Advertisement

ಷರತ್ತು ಹಾಕಿಯೇ ಬಿಜೆಪಿಯೊಂದಿಗೆ ಸರಕಾರ ರಚಿಸಿದ್ದೆವು..: ಮೆಹಬೂಬಾ ಮುಫ್ತಿ

06:03 PM Jul 31, 2023 | Team Udayavani |

ಶ್ರೀನಗರ: ಪಿಡಿಪಿ ಸಂಸ್ಥಾಪಕ ಮುಫ್ತಿ ಮೊಹಮ್ಮದ್ ಸಯೀದ್ ಅವರು 2015 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸರಕಾರ ರಚನೆಗೆ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಪೂರ್ವಭಾವಿ ಷರತ್ತು ಹಾಕಿದ್ದರು, ಸಂವಿಧಾನದ 370 ನೇ ವಿಧಿಯನ್ನು ಕೇಂದ್ರವು ತೆಗೆದುಹಾಕುವುದಿಲ್ಲ ಎಂದು ಭರವಸೆ ಪಡೆದಿದ್ದರು” ಎಂದು ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಸೋಮವಾರ ಹೇಳಿದ್ದಾರೆ.

Advertisement

ಪಿಡಿಪಿಯ 24 ನೇ ಸಂಸ್ಥಾಪನಾ ದಿನದಂದು ಸಭೆಯನ್ನುದ್ದೇಶಿಸಿ ಮಾತನಾಡಿದ ಮುಫ್ತಿ, ‘ನನ್ನ ತಂದೆ ಸಯೀದ್ ಅಧಿಕಾರದ ಹಸಿವಿನಿಂದ ಬಳಲುತ್ತಿರಲ್ಲ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಅದರ ಸಮಸ್ಯೆಗಳು ಮತ್ತು ತೊಂದರೆಗಳಿಂದ ಮುಕ್ತಗೊಳಿಸಲು ಬಯಸಿದ್ದರು’ ಎಂದು ಹೇಳಿದರು.

“2014 ರ ವಿಧಾನಸಭಾ ಚುನಾವಣೆಯಲ್ಲಿ ಮುಫ್ತಿ ಸಾಹಿಬ್ 28 ಸ್ಥಾನಗಳನ್ನು ಹೊಂದಿದ್ದಾಗ, ಅವರು ಮೋದಿಯವರನ್ನು ಭೇಟಿಯಾಗಿ ಸರಕಾರ ರಚನೆಗೆ ಷರತ್ತುಗಳ ಪಟ್ಟಿಯನ್ನು ನೀಡಿದರು. ಆರ್ಟಿಕಲ್ 370 ಅನ್ನು ಮುಟ್ಟುವುದಿಲ್ಲ ಎಂಬ ಭರವಸೆಯನ್ನು ಬಿಜೆಪಿ ಸರಕಾರದಿಂದ ತೆಗೆದುಕೊಂಡಿದ್ದರು. ಅವರು ಬಿಜೆಪಿಯವರ ಕೈಗಳನ್ನು ಕಟ್ಟಿದ್ದರು. ತಂದೆ ಅಧಿಕಾರದ ಹಿಂದೆ ಇರಲಿಲ್ಲ, ಇಲ್ಲದಿದ್ದರೆ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರವನ್ನು ರಚಿಸಲು ಮೂರು ತಿಂಗಳು ಸಮಯಾವಕಾಶ ತೆಗೆದುಕೊಳ್ಳುತ್ತಿರಲಿಲ್ಲ”ಎಂದು ಹೇಳಿದರು.

”ಬಿಜೆಪಿ ತನ್ನ ಬದ್ಧತೆಗಳಿಂದ ಹಿಂದೆ ಸರಿದಿದೆ ಮತ್ತು ಜಮ್ಮು ಮತ್ತು ಕಾಶ್ಮೀರದ ಜನರ ಮೇಲೆ ಒತ್ತಡ ಹೇರಲು ಪ್ರಯತ್ನಿಸುತ್ತಿದೆ.ನಾವು ಸೋಲಬೇಕೆಂದು ಬಿಜೆಪಿ ಬಯಸುತ್ತದೆ ನಾವೆಲ್ಲರೂ ಹಿಂದೂಗಳು, ಮುಸ್ಲಿಮರು, ಸಿಖ್ಖರು, ಗುಜ್ಜರ್‌ಗಳು, ಪಹಾರಿಗಳು ಒಗ್ಗಟ್ಟಾಗಿ ನಿಂತರೆ, ನಾವು ಬಿಜೆಪಿಯನ್ನು ಸೋಲಿಸುತ್ತೇವೆ”ಎಂದರು.

“2002 ರ ಅಸೆಂಬ್ಲಿ ಚುನಾವಣೆಯಲ್ಲಿ ಪಿಡಿಪಿ ಕೇವಲ 16 ಶಾಸಕರನ್ನು ಹೊಂದಿದ್ದರೂ , ಪಾಕಿಸ್ತಾನ ಮತ್ತು ಪ್ರತ್ಯೇಕತಾವಾದಿಗಳೊಂದಿಗೆ ಮಾತುಕತೆ ನಡೆಸಿದರೆ ಮಾತ್ರ ಸರಕಾರ ರಚಿಸುವುದಾಗಿ ಮುಫ್ತಿ ಸಾಹಿಬ್ 20 ಸ್ಥಾನಗಳನ್ನು ಹೊಂದಿದ್ದ ಕಾಂಗ್ರೆಸ್ ಗೆ ಹೇಳಿದ್ದರು. ತನ್ನ ತಂದೆ ಜನರ ಪರವಾಗಿ ನಿಲ್ಲುವ ಧೈರ್ಯವನ್ನು ಹೊಂದಿದ್ದರು” ಎಂದರು.

Advertisement

“ಕಾಶ್ಮೀರದಲ್ಲಿ ನೀವು ಏನು ಸಾಧಿಸಿದ್ದೀರಿ? ಜವಾಹರಲಾಲ್ ನೆಹರು ಅವರು ಲಾಲ್ ಚೌಕ್‌ಗೆ ಬಂದು ಸಾವಿರಾರು ಕಾಶ್ಮೀರಿಗಳೊಂದಿಗೆ ರಾಷ್ಟ್ರಧ್ವಜವನ್ನು ಹಾರಿಸಿದರು. ಇಂದು, ನೀವು ತ್ರಿವರ್ಣ ಧ್ವಜವನ್ನು ಹಾರಿಸುತ್ತೀರಿ ಮತ್ತು ಅಲ್ಲಿ ಕಾಶ್ಮೀರಿಗಳು ಇರುವುದಿಲ್ಲ, ಭದ್ರತಾ ಪಡೆಗಳು ಮಾತ್ರ ಇರುತ್ತಾರೆ ”ಎಂದರು.

ಬಿಜೆಪಿಯು ಇಡೀ ದೇಶವನ್ನು ಮಣಿಪುರವನ್ನಾಗಿ ಪರಿವರ್ತಿಸಲು ಪ್ರಯತ್ನಿಸುತ್ತಿದೆ, ಈ ಪ್ರಯತ್ನಗಳನ್ನು ಎದುರಿಸಲು ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಇರಬೇಕು. ಮಣಿಪುರ ಕೇವಲ ಟ್ರೇಲರ್, ಚಿತ್ರ ಇನ್ನೂ ಪ್ರಾರಂಭವಾಗಿಲ್ಲ” ಎಂದು ಮುಫ್ತಿ ಆರೋಪಿಸಿದರು.

ಜೂನ್ 19, 2018 ರಂದು ಪಿಡಿಪಿಯೊಂದಿಗೆ ಮೈತ್ರಿಯನ್ನು ಬಿಜೆಪಿ ಕೈಬಿಡುವವರೆಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವದಲ್ಲಿತ್ತು.

Advertisement

Udayavani is now on Telegram. Click here to join our channel and stay updated with the latest news.

Next