ಇಸ್ತಾಂಬುಲ್: ಹೈದರಾಬಾದ್‌ನ ಎಂಟನೇ ನಿಜಾಮ್ ಮುಕರ್ರಮ್ ಜಾಹ್ ಜನವರಿ 14 ರಂದು ಟರ್ಕಿಯ ಇಸ್ತಾಂಬುಲ್ ನಲ್ಲಿ ವಿಧಿವಶರಾಗಿದ್ದಾರೆ ಎಂದು ಅವರ ಕಚೇರಿ ಭಾನುವಾರ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ. ಅವರಿಗೆ 89 ವರ್ಷ ವಯಸಾಗಿತ್ತು. 1933ರಲ್ಲಿ ಜನಿಸಿದ ಅವರು ಟರ್ಕಿಗೆ ತೆರಳಿ ಅಲ್ಲಿ ನೆಲೆಸಿದ್ದರು.
“ಹೈದರಾಬಾದ್‌ನ ಎಂಟನೇ ನಿಜಾಮ್ ನವಾಬ್ ಮೀರ್ ಬರ್ಕೆಟ್ ಅಲಿ ಖಾನ್ ವಲಾಶನ್ ಮುಕರ್ರಮ್ ಜಾಹ್ ಬಹದ್ದೂರ್ ಅವರು ನಿನ್ನೆ ತಡರಾತ್ರಿ ಭಾರತೀಯ ಕಲಾಮಾನ 10:30 ಕ್ಕೆ ಶಾಂತಿಯುತವಾಗಿ ಇಹಲೋಕ ತ್ಯಜಿಸಿದರು ಎಂದು ತಿಳಿಸಲು ನಾವು ತೀವ್ರ ದುಃಖಿತರಾಗಿದ್ದೇವೆ” ಎಂದು ಹೇಳಿಕೆ ತಿಳಿಸಿದೆ.
ಸ್ವದೇಶದಲ್ಲಿ ಅಂತ್ಯಕ್ರಿಯೆ ಮಾಡಬೇಕೆಂಬ ಅವರ ಆಸೆಯಂತೆ, ಅವರ ಮಕ್ಕಳು ಜನವರಿ 17 ರಂದು ನಿಜಾಮರ ಪಾರ್ಥಿವ ಶರೀರವನ್ನು ಹೈದರಾಬಾದ್‌ಗೆ ತರಲು ನಿರ್ಧರಿಸಿದ್ದಾರೆ ಎಂದು ಅದು ಹೇಳಿದೆ.
ಪಾರ್ಥಿವ ಶರೀರವನ್ನು ಚೌಮಹಲ್ಲಾ ಅರಮನೆಗೆ ಕೊಂಡೊಯ್ದು ಅಗತ್ಯವಿರುವ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಅಸಫ್ ಜಾಹಿ ಕುಟುಂಬದ ಸಮಾಧಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಲಾಗಿದೆ.
1948 ರಲ್ಲಿ ಭಾರತೀಯ ಒಕ್ಕೂಟದೊಂದಿಗೆ ವಿಲೀನಗೊಳ್ಳುವ ಮೊದಲು ಹೈದರಾಬಾದ್‌ನ ರಾಜಪ್ರಭುತ್ವದ ಏಳನೇ ನಿಜಾಮ್ ಮೀರ್ ಒಸ್ಮಾನ್ ಅಲಿ ಖಾನ್ ಅವರ ಮೊದಲ ಮಗ ಮೀರ್ ಹಿಮಾಯತ್ ಅಲಿ ಖಾನ್ ಅಲಿಯಾಸ್ ಅಜಮ್ ಜಾಹ್ ಬಹದ್ದೂರ್ ಪುತ್ರನಾಗಿ ಮುಕರ್ರಮ್ ಜಾ ಜನಿಸಿದ್ದರು.