ಮೂಡಿಗೆರೆ: ಬಿಜೆಪಿಯಲ್ಲಿ ಉಂಟಾಗಿರುವ ಬಿರುಕು ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿಜೆಪಿ. ಮಂಡಲ ಅಧ್ಯಕ್ಷರ ಆಯ್ಕೆಯ ಸಂಬಂಧ ಪಕ್ಷದೊಳಗೆ ಉದ್ಭವಿಸಿರುವ ಗೊಂದಲ ಮುಂದುವರಿದಿದೆ. ಇದೀಗ ನಾಳೆ(ಶುಕ್ರವಾರ) ನಡೆಯಲಿರುವ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮೇಲೂ ಇದರ ಕರಿನೆರಳು ಬಿದ್ದಿದೆ.
ನಾಳೆ ಮೂಡಿಗೆರೆ ಬಿಜೆಪಿ ಕಚೇರಿಯಲ್ಲಿ ಮಂಡಲ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದೆ. ಈ ಸಮಾರಂಭಕ್ಕೆ ಬಿಜೆಪಿ ಲೋಕಸಭಾ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರು ಸೇರಿದಂತೆ ಅನೇಕ ಮುಖಂಡರು ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮಕ್ಕೆ ಭರ್ಜರಿ ತಯಾರಿಯನ್ನು ನಡೆಸಲಾಗಿದೆ. ಮಂಡಲ ಅಧ್ಯಕ್ಷರಾಗಿ ಟಿ.ಎಂ. ಗಜೇಂದ್ರ ಮತ್ತು ಅವರ ತಂಡದ ಸದಸ್ಯರು ನಾಳೆ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ.
ಇತ್ತ ಮಂಡಲ ಅಧ್ಯಕ್ಷರ ಆಯ್ಕೆಯ ವಿಚಾರವಾಗಿ ಮೂಡಿಗೆರೆ ತಾ.ಪಂ. ಮಾಜಿ ಅಧ್ಯಕ್ಷ ಕೆ.ಸಿ.ರತನ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪಕ್ಷದಿಂದ ಉಚ್ಚಾಟಿತರಾಗಿರುವ ಬಣಕಲ್ ಹೋಬಳಿ ಬಿಜೆಪಿ ಅಧ್ಯಕ್ಷ ಪಿ.ಜಿ. ಅನುಕುಮಾರ್ ಪಟ್ಟದೂರು ಮತ್ತು ಗೋಣಿಬೀಡು ಹೋಬಳಿ ಅಧ್ಯಕ್ಷ ಭರತ್ ಕನ್ನೇಹಳ್ಳಿ ಇವರುಗಳ ನೇತೃತ್ವದಲ್ಲಿ ಮೂಡಿಗೆರೆ ಪ್ರೀತಂ ಹಾಲ್ ನಲ್ಲಿ ಬಿಜೆಪಿ ಚಿಹ್ನೆಯಡಿಯೇ “ಬಿಜೆಪಿ ಸ್ವಾಭಿಮಾನಿ ಪರಿವಾರ ಕಾರ್ಯಕರ್ತರ ಸಮಾವೇಶ” ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾದ ಪ್ರಚಾರವನ್ನು ನೀಡಲಾಗುತ್ತಿದೆ. ಪಿ.ಜಿ. ಅನುಕುಮಾರ್ ಅವರು ಕೆ.ಸಿ. ರತನ್ ಅವರನ್ನು ಕುರಿತು ಮಾತನಾಡಿರುವ ಆಡಿಯೋ ಒಂದು ಸಹ ವ್ಯಾಪಕವಾಗಿ ಹರಿದಾಡುತ್ತಿದೆ. ನಾಳಿನ ಸ್ವಾಭಿಮಾನಿ ಕಾರ್ಯಕರ್ತರ ಸಮಾವೇಶದ ಹೆಸರಿನಲ್ಲಿ ನಡೆಸುತ್ತಿರುವ ಕಾರ್ಯಕ್ರಮಕ್ಕೂ ಪಕ್ಷದ ಒಂದು ಗುಂಪು ಸಾಕಷ್ಟು ತಯಾರಿ ನಡೆಸಿದ್ದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.
ಪಕ್ಷದೊಳಗೆ ನಡೆಯುತ್ತಿರುವ ಈ ಘಟನಾವಳಿಗಳು ಪಕ್ಷದ ಕಾರ್ಯಕರ್ತರಲ್ಲಿ ಬಹಳಷ್ಟು ಗೊಂದಲ ಮೂಡಿಸಿದೆ. ಯಾವ ಕಾರ್ಯಕ್ರಮಕ್ಕೆ ಹೋಗುವುದು ? ಎಂಬ ಇಕ್ಕಟ್ಟಿನಲ್ಲಿ ಕಾರ್ಯಕರ್ತರು ಸಿಲುಕಿರುವುದು ಅವರ ಭಾವನೆಗಳಿಂದ ತಿಳಿದುಬರುತ್ತಿದೆ. ಅತ್ತ ಹೋದರೆ ಇವರಿಗೆ ಸಿಟ್ಟು, ಇತ್ತ ಹೋದರೆ ಅವರಿಗೆ ಸಿಟ್ಟು ಎಂಬ ರೀತಿಯಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಏರ್ಪಟ್ಟಿದೆ. ಒಟ್ಟಾರೆ ನಾಳೆ ಮೂಡಿಗೆರೆ ಬಿಜೆಪಿಯೊಳಗೆ ಎರಡು ಬಣಗಳು ಪರಸ್ಪರರು ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು ಮತ್ತೊಂದು ಹೈಡ್ರಾಮಾಕ್ಕೆ ವೇದಿಕೆ ಸಜ್ಜಾಗಿದೆ.