ನವದೆಹಲಿ: ಪ್ಯಾಲೆಸ್ತೀನ್‌ಗೆ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರು ರಾಮಲ್ಲಾದಲ್ಲಿರುವ ಭಾರತೀಯ ಮಿಷನ್‌ನಲ್ಲಿ ಭಾನುವಾರ ಶವವಾಗಿ ಪತ್ತೆಯಾಗಿದ್ದಾರೆ. 2008ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆಯ ಅಧಿಕಾರಿ ಆರ್ಯ ಹೇಗೆ ಸಾವನ್ನಪ್ಪಿದ್ದಾರೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ರಾಜತಾಂತ್ರಿಕರ ಸಾವಿನ ಬಗ್ಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಘಾತ ವ್ಯಕ್ತಪಡಿಸಿದ್ದಾರೆ. “ರಾಮಲ್ಲಾದಲ್ಲಿ ಭಾರತದ ಪ್ರತಿನಿಧಿ ಮುಕುಲ್ ಆರ್ಯ ಅವರ ನಿಧನದ ಬಗ್ಗೆ ತಿಳಿದು ತೀವ್ರ ಆಘಾತವಾಗಿದೆ. ತುಂಬಾ ಉಜ್ವಲ ಮತ್ತು ಪ್ರತಿಭಾವಂತ ಅಧಿಕಾರಿಯಾಗಿದ್ದರು. ನನ್ನ ಹೃದಯವು ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗಾಗಿ ಮಿಡಿಯುತ್ತಿದೆ . ಓಂ ಶಾಂತಿ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮುಕುಲ್ ಆರ್ಯ ಅವರ ಕೆಲಸದ ಸ್ಥಳದಲ್ಲಿ ಅವರ ಸಾವಿನ ಬಗ್ಗೆ ಪ್ಯಾಲೆಸ್ತೀನ್‌ನ ಉನ್ನತ ನಾಯಕತ್ವವು ಭಾನುವಾರ ಆಘಾತ ವ್ಯಕ್ತಪಡಿಸಿದೆ. ರಾಯಭಾರಿ ಆರ್ಯ ಅವರ ಸಾವಿನ ಸುದ್ದಿಯನ್ನು “ದೊಡ್ಡ ಅಚ್ಚರಿ ಮತ್ತು ಆಘಾತ” ದಿಂದ ಸ್ವೀಕರಿಸಲಾಗಿದೆ ಎಂದು ಪ್ಯಾಲೇಸ್ಟಿನಿಯನ್ ವಿದೇಶಾಂಗ ಸಚಿವಾಲಯ ಹೇಳಿದೆ.
30 ರ ಹರೆಯದ ಆರ್ಯ, 2008 ರ ಬ್ಯಾಚ್ ಭಾರತೀಯ ವಿದೇಶಾಂಗ ಸೇವೆಯ ವೃತ್ತಿ ರಾಜತಾಂತ್ರಿಕ ಅಧಿಕಾರಿಯಾಗಿದ್ದರು. ಅವರು ಮಾಸ್ಕೋ, ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ಮತ್ತು ದೆಹಲಿಯ ವಿದೇಶಾಂಗ ಸಚಿವಾಲಯದ ಪ್ರಧಾನ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.ಅವರು ಪ್ಯಾರಿಸ್‌ನಲ್ಲಿ ಯುನೆಸ್ಕೋಗೆ ಭಾರತದ ಖಾಯಂ ನಿಯೋಗದಲ್ಲಿ ಸೇವೆ ಸಲ್ಲಿಸಿದರು.
ಭಾರತೀಯ ವಿದೇಶಾಂಗ ಸೇವೆಗೆ ಸೇರುವ ಮೊದಲು ದೆಹಲಿ ವಿಶ್ವವಿದ್ಯಾಲಯ ಮತ್ತು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದರು.