ ಪಾಲಿಗೂ ಆಪದಾºಂಧವರಾದರು. ಹೀಗಾಗಿ, ಉತ್ತರ ಪ್ರದೇಶದ ಅಲ್ಪಸಂಖ್ಯಾತ ಮತ್ತು ಹಿಂದುಳಿದ ಮತಗಳಿಂದಲೇ ಮೂರು ಬಾರಿ ಸಿಎಂ, ಹಾಗೆಯೇ ಏಳು ಬಾರಿ ಸಂಸತ್‌ ಸದಸ್ಯರಾಗಿ ಸತತವಾಗಿ ಆಯ್ಕೆಯಾದರು.

Advertisement

ಮೊದಲಿಗೆ ರಾಮಮನೋಹರ ಲೋಹಿಯಾ ಅವರ ಪಕ್ಷ, ಅನಂತರದಲ್ಲಿ ಚೌಧರಿ ಚರಣ್‌ ಸಿಂಗ್‌ ಜತೆಗೆ ಹೆಜ್ಜೆ, ಬಳಿಕ ಜನತಾ ದಳ, ಇದಾದ ಬಳಿಕ ಸಮಾಜವಾದಿ ಪಕ್ಷ ಸ್ಥಾಪನೆ ಮಾಡಿದ ಅವರು, ಇದರಲ್ಲಿ ಯಶಸ್ವಿಯೂ ಆದರು. ಮೊದಲಿಗೆ ಕಾನ್ಶಿರಾಮ್‌ ಅವರ ಕಾಲದಲ್ಲಿ ಬಿಎಸ್‌ಪಿ ಜತೆಗೂ ಮೈತ್ರಿ ಮಾಡಿಕೊಂಡಿದ್ದರು. ಆದರೆ ಬಳಿಕ ಮಾಯಾವತಿ ಮತ್ತು ಮುಲಾಯಂ ಸಿಂಗ್‌ ಯಾದವ್‌ ಕಟ್ಟಾ ಎದುರಾಳಿಗಳಾದರು.

ಅಜಾತಶತ್ರು
ರಾಜಕಾರಣದಲ್ಲಿ ಮುಲಾಯಂ ಒಂದು ರೀತಿಯ ಅಜಾತಶತ್ರುವಿನ ರೀತಿಯಲ್ಲಿದ್ದರು. ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ಪ್ರಾದೇಶಿಕ ಪಕ್ಷಗಳ ನಾಯಕರ ಜತೆಗೆ ಉತ್ತಮ ಬಾಂಧವ್ಯ ಇರಿಸಿಕೊಂಡಿದ್ದರು. ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುಲಾಯಂ ಉತ್ತಮ ಬಾಂಧವ್ಯ ಹೊಂದಿದ್ದರು. ಹೀಗಾಗಿಯೇ, 2015ರಲ್ಲಿ ತಮ್ಮ ತವರೂರು ಸೈಫಾಯಿಯಲ್ಲಿ ನಡೆದ ತಿಲಕ್‌ ಕಾರ್ಯಕ್ರಮಕ್ಕೆ ಖುದ್ದು ಪ್ರಧಾನಿ ಮೋದಿಯವರೇ ಭಾಗಿಯಾಗಿದ್ದರು. ಅಷ್ಟೇ ಅಲ್ಲ, 2019ರ ಲೋಕಸಭೆ ಚುನಾವಣೆಗೂ ಮುನ್ನ ಮತ್ತೂಮ್ಮೆ ಮೋದಿ ಪ್ರಧಾನಿಯಾಗಲಿ ಎಂದು ಹಾರೈಸಿದ್ದರು. ಇನ್ನು ಲಾಲು ಪ್ರಸಾದ್‌ ಯಾದವ್‌, ರಾಮ್‌ ವಿಲಾಸ್‌ ಪಾಸ್ವಾನ್‌, ದೇವೇಗೌಡ, ಸೋನಿಯಾ ಗಾಂಧಿ, ಶರದ್‌ ಪವಾರ್‌ ಸೇರಿದಂತೆ ರಾಷ್ಟ್ರ ರಾಜಕಾರಣದ ಎಲ್ಲ ಪ್ರಮುಖರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದರು. ರಾಷ್ಟ್ರ ರಾಜಕಾರಣದಲ್ಲಿ ಸಮ್ಮಿಶ್ರ ಸರಕಾರಗಳ ಯುಗದಲ್ಲಿ ಇವರು ಸಕ್ರಿಯ ವಾಗಿಯೂ ಭಾಗಿಯಾಗಿದ್ದರು.

ಮೂರು ಬಾರಿ ಉತ್ತರ ಪ್ರದೇಶ ಸಿಎಂ
ರಾಷ್ಟ್ರ ರಾಜಕಾರಣದಲ್ಲಿ ತನ್ನದೇ ಆದ ಹೆಸರು ಹೊಂದಿದ್ದ ಮುಲಾಯಂ ಸಿಂಗ್‌ ಯಾದವ್‌ಗೆ ಎರಡು ಬಾರಿ ಪ್ರಧಾನಿ ಹುದ್ದೆಗೇರುವ ಅವಕಾಶ ಸಿಕ್ಕಿತ್ತು. ಆದರೆ ಇದು ಫ‌ಲಪ್ರದವಾಗಲೇ ಇಲ್ಲ. ಇದಕ್ಕೆ ಕಾರಣ, ಸಮ್ಮಿಶ್ರ ರಾಜಕಾರಣ! ಹೌದು, ಮುಲಾಯಂ ಸಿಂಗ್‌ ಯಾದವ್‌ ಮೂರು ಬಾರಿ ಉತ್ತರ ಪ್ರದೇಶ ಸಿಎಂ ಆಗಿದ್ದರು. ವಿಚಿತ್ರವೆಂದರೆ ಒಂದು ಬಾರಿ ಮಾತ್ರ ಅವರು ಪೂರ್ಣಾ ವಧಿ ಪೂರೈಸಿದರು. 1989-1991 ಮತ್ತು 1993-95ರಲ್ಲಿ ಪೂರ್ಣಾವಧಿ ಪೂರೈಸಲು ಆಗಲಿಲ್ಲ. ಆದರೆ 2003ರಿಂದ 2007ರವರೆಗೆ ಕಡೆಯ ಬಾರಿ ಪೂರ್ಣಾವಧಿಗೆ ಸಿಎಂ ಆಗಿದ್ದರು. 1996ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿತ್ತು. ಬಿಜೆಪಿಗೂ ಸರಕಾರ ರಚಿಸುವಷ್ಟು ಸ್ಥಾನ ಸಿಕ್ಕಿರಲಿಲ್ಲ. ಆಗ ಮೂರನೇ ರಂಗದವರು ಸರಕಾರ ರಚಿಸುವುದು ಪಕ್ಕಾ ಆಗಿತ್ತು. ಅಂಥ ಸಂದರ್ಭದಲ್ಲಿ ಪ್ರಧಾನಿ ಹುದ್ದೆಗೆ ಕೇಳಿ ಬಂದವರಲ್ಲಿ ಮುಲಾಯಂ ಸಿಂಗ್‌ ಅವರ ಹೆಸರೂ ಇತ್ತು. ಆಗ ಆರ್‌ಜೆಡಿಯ ಲಾಲು ಪ್ರಸಾದ್‌ ಯಾದವ್‌ ಮತ್ತು ಜನತಾ ದಳದ ಶರದ್‌ ಯಾದವ್‌ ಅವರ ವಿರೋಧದಿಂದಾಗಿ ಪ್ರಧಾನಿ ಆಗಲು ಸಾಧ್ಯವಾಗಲಿಲ್ಲ. 1999ರಲ್ಲಿಯೂ ಹೀಗೇ ಆಗಿತ್ತು. ಆಗಲೂ ಯಾರೊಬ್ಬರಿಗೂ ಸ್ಪಷ್ಟ ಬಹುಮತ ಬಂದಿರಲಿಲ್ಲ. ಆಗಲೂ ತೃತೀಯ ರಂಗದಿಂದ ಪ್ರಧಾನಿ ಹುದ್ದೆಗೆ ಇವರ ಹೆಸರೇ ಕೇಳಿಬಂದಿತ್ತು. ಆಲೂ ಶರದ್‌ ಯಾದವ್‌ ಮತ್ತು ಲಾಲು ಯಾದವ್‌ ವಿರೋಧಿಸಿದ್ದರು. ಆಗ ವಾಜಪೇಯಿ ಅವರೇ ಸರಕಾರ ರಚಿಸಿದ್ದರು.

1984ರಲ್ಲಿ ಮುಲಾಯಂ ಹತ್ಯೆಗೆ ಯತ್ನ
1984ರ ಮಾರ್ಚ್‌ 4ರಂದು ಮುಲಾಯಂ ಸಿಂಗ್‌ ತಮ್ಮ ಕಾರಿನಲ್ಲಿ ಉತ್ತರಪ್ರದೇಶದ ಈಟ್ವಾದಿಂದ ಲಕ್ನೋಗೆ ತೆರಳುತ್ತಿದ್ದಾಗ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಕಾರಿನೊಳಗಿದ್ದ ಅವರಿಗೆ ಗುಂಡು ತಾಗದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದರು.ಯಾದವ್‌ ಕೊಲೆ ಯತ್ನ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕನ ಹೆಸರು ಕೇಳಿಬಂದಿತ್ತು. 2017ರ ವಿಧಾನಸಭಾ ಚುನಾವಣೆ ಪ್ರಚಾರದಲ್ಲಿ ನರೇಂದ್ರ ಮೋದಿ ಈ ಘಟನೆಯನ್ನು ಪ್ರಸ್ತಾಪಿಸಿ, “ಮುಲಾಯಂ ಹತ್ಯೆಗೆ ಕಾಂಗ್ರೆಸ್‌ ಯತ್ನಿಸಿತ್ತು. ಇಂತಹ ಕಾಂಗ್ರೆಸ್‌ ಪಕ್ಷದ ಜತೆ ಅಖೀಲೇಶ್‌ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಅಖೀಲೇಶ್‌ಗೆ ಇತಿಹಾಸ ಗೊತ್ತಿಲ್ಲ. ತಂದೆಯಿಂದ ಇವುಗಳನ್ನು ತಿಳಿದುಕೊಳ್ಳಲಿ’ ಎಂದು ತಿವಿದಿದ್ದರು.

ವೈಯಕ್ತಿಕ ಜೀವನ, ಹವ್ಯಾಸ
ಮುಲಾಯಂ ಸಿಂಗ್‌ ಯಾದವ್‌ ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಗಳಿಸಿ, ಕೆಲ ಕಾಲ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಯಾದವ್‌ಗೆ ನಾಲ್ವರು ಸಹೋದರರು ಹಾಗೂ ಓರ್ವ ಸೋದರಿ ಇದ್ದಾರೆ. ಈ ಪೈಕಿ ಕಿರಿಯ ಸೋದರ ಶಿವಪಾಲ್‌ ಯಾದವ್‌ ರಾಜಕೀಯದಲ್ಲಿದ್ದಾರೆ. ಮಾಲತಿ ದೇವಿ ಜತೆ ಯಾದವ್‌ ವಿವಾಹವಾದರು. ಈ ದಂಪತಿ ಪುತ್ರ ಅಖೀಲೇಶ್‌ ಯಾದವ್‌. 2003ರಲ್ಲಿ ಅನಾರೋಗ್ಯದಿಂದ ಮಾಲತಿ ದೇವಿ ನಿಧನರಾದ ಬಳಿಕ ಸಾಧನಾ ಗುಪ್ತ ಜತೆಗೆ ಎರಡನೇ ಬಾರಿಗೆ ವಿವಾಹವಾದರು. ಈ ಜೋಡಿಗೆ ಪ್ರತೀಕ್‌ ಯಾದವ್‌ ಜನಿಸಿದರು. ಇವರು ಉದ್ಯಮಿಯಾಗಿದ್ದು, ಅಪರ್ಣಾ ಯಾದವ್‌ ಜತೆ ವಿವಾಹವಾಗಿದ್ದಾರೆ. ಹಿರಿಯ ಪುತ್ರ ಅಖೀಲೇಶ್‌, ಡಿಂಪಲ್‌ ಅವರನ್ನು ವರಿಸಿದ್ದಾರೆ. ಈಕೆ ಕೂಡ ರಾಜಕಾರಣಿಯಾಗಿದ್ದಾರೆ. ಮುಲಾಯಂಗೆ ಕುಸ್ತಿ ಆಡುವುದು, ಸಂಗೀತ ಕೇಳುವುದು, ಜಾನಪದ ನೃತ್ಯಗಳನ್ನು ವೀಕ್ಷಿಸುವ ಹವ್ಯಾಸವಿತ್ತು.

ರಾಜಕೀಯ ಹೆಜ್ಜೆಗಳು
1967: ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆಗೆ ಪ್ರವೇಶ. ರಾಮಮನೋಹರ ಲೋಹಿಯಾ ಸಂಯುಕ್ತ ಸೋಶಿಯಲಿಸ್ಟ್‌ ಪಕ್ಷದಿಂದ ಸ್ಪರ್ಧಿಸಿ ಆಯ್ಕೆ.
1968 : ಚೌಧರಿ ಚರಣ್‌ ಸಿಂಗ್‌ ಅವರ ಭಾರತೀಯ ಕ್ರಾಂತಿ ದಳದ ಜತೆ ಮೈತ್ರಿ. ಬಳಿಕ ಎರಡೂ ಪಕ್ಷಗಳು ವಿಲೀನ. ಭಾರತೀಯ ಲೋಕ ದಳ ಪಕ್ಷ ಸ್ಥಾಪನೆ. ತುರ್ತು ಪರಿಸ್ಥಿತಿ ಬಳಿಕ ಜನತಾ ದಳದೊಂದಿಗೆ ಭಾರತೀಯ ಲೋಕದಳ ವಿಲೀನ.
1977 : ಉತ್ತರ ಪ್ರದೇಶ ಸಂಪುಟದಲ್ಲಿ ಮೊದಲ ಬಾರಿಗೆ ಸಚಿವ ಸ್ಥಾನ.
1980 : ಲೋಕದಳದ ರಾಜ್ಯ ಅಧ್ಯಕ್ಷ
1985 : ಜನತಾದಳದ ರಾಜ್ಯಾಧ್ಯಕ್ಷ
1989 : ಉತ್ತರ ಪ್ರದೇಶದ ಸಿಎಂ ಆಗಿ ಮೊದಲ ಬಾರಿಗೆ ಆಯ್ಕೆ
1992 : ಸಮಾಜವಾದಿ ಪಕ್ಷ ಸ್ಥಾಪನೆ
1993 : ಉತ್ತರ ಪ್ರದೇಶ ಸಿಎಂ ಆಗಿ ಎರಡನೇ ಬಾರಿಗೆ ಆಯ್ಕೆ. ಯುಪಿಯಲ್ಲಿ ಮಂಡಲ್‌ ಕಮಿಷನ್‌ ಜಾರಿ.
1996 : ಉತ್ತರ ಪ್ರದೇಶದ ಮೈನ್‌ಪುರಿಯಿಂದ ಮೊದಲ ಬಾರಿಗೆ ಲೋಕಸಭೆಗೆ ಸ್ಪರ್ಧೆ – ದೇವೇಗೌಡರ ಸಂಪುಟದಲ್ಲಿ ರಕ್ಷಣಾ ಸಚಿವರಾಗಿ ಸೇವೆ.
2003 : ಮೂರನೇ ಬಾರಿಗೆ ಯುಪಿ ಸಿಎಂ
2016 : ಮುಲಾಯಂ ವಿರುದ್ಧ ತಿರುಗಿಬಿದ್ದ ಪುತ್ರ ಅಖೀಲೇಶ್‌ ಯಾದವ್‌
2019 : ಮೈನ್‌ಪುರಿಯಿಂದ ಲೋಕಸಭೆಗೆ ಆಯ್ಕೆ.

Advertisement

Udayavani is now on Telegram. Click here to join our channel and stay updated with the latest news.

Next