Advertisement
ಹಿಜರೀ ಶಕ ಅರ್ವತ್ತೊಂದರ ಮೊಹರಂ ತಿಂಗಳ ಹತ್ತರಂದು ಇರಾಕ್ ದೇಶದ ಯುಪ್ರಟಿಸ್ ನದಿ ತೀರದ ಕರ್ಬಲಾ ಮೈದಾನದಲ್ಲಿ ಯಝೀದನ ಅಸಂಖ್ಯಾಕ ಸೈನಿಕರನ್ನು, ಹಝರತ್ ಇಮಾಂ ಹುಸೇನರು, ಕೇವಲ ತನ್ನ ಎಪ್ಪತ್ತೆರಡು ಮಂದಿ ಅನುಯಾಯಿಗಳಿಂದ ಎದುರಿಸಿದರು. ಇದು ಹಝರತ್ ಇಮಾಂ ಹುಸೇನರು, ಅನ್ಯಾಯದ ವಿರುದ್ಧ ನಡೆಸಿದ ದೊಡ್ಡ ಹೋರಾಟವಾಗಿತ್ತು. ಈ ಕದನದಲ್ಲಿ ಸೋಲು ತನ್ನ ಪಾಲಿಗೆ ಖಚಿತವೆಂದು ಭಾವಿಸಿದ್ದರೂ ಅದು ಸತ್ಯ, ನ್ಯಾಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ನಡೆಸಿದ ಅಪೂರ್ವ ಕದನವಾಗಿತ್ತು. ಹಝರತ್ ಇಮಾಂ ಹುಸೇನರು ಕರ್ಬಲಾ ರಣಾಂಗಣದಲ್ಲಿ ವೀರಾ ವೇಶದಿಂದ ಹೋರಾಡಿ, ಮೊಹರಂ ಹತ್ತರಂದು ಹುತಾತ್ಮ ರಾದರು. ಮೊಹರಂ ಹತ್ತು ನಿರಂಕುಶ ಪ್ರಭುತ್ವಕ್ಕೆ ಕೊಡಲಿ ಏಟನ್ನಿತ್ತ ಚಾರಿತ್ರಿಕ ದಿನವೂ, ಪ್ರಜಾಸತ್ತೆಯ ಅಭೂತಪೂರ್ವ ವಿಜಯದ ದಿನವೂ ಆಗಿದೆ. ಜತೆಗೆ ಸರ್ವಾಧಿಕಾರಿ ಆಡಳಿತದ ವಿರುದ್ಧ, ಸ್ವಾತಂತ್ರ್ಯಕ್ಕಾಗಿ ನಡೆದ ಹೋರಾಟದ ಅದ್ಭುತ ಕ್ಷಣಗಳನ್ನು ನಮ್ಮ ಮುಂದೆ ಅನಾವರಣಗೊಳಿಸುತ್ತದೆ. ಒಟ್ಟಿನಲ್ಲಿ ಮೊಹರಂನ ಇತಿಹಾಸವು ಸ್ವಾತಂತ್ರ್ಯ ಸಮಾನತೆಯ ಪ್ರೇಮಿಗಳಿಗೆ ಸ್ಫೂರ್ತಿ ದಾಯಕವಾಗಿದೆ.
ಮೊಹರಂ ಮುಖ್ಯವಾಗಿ ಮನು ಕುಲಕ್ಕೆ ಬೋಧಿಸುವ ಸ್ವಾಭಿಮಾನ, ಪ್ರಾಮಾಣಿಕತೆ, ಸತ್ಯ, ಧೈರ್ಯ ಮತ್ತು ನ್ಯಾಯವನ್ನು ಬೆಂಬಲಿಸಿ, ನಾವಿಂದು ಬದುಕಿನಲ್ಲಿ ಮುಂದೆ ಸಾಗಬೇಕಾಗಿದೆ. ಆಗ ಮಾತ್ರ ನಮ್ಮ ಸಮಾಜ ಹಾಗೂ ನಾಡು ಶಾಂತಿ – ಸಮೃದ್ಧಿಯ ಬೀಡಾಗಿ, ಪ್ರೀತಿ-ವಿಶ್ವಾಸಗಳ ಆಗರವಾಗಿ ಮೆರೆಯಬಲ್ಲುದು. ಸತ್ಯ, ನ್ಯಾಯ, ಸ್ವಾಭಿಮಾನ ಮತ್ತು ಇಸ್ಲಾಮಿನ ಉನ್ನತ ಮೌಲ್ಯಗಳ ಸ್ಥಾಪನೆ ಗಾಗಿ ಹಝರತ್ ಇಮಾಂ ಹುಸೇನರು, ತಮ್ಮ ವೀರಾವೇಶದ ಹೋರಾಟದ ಮೂಲಕ ಅಮರ ಜ್ಯೋತಿಯೊಂದನ್ನು ಹೊತ್ತಿಸಿ ಹೋದರು. ಅವರು ಹುತಾತ್ಮರಾಗಿ ಸಾವಿರದ ನಾಲ್ಕುನೂರು ವರ್ಷ ಗಳು ಸಂದರೂ, ಆ ಜ್ಯೋತಿಯು ಇನ್ನೂ ನಂದದೇ ಅಮರವಾಗಿಯೇ ಉಳಿದಿದೆ. ಅವರ ಆದರ್ಶ ಜೀವನ ಮತ್ತು ಸ್ವಾಭಿಮಾನದ ಪ್ರತಿಷ್ಠೆಯು ಇಂದು ಮಾನವನ ಸಾಮಾಜಿಕ ಉನ್ನತಿಯ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನವನ್ನು ನೀಡಬಲ್ಲುದು. ಹಝರತ್ ಇಮಾಂ ಹುಸೇನರು ತಮ್ಮ ಬದುಕಿ ನುದ್ದಕ್ಕೂ ತೋರಿದ ಅಪೂರ್ವ ತ್ಯಾಗ ಹಾಗೂ ಸ್ಫೂರ್ತಿಯು ಮಾನವನ ಬದುಕಿಗೆ ಇಂದು ಅಗತ್ಯ ವಾಗಿದೆ. ಸತ್ಯ, ನ್ಯಾಯ, ಸ್ವಾಭಿಮಾನಕ್ಕಾಗಿ ನಡೆಸುವ ನಿರಂತರ ಪರಿಶ್ರಮವು ಮಾನವ ಜನಾಂಗವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ಸಹಕಾರಿಯಾಗಬಲ್ಲದು. ಸತ್ಯ ಹಾಗೂ ನ್ಯಾಯವನ್ನು ಬೆಂಬಲಿಸಿ, ಅಸತ್ಯ ಹಾಗೂ ಅನ್ಯಾಯವನ್ನು ವಿರೋಧಿಸಿ ಪ್ರಾಮಾಣಿಕವಾಗಿ ಜೀವಿ ಸುವುದೇ ಜೀವನದ ಗುರಿ. ಸಾಮಾಜಿಕ ಹಿತಾಸಕ್ತಿಗಾಗಿ ಮಾಡುವ ತ್ಯಾಗವೂ ಜೀವನದಲ್ಲಿ ಸುಭಿಕ್ಷೆ, ನೆಮ್ಮದಿ ಹಾಗೂ ಆತ್ಮಸಂತೃಪ್ತಿಯನ್ನೂ ನೀಡಬಲ್ಲುದು.
Related Articles
Advertisement
ಸತ್ಯ, ನ್ಯಾಯ ಮತ್ತು ಧರ್ಮದ ಉದಾತ್ತ ಆದರ್ಶಗಳನ್ನು ಬದುಕಿನಲ್ಲಿ ರೂಢಿಸಿ ಕೊಂಡಾಗ ಬದುಕು ಸಾರ್ಥಕ ವಾಗುತ್ತದೆ, ಅರ್ಥಪೂರ್ಣವಾಗುತ್ತದೆ.
-ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು