ಕಡಬ: ಮೂಲ ಸೌಕರ್ಯಗಳಿಗೆ ಸರಕಾರದಿಂದ ಅನುದಾನ ತರುವುದೇ ಬಲುದೊಡ್ಡ ಸಾಹಸದ ಕೆಲಸ. ಆದರೆ ಇಲ್ಲಿ ಇಚ್ಲಂಪಾಡಿ ಮುಡಿಪು ಕಿರು ಸೇತುವೆಯ ಕಾಮಗಾರಿಗೆ ಅನುದಾನ ಇದ್ದರೂ ಕಾಮಗಾರಿ ನಡೆಸದೇ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಕೌಕ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಚ್ಲಂಪಾಡಿ ಗ್ರಾಮದ ಇಚ್ಲಂಪಾಡಿ- ಹೊಸಮಠ ರಸ್ತೆಯ ಮುಡಿಪು ಎನ್ನುವಲ್ಲಿ ಮಾಣಿಯಡ್ಕ ಹೊಳೆಗೆ ಕಿರು ಸೇತುವೆ ನಿರ್ಮಿಸಲು ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ 26.60 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ವರ್ಷವೇ ಕಳೆದಿದೆ. ಈ ಅನುದಾನಕ್ಕೆ ಸ್ಥಳೀಯ ಗ್ರಾ.ಪಂ. ನಿಧಿಯಿಂದ 1.40 ಲಕ್ಷ ರೂ. ಸೇರಿಸಿ ಒಟ್ಟು 28 ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಬೇಕಾಗಿತ್ತು. ಆದರೆ ಸುಮಾರು 9 ತಿಂಗಳ ಹಿಂದೆ ಸೇತುವೆ ನಿರ್ಮಿಸಲು ಅಡಿಪಾಯ ಹಾಕುವುದಕ್ಕಾಗಿ 2 ಗುಂಡಿಗಳನ್ನು ತೆಗೆದಿರುವುದು ಬಿಟ್ಟರೆ ಬಳಿಕ ಯಾವುದೇ ಕಾಮಗಾರಿ ನಡೆದಿಲ್ಲ.
ಅನುದಾನ ದುರ್ಬಳಕೆ ಶಂಕೆ
ಕಾಮಗಾರಿಯನ್ನು ಸರಕಾರದ ಅಂಗ ಸಂಸ್ಥೆಯಾಗಿರುವ ಕರ್ನಾಟಕ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕ್ಕೆ (ಕೆಆರ್ ಐಡಿಎಲ್) ವಹಿಸಲಾಗಿದೆ. ಕಾಮಗಾರಿಗಾಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ಬಿಡುಗಡೆಗೊಂಡಿರುವ 26.60 ಲಕ್ಷ ರೂ. ಅನುದಾನದ ಪೈಕಿ ಪ್ರಥಮ ಕಂತು 11.20 ಲಕ್ಷ ರೂ.ಗಳನ್ನು ಕೆಆರ್‌ಐಡಿಎಲ್ ಖಾತೆಗೆ ವರ್ಗಾಯಿಸಿ ವರ್ಷವಾಗುತ್ತಿದೆ. ಈ ದುಡ್ಡಿನಲ್ಲಿ ಸೇತುವೆ ನಿರ್ಮಿಸಬೇಕಾಗಿರುವ ಸ್ಥಳದಲ್ಲಿ ಸುಮಾರು 9 ತಿಂಗಳ ಹಿಂದೆ ಕೇವಲ 2 ಅಡಿಪಾಯದ ಗುಂಡಿಗಳನ್ನು ತೆಗೆದಿರುವುದು ಬಿಟ್ಟರೆ ಬಳಿಕ ಯಾವುದೇ ಕಾಮಗಾರಿ ನಡೆದಿಲ್ಲ. ಆದುದರಿಂದ ಬಿಡುಗಡೆಯಾಗಿರುವ ಅನುದಾನ ದುರ್ಬಳಕೆಯಾಗಿದೆ ಎನ್ನುವುದು ಸಾರ್ವಜನಿಕರ ಸಂಶಯ.
ಎಸಿಬಿಗೆ ದೂರು
ರಾಜ್ಯದ ಮುಖ್ಯಮಂತ್ರಿಗಳು, ಲೋಕೋಪಯೋಗಿ ಸಚಿವರು, ದ.ಕ. ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಸಿಇಒಗೆ ದೂರು ನೀಡಲಾಗಿದೆ. ಇಲ್ಲಿ ಅನುದಾನ ನೀಡಿದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಪ್ರಾಧಿಕಾರದಿಂದ ನೀಡಲಾಗಿರುವ ಅನುದಾನ ಯಾವ ರೀತಿ ಬಳಕೆಯಾಗುತ್ತಿದೆ ಎಂದು ಮೇಲುಸ್ತುವಾರಿ ವಹಿಸಿ ಕೊಳ್ಳಬೇಕಾದ ಅಧಿಕಾರಿಗಳಿಗೆ ಈ ಕಾಮಗಾರಿಯ ಕುರಿತು ಯಾವುದೇ ಆಸಕ್ತಿ ಇದ್ದಂತಿಲ್ಲ.
ಸ್ಥಳೀಯ ಮುಖಂಡರು ಪದೇ ಪದೇ ಸಂಬಂಧಪಟ್ಟವರನ್ನು ವಿಚಾರಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಇದೀಗ ಆಕ್ರೋಶಗೊಂಡಿರುವ ಇಲ್ಲಿನ ಜನರು ಪ್ರತಿಭಟನೆಗೆ ಮುಂದಾಗಿದ್ದಾರೆ. ಅನುದಾನ ದುರ್ಬಳಕೆಯಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳಕ್ಕೂ ದೂರು ಸಲ್ಲಿಸಲಾಗಿದೆ. ಕೂಡಲೇ ಸೇತುವೆಯ ಕಾಮಗಾರಿ ಆರಂಭಿಸದೇ ಹೋದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸುವುದಿಲ್ಲ ಎಂದು ಸ್ಥಳೀಯರು ಪಟ್ಟು ಹಿಡಿದಿದ್ದಾರೆ.
ಅನುದಾನ ದುರ್ಬಳಕೆ ಆಗಿಲ್ಲ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ನಾನು ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಿರುವುದರಿಂದಾಗಿ ಹಿಂದಿನ ವಿಚಾರಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲ. ಮಣ್ಣು ಪರೀಕ್ಷೆಗಾಗಿ ಕಾಮಗಾರಿಯ ಸ್ಥಳದಿಂದ ಮಣ್ಣಿನ ಮಾದರಿ ಸಂಗ್ರಹಿಸಿ ಕಳುಹಿಸಲಾಗಿದೆ. ಅದರ ವರದಿ ಮತ್ತು ಸೇತುವೆ ನಿರ್ಮಾಣದ ವಿನ್ಯಾಸ ನಮ್ಮ ಕೈ ಸೇರಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ. ಅನುದಾನ ಯಾವುದೇ ರೀತಿಯಲ್ಲಿ ದುರ್ಬಳಕೆಯಾಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಮಗೆ ಬಂದಿರುವ ಅನುದಾನ ನಮ್ಮ ಖಾತೆಯಲ್ಲಿ ಭದ್ರವಾಗಿದೆ. ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ.
– ಶಾಂತಕುಮಾರ್ ಎಇ,
ಕೆಆರ್‌ಐಡಿಎಲ್ ಮಂಗಳೂರು
ಪತ್ರ ಬರೆಯಲಾಗಿದೆ
ಅನುದಾನವನ್ನು ಸೂಕ್ತವಾಗಿ ಬಳಸಿ ಕಾಮಗಾರಿ ಮುಗಿಸಬೇಕಾಗಿದ್ದು ಅಧಿಕಾರಿಗಳ ಜವಾಬ್ದಾರಿ. ಸೇತುವೆ ಕೆಲಸ ಆರಂಭಿಕ ಹಂತದಲ್ಲೇ ಸ್ಥಗಿತವಾಗಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಶೀಘ್ರ ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟವರಿಗೆ ಪತ್ರ ಬರೆಯಲಾಗಿದೆ.
– ಶೇಷಕೃಷ್ಣ, ಎಇಇ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ನಾಗರಾಜ್ ಎನ್.ಕೆ.