ಸೊರಬ: ಮೂಗೂರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಫೆ. 28ರಂದು ಬೆಳಗ್ಗೆ 10ಕ್ಕೆ ಆನವಟ್ಟಿಯ ಸರ್ಕಾರಿ ಪಿಯು ಕಾಲೇಜು ಆವರಣದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಗುರುಪ್ರಸನ್ನ ಗೌಡ ಬಸೂರು ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಶುಕ್ರವಾರ ಕರೆದಿದ್ದ ಪಕ್ಷದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಮೂಗೂರು ಏತ ನೀರಾವರಿ ಯೋಜನೆಯ ಉದ್ಘಾಟನೆಯನ್ನು ರೈತರು ಹಬ್ಬದಂತೆ ಸ್ವಾಗತಿಸಲು ಉತ್ಸುಕರಾಗಿದ್ದಾರೆ.
ಮೂಗೂರು ಏತ ನೀರಾವರಿ ಗುತ್ತಿಗೆದಾರರಿಗೆ ನೀಡಿದ ಅವಧಿಗೂ ಮುನ್ನವೇ ಪೂರ್ಣಗೊಂಡಿರುವುದು ಸಂತಸದ ವಿಷಯ. ಮೂಡಿ ಮತ್ತು ಕಚವಿ ಏತ ನೀರಾವರಿಗಳು ಪ್ರಗತಿಯಲ್ಲಿದ್ದು, ತಾಲೂಕಿನ ವಿವಿಧೆಡೆ ಇನ್ನೂ ಕೆಲವು ಏತ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ಬೃಹತ್ ನೀರಾವರಿ ಸಚಿವ ರಮೇಶ ಜಾರಕಿಹೊಳಿ, ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಕುಮಾರ್ ಬಂಗಾರಪ್ಪ, ವಿ.ಪ. ಸದಸ್ಯರಾದ ಭಾರತಿ ಶೆಟ್ಟಿ, ಆಯನೂರು ಮಂಜುನಾಥ್, ಎಸ್. ರುದ್ರೇಗೌಡ, ತಾಪಂ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ ಸೇರಿದಂತೆ ಪಕ್ಷದ ಜಿಲ್ಲಾ ಮತ್ತು ತಾಲೂಕು ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಳ್ಳಲಿದ್ದು, ತಾಲೂಕಿನ ಜನತೆ ಪಕ್ಷಾತೀತವಾಗಿ ಅಭಿವೃದ್ಧಿಪರವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
ಪಕ್ಷದ ಜಿಲ್ಲಾ ಉಪಾಧ್ಯಕ್ಷ ಶ್ರೀಪಾದ ಹೆಗಡೆ ನಿಸರಾಣಿ ಮಾತನಾಡಿ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನೇಕ ರೈತಪರ ಮತ್ತು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಹೈನುಗಾರಿಕೆಯಲ್ಲಿ ತೊಡಗಿದ ರೈತರಿಗೆ ಪ್ರತಿ ಲೀಟರ್ ಹಾಲಿಗೆ 5 ರೂ., ಪ್ರೋತ್ಸಾಹ ಧನ, ಸ್ತ್ರೀ ಶಕ್ತಿ ಸಂಘಗಳಿಗೆ ಉತ್ತೇಜನ. ಸಹಕಾರ ಸಂಘಗಳ ಮೂಲಕ ರೈತರಿಗೆ ಹೆಚ್ಚಿನ ಒತ್ತನ್ನು ನೀಡಿದ್ದಾರೆ ಎಂದರು.
ಸಭೆಯಲ್ಲಿ ಬಾಲಭವನ ರಾಜ್ಯ ನಿರ್ದೇಶಕಿ ಡಾ| ಕುಸುಮಾ ಪಾಟೀಲ್, ಆರ್ಯವೈಶ್ಯಅಭಿವೃದ್ಧಿ ನಿಗಮದ ಸದಸ್ಯ ಎ.ಎಲ್. ಅರವಿಂದ್, ಮುಖಂಡರಾದ ಗಜಾನನ ರಾವ್, ಗೀತಾ ಮಲ್ಲಿಕಾರ್ಜುನ, ಪಾಣಿ ರಾಜಪ್ಪ, ನಿರಂಜನ ಕುಪ್ಪಗಡ್ಡೆ, ಎಂ. ನಾಗಪ್ಪ ವಕೀಲ, ಅಶೋಕ್ ನಾಯ್ಕ, ಎಂ.ಕೆ. ಯೋಗೇಶ್, ವೀರೇಶ್ ಮೇಸ್ತ್ರಿ, ಉಮೇಶ್ ಉಡುಗಣಿ, ವೀಜೇಂದ್ರ ಪಾಟೀಲ, ಮಂಜಪ್ಪ, ದಿವಾಕರ ಭಾವೆ, ಶ್ರೀಧರ್ ಭಂಡಾರಿ, ಸಂಜೀವ ಆಚಾರಿ, ರಜನಿ ನಾಯ್ಕ, ಅಭಿಷೇಕ್, ಗುರುಸ್ವಾಮಿ, ರವಿ ಇತರರಿದ್ದರು.