ರಿಯಾದ್: ಹಲವು ಗಗನಚುಂಬಿ ಕಟ್ಟಡಗಳ ನಿರ್ಮಾಣದ ಮೂಲಕ ವಿಶ್ವ ದಾಖಲೆಗಳನ್ನು ಬರೆದಿರುವ ಸೌದಿ ಅರೇಬಿಯಾ ಈಗ ಮತ್ತೂಂದು “ಎಂಜಿನಿಯರಿಂಗ್ ವಿಸ್ಮಯ’ಕ್ಕೆ ಸಾಕ್ಷಿಯಾಗಲಿದೆ.
ಬೃಹತ್ ಕಟ್ಟಡದೊಳಗೆ ಒಂದಿಡೀ ನಗರವೇ ಇರುವಂಥ “ಮುಕಾಬ್'(ನ್ಯೂ ಮುರಬ್ಟಾ) ಎಂಬ ಹೊಸ ಪ್ರಾಜೆಕ್ಟ್ ಅನ್ನು ದೇಶದ ರಾಜಧಾನಿ ರಿಯಾದ್‌ನಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಈ ಪ್ರಸ್ತಾವಿತ ಯೋಜನೆಯ ನೀಲನಕ್ಷೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಡೀ ಕಟ್ಟಡವು ನೋಡಲು ಟೊಳ್ಳಾದ ಘನಾಕೃತಿಯನ್ನು ಹೊಂದಿರಲಿದೆ. ವಿಶೇಷವೆಂದರೆ, ನ್ಯೂಯಾರ್ಕ್‌ನಲ್ಲಿರುವ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನಷ್ಟು ದೊಡ್ಡದಾದ 20 ಕಟ್ಟಡಗಳನ್ನು ಇದರೊಳಗೆ ನಿರ್ಮಿಸಬಹುದಾಗಿದೆ.
ಮುಕಾಬ್‌ನೊಳಗೆ ಮ್ಯೂಸಿಯಂ, ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾನಿಲಯ, ಬಹೂಪಯೋಗಿ ಥಿಯೇಟರ್, 80ಕ್ಕೂ ಹೆಚ್ಚು ಮನರಂಜನ ಹಾಗೂ ಸಾಂಸ್ಕೃತಿಕ ತಾಣಗಳು ಇರಲಿವೆ.
ಮುಕಾಬ್‌ನ ಒಟ್ಟಾರೆ ವಿಸ್ತೀರ್ಣ 25 ದಶಲಕ್ಷ ಚದರ ಕಿ.ಮೀ. ಆಗಿದ್ದು, 1.04 ಲಕ್ಷ ವಸತಿ ಗೃಹಗಳು, 9 ಸಾವಿರ ಹೊಟೇಲ್ ರೂಂಗಳು, ಮಳಿಗೆಗಳಿಗಾಗಿ 9.80 ಲಕ್ಷ ಚದರ ಮೀಟರ್ ಪ್ರದೇಶ, 1.4 ದಶಲಕ್ಷ ಚದರ ಮೀಟರ್ ಆಫೀಸ್ ಸ್ಪೇಸ್ ಸಹಿತ ಹಲವು ಸೌಕರ್ಯಗಳು ಇದರಲ್ಲಿ ಇರಲಿವೆ. 2030ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವ ನಿರೀಕ್ಷೆಯಿದೆ.