Advertisement

ಮುಳಬಾಗಿಲು: ಅಭಿವೃದ್ಧಿಯಿಂದ ದೂರ ಉಳಿದ ಆವಣಿ ಬೆಟ್ಟದ “ಅಂತರಗಂಗೆ’

03:00 PM Mar 01, 2024 | Team Udayavani |

ಉದಯವಾಣಿ ಸಮಾಚಾರ
ಮುಳಬಾಗಿಲು: ತಾಲೂಕಿನ ಪುರಾಣ ಪ್ರಸಿದ್ಧ ಆವಣಿ ಸೀತಾಮಾತೆ ಬೆಟ್ಟದ ತಪ್ಪಲಿನಲ್ಲಿ ಅಂತರಗಂಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಲಸೌಕರ್ಯಗಳ ಕೊರತೆಯಿಂದ ಅಭಿವೃದ್ಧಿಯಾಗದೇ ಜನಮಾನಸದಿಂದ ದೂರ ಉಳಿದಿದೆ ಎಂಬ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದೆ.

Advertisement

ತಾಲೂಕಿನಲ್ಲಿ ವಿಜಯನಗರ ಅರಸರ ಕಾಲದಿಂದಲೂ ಹೆಸರುವಾಸಿಯಾಗಿದ್ದ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ, ಕುರುಡುಮಲೆ ವಿನಾಯಕ ದೇವಾಲಯ ಸೇರಿದಂತೆ ನೂರಾರು ಪುರಾಣ ಪ್ರಸಿದ್ಧ ಕ್ಷೇತ್ರಗಳ ಸಾಲಿಗೆ ಆವಣಿ ಕ್ಷೇತ್ರವೂ ಸೇರಿದ್ದು, ಇಲ್ಲಿರುವ ರಾಷ್ಟ್ರೀಯ ಸ್ಮಾರಕಗಳ ಸಾಲಿಗೆ ಸೇರಿದ ಶ್ರೀ ರಾಮಲಿಂಗೇಶ್ವರ ದೇವಾಲಯದ ಅಂಚಿನಲ್ಲಿಯೇ ಬೆಟ್ಟವಿದ್ದು, ರಾಮ, ಲಕ್ಷ್ಮಣ, ಸೀತಾಮಾತೆ ವಾಸವಾಗಿದ್ದ ಸ್ಥಳ, ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿ ಹಾಕಿದ ಧೀಮಂತ ವ್ಯಕ್ತಿಗಳಾದ ಲವಕುಶರ ಜನ್ಮಸ್ಥಳ ಹಾಗೂ ವಾಸದ ಮನೆ, ಸೀತಾಮಾತೆಯು ಜಿಗುಪ್ಸೆಗೊಂಡು ಭೂಗರ್ಭ ಸೇರಿದ ಪ್ರದೇಶ, ಬೆಟ್ಟದ ತಪ್ಪಲಿನಲ್ಲಿ ಶ್ರೀರಾಮ- ಲಕ್ಷ್ಮಣರು ವಾಸವಾಗಿದ್ದ ವೇಳೆ ಅಲ್ಲಿ  ಸ್ಥಾಪಿಸಲಾಗಿದ್ದ ಪಂಚಲಿಂಗ, ವಾಲ್ಮೀಕಿ ಮಹರ್ಷಿ ರಾಮಾಯಣ ಬರೆದ ಸ್ಥಳ ಇಲ್ಲಿನ ಐತಿಹ್ಯಗಳಾಗಿದೆ.

ವಿವಿಧ ದೇಗುಲಗಳು: ಆವಣಿ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಸೀತಾಮಾತೆ ಬೆಟ್ಟದ ತಪ್ಪಲಿನ ದಕ್ಷಿಣ ಭಾಗಕ್ಕಿರುವ ಶಿವಲಿಂಗಗಳ ಕೆಲವೇ ಅಡಿಗಳ ದೂರಲ್ಲಿ ಶ್ರೀ ಗಂಗಾಧರೇಶ್ವರ ದೇಗುಲವಿದ್ದು, ಅದರೊಂದಿಗೆ ಸದರಿ ದೇಗುಲ ಪಕ್ಕದಲ್ಲಿಯೇ ಶ್ರೀನರಸಿಂಹಸ್ವಾಮಿಯ ದೇಗುಲವಿದೆ. ಪ್ರತಿವರ್ಷ ಯುಗಾದಿಯ ಹಬ್ಬದಂದು ನರಸಿಂಹಸ್ವಾಮಿ ದೇಗುಲದಲ್ಲಿ ನಡೆಯುವ ವಿಶಿಷ್ಟವಾದ ಪೂಜಾ ಕಾರ್ಯಕ್ರಮ ನೋಡುಗರ ಮೈನವಿರೇಳುವಂತಿರುತ್ತದೆ.

ಸರ್ಕಾರಕ್ಕೆ ಸಾಕಷ್ಟು ಆದಾಯ: ಅದರ ಅಂಚಿನಲ್ಲಿಯೇ ಅತ್ಯಂತ ಮಹತ್ವವಾದ 10×10 ಅಡಿ ಅಗಲದ ವಿಸ್ತೀರ್ಣದಲ್ಲಿ ಅಂತರಗಂಗೆ ಇದ್ದು, ಕೋಲಾರದ ಅಂತರಗಂಗೆಯಂತೆ ಇಲ್ಲಿಯೂ ಸಹ ವರ್ಷವಿಡೀ ಬಸವಣ್ಣನ ಹೊಕ್ಕಳಿನಲ್ಲಿ ನೀರು ಬರುತ್ತದೆ. ಈ ನೀರು ಕುಡಿಯಲು ಅತ್ಯುತ್ತಮವಾಗಿದ್ದು, ಇದರ ಸುತ್ತಮುತ್ತಲೂ ವಾಸವಾಗಿರುವ 25-30 ದಲಿತ ಕುಟುಂಬಗಳಿಗೆ ಅಂತರಗಂಗೆಯ ನೀರೇ ಜೀವನಾಧಾರವಾವಾಗಿರುತ್ತದೆ ಎನ್ನಲಾಗಿದೆ.

ಒಟ್ಟಿನಲ್ಲಿ ಪ್ರತಿವರ್ಷ ಆವಣಿ ಕ್ಷೇತ್ರದಲ್ಲಿ ನಡೆಯುವ ಶ್ರೀಪ್ರಸನ್ನ ರಾಮಲಿಂಗೇಶ್ವರ ಬ್ರಹ್ಮರಥೋತ್ಸವಕ್ಕೆ ಲಕ್ಷಾಂತರ ಜನರು
ಭೇಟಿ ನೀಡುತ್ತಾರೆ. ಅದರಂತೆ ಸಾಕಷ್ಟು ಆದಾಯ ಸರ್ಕಾರಕ್ಕೆ ಜಮಾ ಆಗುತ್ತಿದ್ದರೂ, ಯಾವುದೇ ಇಲಾಖೆ ಅಭಿವೃದ್ಧಿ ಮಾಡದ ಕಾರಣ ಅಂತರಗಂಗೆಯು ಅಭಿವೃದ್ಧಿಯಿಂದ ದೂರವಾಗಿ ಉಳಿದಿದೆ.

Advertisement

ಪುನರ್‌ ನಿರ್ಮಾಣ ಮಾಡಲು ಆಗ್ರಹ 
ಈ ಅಂತರಗಂಗೆ ಪುಣ್ಯಕ್ಷೇತ್ರವು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೂಲ ಭೂತ ಸೌಕರ್ಯ ಕೊರತೆಯಿಂದ ಅಭಿವೃದ್ಧಿಯಾಗದೇ ಜನಮಾನಸದಿಂದ ದೂರ ಉಳಿದಿದ್ದು, ಇದರಿಂದ ಈ ಅಂತರಗಂಗೆಯನ್ನು ಪುನರ್‌ ನಿರ್ಮಾಣ ಮಾಡಬೇಕೆಂದು ಮುಖಂಡ ಆವಣಿ ಕಾಶಿ ಎಂಬುವರು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಆವಣಿ ಕ್ಷೇತ್ರವು ಪ್ರಾಚ್ಯವಸ್ತುಇಲಾಖೆ ಒಡೆತನದಲ್ಲಿರು ವುದರಿಂದ ಸೀತಾಮಾತೆ ಬೆಟ್ಟದ ತಪ್ಪಲಿನಲ್ಲಿರುವ ಅಂತರಗಂಗೆ ಅಭಿವೃದ್ಧಿಯ ಕುರಿತು ಪ್ರಾಚ್ಯವಸ್ತು ಇಲಾಖೆಯು ಕ್ರಮ ಕೈಗೊಳ್ಳಲಿದೆ.
●ಸಿ. ಸುಬ್ರಮಣ್ಯಂ, ರಾಜಸ್ವ ನಿರೀಕ್ಷಕ, ಆವಣಿ ಹೋಬಳಿ

■ ಎಂ. ನಾಗರಾಜಯ್ಯ

 

Advertisement

Udayavani is now on Telegram. Click here to join our channel and stay updated with the latest news.

Next