ಮುಳಬಾಗಿಲು: ಜಿಲ್ಲೆಯ ಬರಪೀಡಿತವಾಗಿರುವ ತಾಲೂಕಿನಲ್ಲಿ ಕಳೆದ ಎರಡು-ಮೂರು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಚೆಕ್‌ಡ್ಯಾಂ, ನಾಲೆ, ಕೆರೆಗಳು ಭರ್ತಿಯಾಗುವ ಹಂತದಲ್ಲಿವೆ. ಜತೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ಈ ಭಾಗದ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಗಲಿದೆ.
ರೈತರ ಮೊಗದಲ್ಲಿ ಮಂದಹಾಸ: ತಾಲೂಕಿನಲ್ಲಿ ಮಳೆಯ ಕೊರತೆಯಿಂದ ಕಮರುತ್ತಿದ್ದ ಬೆಳೆಗಳಿಗೆ ಜೀವಕಳೆ ಬಂದಿದೆ. ತಾಲೂಕಿನ ರೈತರು ಬೆಳೆದಿದ್ದ ಭತ್ತ, ರಾಗಿ, ನೆಲಗಡಲೆ ಸೇರಿದಂತೆ ದ್ವಿದಳ ದಾನ್ಯಗಳಾದ ತೊಗರಿ, ಅವರೆ, ಅಲಸಂಧೆಗಳ ಉತ್ತಮ ಫಸಲು ದೊರೆಯುವ ನಿರೀಕ್ಷೆ ಮೂಡಿದೆ. ಇದರಿಂದಾಗಿ ರೈತರು, ಮತ್ತೊಮ್ಮೆ ಬೆಳೆ ನಷ್ಟದ ಸಂಕಷ್ಟದಿಂದ ಪಾರಾಗಿದ್ದಾರೆ. ಜತೆಗೆ ತಾಲೂಕಿನಲ್ಲಿರುವ ಬಹುತೇಕ ಕೆರೆಗಳು, ಚೆಕ್‌ಮ್‌ಂಗಳಿಗೆ ನೀರು ಹರಿದು ಬಂದಿರವುದು ರೈತರಲ್ಲಿ ಮತ್ತಷ್ಟು ಸಂತಸ ತಂದಿದೆ.
ತಾಲೂಕಿನಲ್ಲಿ ಮಳೆಯ ಪ್ರಮಾಣ: ಜೂನ್‌ನಲ್ಲಿ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶವಾಗುತ್ತದೆ. ಆದರೆ ತಾಲೂಕಿನಲ್ಲಿ ಮಳೆಯ ಕೊರತೆ ಎದುರಾಗಿ, ಬರಪೀಡಿತವಾಗಿತ್ತು. ತಾಲೂಕಿನಲ್ಲಿ ಏಪ್ರಿಲ್‌ನಲ್ಲಿ 30 ಮಿ. ಮೀ., ಮೇ ತಿಂಗಳಿನಲ್ಲಿ 71 ಮಿ.ಮೀ., ಮತ್ತು ಜೂನ್ ತಿಂಗಳಿನಲ್ಲಿ ಆವಣಿ ಹೋಬಳಿಯಲ್ಲಿ 125 ಮಿ.ಮೀ., ಮಳೆಯಾಗಿತ್ತು. ಭೈರಕೂರು 105 ಮಿ.ಮೀ., ದುಗ್ಗಸಂದ್ರ 130 ಮಿ.ಮೀ., ಕಸಬಾ 113 ಮಿ. ಮೀ., ತಾಯಲೂರು 194 ಮಿ.ಮೀ., ಮಳೆಯಾಗಿದ್ದರಿಂದ ರೈತರು ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದರು.
ಬಿತ್ತನೆಯಲ್ಲೂ ಕೊರತೆ: ತಾಲೂಕಿನಲ್ಲಿ ಒಟ್ಟಾರೆ 25,167 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಆದರೆ ಮಳೆ ಕೊರತೆ ಯಿಂದ ಕೇವಲ 3,147 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಇದೂ ಕೂಡ ಮಳೆ ಕೊರತೆಯಿಂದ ಬಾಡಿಹೋಗುವ ಸಂಕಷ್ಟ ಎದುರಾಗಿತ್ತು. ಆದರೆ ಸತತ ಎರಡ್ಮೂರು ದಿನಗಳಿಂದ ಸುರಿಯುತ್ತಿ ರುವ ಮಳೆಗೆ ಮತ್ತೆ ಬೆಳೆಗಳಿಗೆ ಕಳೆ ಬಂದಿದ್ದು, ಉತ್ತಮ ಫಸಲಿನ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ಮಳೆ ಬಂದರೆ ರಾಗಿ ಬೆಳೆಯು ಉತ್ತಮ ಫಸಲು ಬರಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ಚೆಕ್ ಡ್ಯಾಂ, ಕೆರೆ, ನಾಲೆಗಳು ಭರ್ತಿ: ಸತತ ಬರಗಾಲದಿಂದ ತತ್ತರಿಸಿದ್ದ ತಾಲೂಕು, ಕೇವಲ ಎರಡ್ಮೂರು ದಿನಗಳಲ್ಲಿ ಭರಪೂರ ಮಳೆಯಿಂದ ತಣಿದಿದೆ. ಇನ್ನೂ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದ್ದು, ತಾಲೂಕಿನ ನೀರಿನ ಸಮಸ್ಯೆ ತಾತ್ಕಾಲಿಕವಾಗಿ ಪರಿಹಾರವಾಗಲಿದೆ.
ನಿರಂತರ ಮಳೆಯಿಂದಾಗಿ ಕೆರೆ, ಚೆಕ್‌ಡ್ಯಾಂ, ನಾಲೆ, ಕಾಲುವೆಗಳು ಸಂಪೂರ್ಣ ಭರ್ತಿಯಾಗುವ ಹಂತದಲ್ಲಿವೆ. ಜಂಗಾಲಹಳ್ಳಿ ಬಳಿ ನಿರ್ಮಾಣ ಮಾಡಲಾಗಿರುವ ನಾಲಾ ಬದು, ಚೆಕ್ ಡ್ಯಾಂ, ಕಾಲುವೆ ತುಂಬಿವೆ. ಜಿಲ್ಲೆಯ ಅಂತರ್ಜಲ ಹೆಚ್ಚಿಸಲು ಜಿಪಂ ಸಿಇಒ ಜಿ. ಜಗದೀಶ್, ಸಾಕಷ್ಟು ಮುತುವರ್ಜಿ ವಹಿಸಿ 600 ಚೆಕ್‌ಡ್ಯಾಂ ನಿರ್ಮಾಣಕ್ಕೆ ಕ್ರಮಕೈಗೊಂಡಿದ್ದರು. ದುಗ್ಗಸಂದ್ರ ಹೋಬಳಿಯ ಕೂತಾಂಡಹಳ್ಳಿಯಲ್ಲಿ ನಿರ್ಮಿಸಲಾಗಿರುವ ಚೆಕ್ ಡ್ಯಾಂ ಮಳೆ ನೀರಿನಿಂದ ಭರ್ತಿಯಾಗಿದೆ.