ಸಾರಿಗೆ, ಪತ್ರಿಕೋದ್ಯಮ ಮತ್ತು ರಾಜಕೀಯ ರಂಗದಲ್ಲಿ ತನ್ನದೇ ಆದ ಸಾಧನೆಯ ಮೂಲಕ ಗುರುತಿಸಿಕೊಂಡಿರುವ ವಿಆರ್‌ಎಲ್ ಸಮೂಹ ಸಂಸ್ಥೆಯ ಸ್ಥಾಪಕ ವಿಜಯ ಸಂಕೇಶ್ವರ ಅವರ ಜೀವನ ಆಧರಿಸಿದ ಸಿನಿಮಾ “ವಿಜಯಾನಂದ’ ಚಿತ್ರಕ್ಕೆ ಭಾನುವಾರ ವಿಜಯ ಸಂಕೇಶ್ವರ ಅವರ ಹುಟ್ಟೂರಾದ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ.
“ವಿಆರ್‌ಎಲ್ ಫಿಲ್ಮ್ ಪ್ರೊಡಕ್ಷನ್ಸ್’ ಬ್ಯಾನರ್‌ನಲ್ಲಿ ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. “ಕನ್ನಡ ಚಿತ್ರರಂಗದ ಭೀಷ್ಮ’ ಖ್ಯಾತಿಯ ನಿರ್ದೇಶಕ ಜಿ.ವಿ.ಅಯ್ಯರ್ ಕುಟುಂಬದ ಕುಡಿ ರಿಶಿಕಾ ಶರ್ಮಾ “ವಿಜಯಾನಂದ’ ಸಿನಿಮಾಕ್ಕೆ ನಿರ್ದೇಶನಮಾಡುತ್ತಿದ್ದಾರೆ. ವಿಜಯ ಸಂಕೇಶ್ವರ ಅವರ ಬಾಲ್ಯ, ಶಿಕ್ಷಣ, 1976ರಲ್ಲಿ ಒಂದು ಟ್ರಕ್ ನಿಂದ ಶುರುವಾದ ಅವರ ಉದ್ಯಮ ಪ್ರಯಾಣ, ಉದ್ಯಮಿಯಾಗಿ ನಡೆದು ಬಂದ ಹಾದಿ ಹೀಗೆ 1950 ರಿಂದ 2017ರ ವರೆಗೆ ವಿಜಯ ಸಂಕೇಶ್ವರ ಅವರ ಜೀವನದ ಮಹತ್ವದ ಘಟ್ಟಗಳನ್ನು ಚಿತ್ರದಲ್ಲಿ ಮೂರು ವಿಭಿನ್ನ ಶೇಡ್‌ನಲ್ಲಿ ತೆರೆಮೇಲೆ ತರಲಾಗುತ್ತಿದೆ.
ಇನ್ನು “ವಿಜಯಾನಂದ’ ಚಿತ್ರದಲ್ಲಿ ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ಯುವನಟ ನಿಹಾಲ್ ಅಭಿನಯಿಸುತ್ತಿದ್ದಾರೆ. ವಿಜಯ ಸಂಕೇಶ್ವರ ಅವರ ತಂದೆ ಬಿ.ಜಿ ಸಂಕೇಶ್ವರ ಪಾತ್ರದಲ್ಲಿ ಹಿರಿಯ ನಟ ಅನಂತ್ ನಾಗ್ ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ನಾಲ್ಕೈದು ತಿಂಗಳಿನಿಂದ ಪ್ರೀ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿದ್ದ ಚಿತ್ರತಂಡ, ಇದೀಗ ಅಧಿಕೃತವಾಗಿ ಸೆಟ್ಟೇರಿದೆ.
ಇದನ್ನೂ ಓದಿ:ತನಿಖಾಧಿಕಾರಿಯಾದ ‘ಅದಿತಿ ಪ್ರಭುದೇವ’
“ವಿಜಯಾನಂದ’ ಚಿತ್ರದ ಮೊದಲ ದೃಶ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಕ್ಲಾಪ್ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಮುಹೂರ್ತದ ದೃಶ್ಯದಲ್ಲಿ ನಿಹಾಲ್ ಮತ್ತು ಅನಂತ್ ನಾಗ್ ಅಭಿನಯಿಸಿದರು. ನಟ ಕ್ರೇಜಿಸ್ಟಾರ್ ರವಿಚಂದ್ರನ್, ಉದ್ಯಮಿ ವಿಜಯ ಸಂಕೇಶ್ವರ, ನಿರ್ಮಾಪಕ ಆನಂದ್ ಸಂಕೇಶ್ವರ ಸೇರಿ ಚಿತ್ರರಂಗ ಮತ್ತು ಉದ್ಯಮ, ರಾಜಕೀಯ ರಂಗದ ಅನೇಕ ಗಣ್ಯರು ಮುಹೂರ್ತಸಮಾರಂಭದಲ್ಲಿ ಹಾಜರಿದ್ದು, ಚಿತ್ರಕ್ಕೆ ಶುಭ ಕೋರಿದರು.
“ವಿಜಯಾನಂದ’ ಚಿತ್ರದಲ್ಲಿ ನಟ ರವಿಚಂದ್ರನ್ ಕೂಡ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದು, ವಿಜಯ ಸಂಕೇಶ್ವರ ಅವರ ಸ್ನೇಹಿತರಾಗಿ ಕಾಣಿಸಿಕೊಳ್ಳಲಿದ್ದಾರೆ.