ಚಿಕ್ಕಮಗಳೂರು: ದತ್ತಪೀಠದಲ್ಲಿ ಮುಜಾವರ್ ಮತ್ತು ಹಿಂದೂ ಅರ್ಚಕರ ನೇಮಕ ವಿವಾದಕ್ಕೆ ಸಂಬಂಧಿಸಿ ಮೂವರು ಸಚಿವರನ್ನ ಒಳಗೊಂಡಿರುವ ಸಚಿವ ಸಂಪುಟದ ಉಪಸಮಿತಿ ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಲಿದೆ.
ಕಾನೂನು ಸಚಿವ ಮಾಧುಸ್ವಾಮಿ, ಮುಜರಾಯಿ ಸಚಿವೆ ಶಶಿಕಲಾ ಜೋಲ್ಲೆ, ಸಚಿವ ಅಂಗಾರ ನೇತೃತ್ವದ ಉಪಸಮಿತಿ ಸ್ಥಳೀಯರು ಮತ್ತು ಸಾರ್ವಜನಿಕರಿಂದ ಲಿಖಿತ ಅಹವಾಲು ಸ್ವೀಕರಿಸಲಿದ್ದಾರೆ.
ಅರ್ಚಕರ ನೇಮಕ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದ್ದು, ಫೆಬ್ರವರಿ 7 ರಂದು ಚಿಕ್ಕಮಗಳೂರಿಗೆ ಉಪ ಸಮಿತಿ ಸದಸ್ಯರು ಆಗಮಿಸಿ, ಹಿಂದೂ ಅರ್ಚಕರ ನೇಮಕದ ಕುರಿತು ಮಾಹಿತಿ ಸಂಗ್ರಹಿಸಲಿದ್ದಾರೆ.
ಮುಜಾವರ್ ರಿಂದ ದತ್ತಾತ್ರೇಯ ಪೂಜೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ನಿವೃತ್ತ ಜಡ್ಜ್ ನಾಗಮೋಹನದಾಸ್ ಕಮಿಟಿಯನ್ನು ಹಿಂದಿನ ಕಾಂಗ್ರೆಸ್ ಸರ್ಕಾರ ರಚನೆ ಮಾಡಿತ್ತು. ಕಮಿಟಿ ಮುಜಾವರ್ ನೇಮಕ ಸಂಬಂಧಿಸಿದಂತೆ ವರದಿಯನ್ನು ಸರ್ಕಾರಕ್ಕೆ ನೀಡಿತ್ತು. ಇದನ್ನ ಪ್ರಶ್ನಿಸಿ ಹಿಂದೂಪರ ಸಂಘಟನೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ಸರ್ಕಾರಕ್ಕೆ ಎರಡು ಸಮುದಾಯದ ಅವಾಹಲು ಸ್ವೀಕರಿಸಲು ಹೈ ಕೋರ್ಟ್ ಆದೇಶ ನೀಡಿತ್ತು.
ಪೂಜಾ ಕೈಂಕರ್ಯಗಳಿಗೆ ಮುಜಾವರ್ ಅವರನ್ನು ನೇಮಕ ಮಾಡಿ ಸರ್ಕಾರ 2018ರ ಮಾ.19ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀ ಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿದ್ದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಏಕ ಸದಸ್ಯ ನ್ಯಾಯಪೀಠ ಸರ್ಕಾರದ ಆದೇಶವನ್ನು ರದ್ದುಪಡಿಸಿತ್ತು.