ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ, ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಮತ್ತು ಅವರ ಕುಟುಂಬ ಲಂಡನ್‌ಗೆ ತೆರಳುವ ಸಾಧ್ಯತೆಯಿದೆ ಎಂದು ಹಲವಾರು ವರದಿಗಳು ಹರಿದಾಡುತ್ತಿದ್ದು, ಇದಕ್ಕೆ ರಿಲಯನ್ಸ್ ಗ್ರೂಪ್ ಸ್ಪಷ್ಟನೆ ನೀಡಿದೆ.
ಲಂಡನ್ ನ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಮುಕೇಶ್ ಅಂಬಾನಿ ಖರೀದಿಸಿದ ಬಳಿಕ ಈ ವರದಿಗಳು ಹರಿದಾಡಿದ್ದು, ಆದರೆ ಈ ವರದಿಗಳು “ಆಧಾರರಹಿತ” ಎಂದು ರಿಲಯನ್ಸ್ ಗ್ರೂಪ್ ಹೇಳಿದೆ.
ಮುಖೇಶ್ ಅಂಬಾನಿ ಕುಟುಂಬವು ಲಂಡನ್‌ನ ಸ್ಟೋಕ್ ಪಾರ್ಕ್‌ನಲ್ಲಿ ವಾಸಿಸುವ ಯೋಜನೆ ಹಾಕಿಕೊಂಡಿದ್ದಾರೆ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್, ಇದಕ್ಕೆ ಯಾವುದೇ ಆಧಾರವಿಲ್ಲವೆಂದು ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದೆ. ಅಂಬಾನಿ ಮತ್ತು ಅವರ ಕುಟುಂಬವು ಲಂಡನ್ ಅಥವಾ ಪ್ರಪಂಚದ ಬೇರೆಲ್ಲಿಯೂ ಸ್ಥಳಾಂತರಗೊಳ್ಳುವ ಯಾವುದೇ ಯೋಜನೆಗಳನ್ನು ರೂಪಿಸಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ:ವ್ಯಾಟ್ ಕಡಿತಕ್ಕೆ ಆಗ್ರಹಿಸಿ ಕೇಜ್ರಿವಾಲ್ ನಿವಾಸದ ಬಳಿ ಬಿಜೆಪಿ ಧರಣಿ
ಮುಕೇಶ್ ಅಂಬಾನಿ ಅವರು ತಮ್ಮ ಕುಟುಂಬದೊಂದಿಗೆ ಮಹಾರಾಷ್ಟ್ರದ ಮುಂಬೈನ ಆ್ಯಂಟಿಲಾ ನಿವಾಸದಲ್ಲಿ ವಾಸಿಸುತ್ತಿದ್ದಾರೆ.
“ಲಂಡನ್ ನ ಎಸ್ಟೇಟ್ ಸ್ವಾಧೀನವು ಸಮೂಹದ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ವ್ಯವಹಾರಕ್ಕೆ ಸೇರುತ್ತದೆ. ಅದೇ ಸಮಯದಲ್ಲಿ, ಇದು ಜಾಗತಿಕವಾಗಿ ಭಾರತದ ಪ್ರಸಿದ್ಧ ಆತಿಥ್ಯ ಉದ್ಯಮದ ಹೆಜ್ಜೆಗುರುತನ್ನು ವಿಸ್ತರಿಸುತ್ತದೆ” ಎಂದು ಹೇಳಿಕೆ ತಿಳಿಸಿದೆ.