Advertisement

ಸ್ನೇಹ- ಭ್ರಾತೃತ್ವದ ಸಂಕೇತ ಮೊಹರಂ ಹಬ್ಬ

05:25 PM Aug 08, 2022 | Team Udayavani |

ಗಜೇಂದ್ರಗಡ: ಜಾತಿಯ ಹಂಗಿಲ್ಲದೇ ಮನುಕುಲ ಒಂದೇ ಎಂಬ ಸಂದೇಶ ಸಾರಿ, ಸರ್ವಧರ್ಮಗಳ ಭಾವೈಕ್ಯತೆಯ ಕೊಂಡಿಯಾಗಿರುವ ಮೊಹರಂ ಹಬ್ಬ ಆಚರಣೆ ಆಧುನಿಕ ಯುಗದಲ್ಲೂ ಸ್ನೇಹ, ಭ್ರಾತೃತ್ವದ ಸಂಕೇತವಾಗಿ ನಡೆದುಕೊಂಡು ಬಂದಿದೆ.

Advertisement

ಹುತಾತ್ಮರನ್ನು ನೆನೆಯುವ ಉದ್ದೇಶದಿಂದ ವಿಶ್ವಾದಾದ್ಯಂತ ಮೊಹರಂ ಹಬ್ಬವನ್ನು ಜಾತಿ ಭೇದವಿಲ್ಲದೇ ಶೋಕದ ಮೂಲಕ ಆಚರಿಸಲಾಗುತ್ತದೆ.

ಮೊಹರಂ ಸರ್ವ ಧರ್ಮೀಯರು ಆಚರಿಸುವ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ. ಇದಕ್ಕೆ ಅಲಾಯಿ ಹಬ್ಬ ಅಂತಲೂ ಹೆಸರು. ಹಳ್ಳಿಗಳಲ್ಲಿ ಈ ಹಬ್ಬವನ್ನು ಉತ್ಸಾಹದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಚಿಣ್ಣರನ್ನು ನೋಡುವುದೇ ಒಂದು ಮಜ. ಐದು ದಿನಗಳ ವರೆಗೆ ಕೂರಿಸಲಾಗುವ ಅಲಾಯಿ (ಪಂಜಾ) ದೇವರಿಗೆ ಕುಣಿ ತೆಗೆದು ಅಗ್ನಿಕುಂಡ ಪ್ರವೇಶ ಮಾಡುತ್ತಾರೆ. ಇನ್ನೊಂದೆಡೆ ಅಲಾಯಿ ದೇವರ ಎದುರಿಗೆ ವೃತ್ತಾಕಾರದ ಇಟ್ಟಿಗೆಗಳನ್ನಿಟ್ಟು ಮೊಹರಂ ಕೊನೆಯ ದಿನ ಹಬ್ಬ ಆಚರಿಸಲಾಗುತ್ತದೆ.

ಹಬ್ಬದ ಕೊನೆಯ ದಿನ ಇಮಾಮ್‌ ಕುಟುಂಬದವರನ್ನು ಸ್ಮರಿಸುವುದಕ್ಕಾಗಿ ಊರು-ಕೇರಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಇಮಾಮ್‌ ಅವರು ತೋರಿದ ಮಾನವೀಯತೆಗೆ ಗೌರವ ಕೊಡುವುದೇ ಮೊಹರಂ ಹಬ್ಬದ ವಿಶೇಷತೆ. ಅವರು ಇಸ್ಲಾಂ ಧರ್ಮದ ಕಟ್ಟುಪಾಡುಗಳಿಗಾಗಿ ಜೀವನ ಮುಡುಪಾಗಿಟ್ಟಿದ್ದರು. ದೇವರಿಗೆ ಹರಕೆ ತೀರಿಸಲೆಂದು ಫಕೀರರಾಗುತ್ತಾರೆ. ಅಲ್ಲದೇ, ಕೈಯಲ್ಲಿ ಕೆಂಪುಲಾಡಿ ಕಟ್ಟಿಕೊಳ್ಳುತ್ತಾರೆ. ಇದನ್ನು ಕರುಳಿಗೆ ಹೋಲಿಸುವ ಕಥೆಗಳಿವೆ ಮತ್ತು ಮೈಗೆ ಬಣ್ಣದ ಲಾಡಿಗಳನ್ನು ಹಾಕಿಕೊಳ್ಳುತ್ತಾರೆ. ಹರಕೆ ತೀರಿಸಲೆಂದು ಹುಲಿಯಾಗುತ್ತಾರೆ.

ಕುಡಿಕೆ- ಮಡಿಕೆ

Advertisement

ಮೊಹರಂ ಹಬ್ಬದ ಶರಬತ್ತಿಗೆ ಹೆಚ್ಚಿನ ಮಹತ್ವವಿದೆ. ಕುಡಿಕೆ-ಮಡಿಕೆಗಳಿಗೆ ಹೆಚ್ಚಿನ ಬೇಡಿಕೆ. ಹಬ್ಬದಲ್ಲಿ ಮಡಿಕೆಯನ್ನು ಶರಬತ್‌ ಸೇವಿಸಲು ಮತ್ತು ಮಡಿಕೆಯಾಟವಾಡಲು ಬಳಸುತ್ತಾರೆ. ಹೆಜ್ಜೆ ಕುಣಿತದಲ್ಲಿ ಮಡಿಕೆಗಳನ್ನು ಬಳಸುತ್ತಾರೆ. ಈ ಹೆಜ್ಜೆ ಕುಣಿತ ನೋಡುವುದೇ ಒಂದು ವೈಭವ.

ಮೊಹರಂ ಹುಲಿ

ಕೆಲ ಊರುಗಳಲ್ಲಿ ಬೇಡರ ಕಣ್ಣಪ್ಪ ವೇಷ ಹಾಕಲಾಗುತ್ತದೆ. ಯುದ್ಧದ ಸಂದರ್ಭದಲ್ಲಿ ಹುಸೇನರ ಮಗ ಸೈನಿಕರಿಂದ ತಪ್ಪಿಸಿಕೊಂಡು ಕಾಡಿನಲ್ಲಿ ಓಡಿ ಹೊಗುತ್ತಾನೆ. ಬೇಡರ ಕಣ್ಣಪ್ಪ ಮಗುವನ್ನು ರಕ್ಷಿಸಿ ನೀರು ಕುಡಿಸುತ್ತಾನೆ. ಹಿಂಬಾಲಿಸುತ್ತಾ ಬಂದ ಸೈನಿಕರು ಮಗುವನ್ನು ಬೇಡುತ್ತಾರೆ. ನಿರಾಕರಿಸಿದ ಬೇಡನೂ ಅವರೊಡನೆ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಯುದ್ಧ ಮಾಡಿ ರಕ್ಷಿಸುತ್ತಾನಂತೆ. ಅದೇ ರೀತಿ, ಬೇಡರ ವೇಷಧಾರಿ ಎದುರಿಗಿನ ಹುಲಿಯನ್ನು ಕತ್ತಿಯಿಂದ ಹೆದರಿಸುವ ಕುಣಿತ ಜನಜನಿತವಾಗಿದೆ. ಹೀಗಾಗಿ, ಹುಲಿಯ ವೇಷ ಹಾಕಿ ಹರಕೆ ತೀರಿಸುತ್ತಾರೆ.

ಭಾವೈಕ್ಯದ ಸಂಕೇತ

ಮೊಹರಂ ಧರ್ಮ, ಜಾತಿಯ ಹಂಗಿಲ್ಲದ ಹಬ್ಬವಾಗಿದೆ. ಇದು ಎಲ್ಲರೂ ಭಾವೈಕ್ಯತೆ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next