Advertisement

ಮುಕ್ಕಚ್ಚೇರಿ: ದೂರು  ನೀಡಿದ್ದೇ ಅಬ್ದುಲ್‌ ಜುಬೇರ್‌ ಕೊಲೆಗೆ ಕಾರಣ

07:55 AM Oct 06, 2017 | Team Udayavani |

ಉಳ್ಳಾಲ: ಮುಕ್ಕಚ್ಚೇರಿ ಮಸೀದಿ ಎದುರು ರೌಡಿ ಗ್ಯಾಂಗ್‌ನಿಂದ ಹತ್ಯೆಗೀಡಾದ ಅಬ್ದುಲ್‌ ಜುಬೇರ್‌ ರೌಡಿ ಗ್ಯಾಂಗ್‌ ವಿರುದ್ಧ ಸಹಿ ಸಂಗ್ರಹಿಸಿ ದೂರು ನೀಡಿದ್ದೇ ಕಾರಣವಾಗಿದ್ದು, ಕೊಲೆ ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಜುಬೇರ್‌ನ ಸಾವಿನಿಂದ ಇಡೀ ಕುಟುಂಬವೇ ಅತಂತ್ರ ಸ್ಥಿತಿಯಲ್ಲಿದೆ.

Advertisement

ಉಳ್ಳಾಲದ ಫಿಶ್‌ಮಿಲ್‌ನಲ್ಲಿ ಇಲೆಕ್ಟ್ರಿಕಲ್‌ ಕೆಲಸ ಮುಗಿಸಿ ಮುಕ್ಕಚ್ಚೇರಿಯ ಮಸೀದಿಯಲ್ಲಿ ನಮಾಝ್ ಮುಗಿಸಿ ಸ್ನೇಹಿತ ಇಲ್ಯಾಸ್‌ನೊಂದಿಗೆ ಬೈಕ್‌ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸುಹೈಲ್‌ ನೇತೃತ್ವದ ನಾಲ್ವರ ತಂಡ ತಲವಾರಿನಿಂದ ಯದ್ವಾತದ್ವಾ ಹಲ್ಲೆ ನಡೆಸಿ ಪರಾರಿಯಾಗಿತ್ತು. 

ಗಂಭೀರ ಗಾಯಗೊಂಡಿದ್ದ ಜುಬೈರ್‌ ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದರು. ಇಲ್ಯಾಸ್‌ ಕೈಗೆ ತಲವಾರಿನ ಏಟು ಬಿದ್ದಿದ್ದು, ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಘಟನೆಯ ಬಳಿಕ ಪೊಲೀಸರು ತನಿಖೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಟಾರ್ಗೆಟ್‌ ತಂಡದ ರೌಡಿಗಳು 
ಕೊಲೆಯ ಮಾಸ್ಟರ್‌ ಮೈಂಡ್‌ ಆಗಿದ್ದಾನೆ ಎಂದು ಆರೋಪಿಸಿರುವ ಅಲ್ತಾಫ್‌ ಮತ್ತು ಕೊಲೆ ನಡೆಸಿದ ಸುಹೈಲ್‌ ಈ ಹಿಂದೆ ಉಳ್ಳಾಲದಲ್ಲಿ ಸುಂದರ ಹುಡುಗಿಯರನ್ನು ಬಳಸಿ ಶ್ರೀಮಂತ ಕುಳಗಳನ್ನು ಹನಿಟ್ರಾಪ್‌ ಮೂಲಕ ದೋಚುತ್ತಿದ್ದ ಉಳ್ಳಾಲ ನಿವಾಸಿ ಇಲ್ಯಾಸ್‌ ನೇತೃತ್ವದ ಟಾರ್ಗೆಟ್‌ ಗ್ರೂಪ್‌ನ ಪ್ರಮುಖ ಸದಸ್ಯರು. ಟಾರ್ಗೆಟ್‌ ಗ್ರೂಪ್‌ ಹನಿ ಟ್ರಾಪ್‌ನೊಂದಿಗೆ ಸ್ಥಳೀಯವಾಗಿ ಹಫ್ತಾ ವಸೂಲು ಮಾಡುತ್ತಿತ್ತು. ಉಳ್ಳಾಲದ ಕಿಲೇ ರಿಯಾ ನಗರದಲ್ಲಿ ಟಾರ್ಗೆಟ್‌ ಗ್ರೂಪ್‌ನ ಅಲ್ತಾಫ್‌ ನೇತೃತ್ವದಲ್ಲಿ ಸ್ಥಳೀಯರಿಗೆ ತೊಂದರೆ ಯಾದಾಗ ಪರಿಸರದ ಎಲ್ಲರೂ ಒಗ್ಗಟ್ಟಾಗಿ ಸಹಿ ಸಂಗ್ರಹಿಸಿ ಉಳ್ಳಾಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ದೂರು ನೀಡಿದ ತಂಡದ ನೇತೃತ್ವ ವಹಿಸಿದ್ದ ಅಬ್ದುಲ್‌ ಜುಬೈರ್‌ ಮೇಲೆ ಟಾರ್ಗೆಟ್‌ ಮಾಡಿದ್ದರು.

ತಲವಾರಿನಿಂದ ಹಲ್ಲೆ ನಡೆಸಿದ್ದರು
ಸಹಿ ಸಂಗ್ರಹ ಮತ್ತು ದೂರು ನೀಡಿದ ವಿಚಾರದಲ್ಲಿ ಅಲ್ತಾಫ್‌, ಸುಹೈಲ್‌ ತಂಡ 2016ರ ಫೆ. 24ರಂದು ಮುಕ್ಕಚ್ಚೇರಿಯ ಅರಾಫ ಹೊಟೇಲ್‌ ಎದುರು ಅಬ್ದುಲ್‌ ಜುಬೈರ್‌ ಮತ್ತು ಒಟ್ಟಿಗಿದ್ದ ಸದ್ದಾಂ ಅವರ ಮೇಲೆ ತಲವಾರು ಹಲ್ಲೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯರು ಆಗಮಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಪ್ರಕರಣದಲ್ಲಿ ಜುಬೇರ್‌ ಪ್ರಮುಖ ಸಾಕ್ಷಿಯಾ ಗಿದ್ದು, ಸಾಕ್ಷಿಯನ್ನು ಹಿಂಪಡೆದು ಪ್ರಕರಣದಿಂದ ಹಿಂದೆ ಸರಿಯು ವಂತೆ ಅಲ್ತಾಫ್‌ ತಂಡ ಬೆದರಿಕೆ ಹಾಕಿತ್ತು.

Advertisement

ಮೂರು ತಿಂಗಳ ಹಿಂದೆ ಹೊರ ಬಂದಿದ್ದ 
ಅಲ್ತಾಫ್‌ ಮತ್ತು ತಂಡ ಜುಬೇರ್‌ಗೆ ಹಲ್ಲೆ ನಡೆಸಿದ ವಿಚಾರದಲ್ಲಿ ಬಂಧಿತರಾಗಿದ್ದು, ಸುಮಾರು 18 ಪ್ರಕರಣಗಳಲ್ಲಿ ಆರೋಪಿ ಯಾಗಿದ್ದ ಅಲ್ತಾಫ್‌ ಮೇಲೆ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಜೈಲಿನಲ್ಲಿರುವಾಗಲೇ ಕೇಸು ಹಿಂಪಡೆಯು ವಂತೆ ಜುಬೈರ್‌ಗೆ ಬೆದರಿಕೆ ಕರೆ ಮಾಡುತ್ತಿದ್ದ ಅಲ್ತಾಫ್‌ ಮೂರು ತಿಂಗಳ ಹಿಂದೆ ಜೈಲಿನಿಂದ ವಾಪಸಾಗಿದ್ದ. ಈತ ಜುಬೈರ್‌ ಕೊಲೆಗೆ ಸಂಚು ರೂಪಿಸಿ ತನ್ನ ಸಹಚರರಲ್ಲಿ ಪ್ರಮುಖರಾಗಿದ್ದ ಸುಹೈಲ್‌ಗೆ ಮಾರ್ಗದರ್ಶನ ನೀಡಿ ಕೊಲೆ ನಡೆಸಿದ್ದಾನೆ ಎಂದು ಜುಬೈರ್‌ ಮನೆಯ ವರು ಉಳ್ಳಾಲ  ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅತಂತ್ರದಲ್ಲಿ ಜುಬೈರ್‌ ಕುಟುಂಬ  
ಜುಬೈರ್‌ ಪತ್ನಿ ಮತ್ತು ಇಬ್ಬರು ಪುತ್ರಿಯರು, ನಾಲ್ವರು ಪುತ್ರರನ್ನು ಅಗಲಿದ್ದು, ಎಲ್ಲ ಮಕ್ಕಳೂ ಶಾಲೆಗೆ ಹೋಗುತ್ತಿದ್ದು, ಇವರು ಕುಟುಂಬದ ಆಧಾರ ಸ್ತಂಭವಾಗಿದ್ದರು. ಜುಬೈರ್‌ ಸಾವಿನಿಂದ ಇಡೀ ಕುಟುಂಬವೇ ಅತಂತ್ರವಾಗಿದೆ.

ಠಾಣೆಗೆ ಮುತ್ತಿಗೆ 
ಜುಬೈರ್‌ ಹತ್ಯಾ ಆರೋಪಿಗಳನ್ನು ಬಂಧಿಸು ವಂತೆ ಆಗ್ರಹಿಸಿ ಜುಬೈರ್‌ ಹಿತೈಷಿಗಳು, ಸ್ಥಳೀಯರು ಸೇರಿದಂತೆ ಸುಮಾರು 500ಕ್ಕೂ ಹೆಚ್ಚು ಜನ ಉಳ್ಳಾಲ ಪೊಲೀಸ್‌ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. 
ಈ ಸಂದರ್ಭದಲ್ಲಿ  ಜುಬೈರ್‌ ಸಹೋದರ ಆಸೀಫ್‌, ಬಿಜೆಪಿ ಕ್ಷೇತ್ರಾಧ್ಯಕ್ಷ ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ಮುಖಂಡರಾದ ಫಝಲ್‌ ಅಸೈಗೋಳಿ, ಡಾ| ಮುನೀರ್‌ ಬಾವಾ, ಅಝYರ್‌ ,  ಜಯರಾಮ ಶೆಟ್ಟಿ ಕಂಬÛಪದವು, ಅಶ್ರಫ್‌ ಹರೇಕಳ, ಸಿರಾಜ್‌ ಮುಡಿಪು ಮತ್ತಿತರರು ಉಪಸ್ಥಿತರಿದ್ದರು.

ಹೊಂಚು ಹಾಕಿ ಕುಳಿತಿದ್ದರು 
ಜುಬೈರ್‌ ಕೊಲೆಗೆ ಅಲ್ತಾಫ್‌ ನೇತೃತ್ವದಲ್ಲಿ ಸಂಜೆಯಿಂದಲೇ ಮುಕ್ಕಚ್ಚೇರಿಯಲ್ಲಿ ಹಂತಕರು ಕಾದು ಕುಳಿತ್ತಿದ್ದರು. ಸಂಜೆ ವೇಳೆ ಸ್ಥಳೀಯರೊಬ್ಬರಲ್ಲಿ ಸುಹೈಲ್‌ ಜುಬೇರ್‌ ಎಲ್ಲಿದ್ದಾನೆ ಎಂದು ಕೇಳಿದ್ದ. ಆದರೆ ಆ ವ್ಯಕ್ತಿ ಸಂಶಯಗೊಂಡು ಜುಬೈರ್‌ ಅವರಿಗೆ ದೂರವಾಣಿ ಕರೆ ಮಾಡಿದರೂ ಮೊಬೈಲ್‌ ನಾಟ್‌ ರೀಚೆಬಲ್‌ ಆಗಿತ್ತು. ಮತ್ತೆ  ಅವರ ಸಹೋದರನಿಗೆ ಕರೆ ಮಾಡಿ ವಿಚಾರ  ತಿಳಿಸಿದ್ದರು. ಸಹೋದರನೂ ತಡಮಾಡದೆ ಅಣ್ಣ ಜುಬೈರ್‌ಗೆ ಕರೆ ಮಾಡಿದರೂ ಮೊಬೈಲ್‌ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ. ಕೂಡಲೇ ತಾಯಿಯ ಗಮನಕ್ಕೆ ತಂದಿದ್ದು,  ವಿಷಯ ಜುಬೈರ್‌ಗೆ ಮುಟ್ಟಿಸುವಂತೆ ತಿಳಿಸಿದ್ದರು. ಆದರೆ ಜುಬೈರ್‌ ಮಾತ್ರ ಕೆಲಸದಿಂದ ನೇರವಾಗಿ ಮಸೀದಿಗೆ ತೆರಳಿದ್ದರಿಂದ ಮಾಹಿತಿ ಸಿಗದೆ ಹಂತಕರ ದಾಳಿಗೆ ತುತ್ತಾಗುವಂತಾಯಿತು ಎಂದು ಸ್ಥಳೀಯರೊಬ್ಬರು ತಿಳಿಸಿದರು. ಈ ಹಿಂದೆ ಉಳ್ಳಾಲದಲ್ಲಿರುವ ಹೊಸಪಳ್ಳಿಗೆ ನಮಾಝ್ಗೆ ತೆರಳುತ್ತಿದ್ದ ಜುಬೈರ್‌ನನ್ನು ಮುಕ್ಕಚ್ಚೇರಿ ಮಸೀದಿಗೆ ಬರಲು ಕಾರಣವೂ ನಿಗೂಢವಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಎರಡು ನಿಮಿಷದಲ್ಲಿ  ಎಲ್ಲವೂ ಮುಗಿದಿತ್ತು  
ಮಸೀದಿಯ ಎದುರು ಬೈಕ್‌ ಮೇಲೆ ಕುಳಿತಿದ್ದ ಜುಬೈರ್‌ ಮೇಲೆ ಮೊದಲೇ ಅಂಗಡಿಯೊಂದರ ಬಳಿ ನಿಗಾ ವಹಿಸಿದ್ದ ಯುವಕ ಮತ್ತು ಮಸೀದಿಯ ಆವರಣದೊಳಗಿನಿಂದ ಬಂದಿದ್ದ ಮೂವರು ಯುವಕರು ತಲವಾರು ಮತ್ತು ಲಾಂಗ್‌ಗಳಿಂದ ಹಲ್ಲೆ ನಡೆಸಿದ್ದರು. ಎರಡು ನಿಮಿಷದಲ್ಲಿ ತಮ್ಮ ಕೃತ್ಯ ಮುಗಿಸಿದ್ದ ಈ ನಾಲ್ವರು ಮಸೀದಿಯ ಆವರಣದ ಮೂಲಕ ಹಿಂಬದಿಯ ಗುಡ್ಡೆಗೆ ಹತ್ತಿ ಪರಾರಿಯಾದರೆ, ಅಲ್ಲೇ ಪಕ್ಕದಲ್ಲಿ ನಿಂತಿದ್ದ ಮಾರುತಿ ಆಮ್ನಿಯಲ್ಲಿ ಇತರ ನಾಲ್ವರು ತೆರಳಿರುವುದು ಅನುಮಾನಕ್ಕೆ ಎಡೆ ಮಾಡಿದ್ದು, ಅಲ್ತಾಫ್‌ ಆಮ್ನಿಯಲ್ಲಿ ನಿಂತು ಮಾರ್ಗದರ್ಶನ ನೀಡಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next