Advertisement

ಪೂರ್ಣ ಮಾಹಿತಿಯೊಂದಿಗೆ ಸಭೆಗೆ ಬನ್ನಿ

01:19 PM Jun 30, 2019 | Team Udayavani |

ಮೂಡಿಗೆರೆ: ಅಧಿಕಾರಿಗಳು ತಮ್ಮ ಇಲಾಖೆಗಳ ಪೂರ್ಣ ಮಾಹಿತಿಯೊಂದಿಗೆ ತ್ತೈಮಾಸಿಕ ಸಭೆಗೆ ಬರಬೇಕು. ಸಭೆಗೆ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಂ.ಪಿ.ಕುಮಾರಸ್ವಾಮಿ ತಾಪಂ ಇಒಗೆ ಸೂಚಿಸಿದರು.

Advertisement

ತಾಪಂ ಸಭಾಂಗಣದಲ್ಲಿ ಶನಿವಾರ ನಡೆದ ತ್ತೈಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಅಧಿಕಾರಿಗಳಿಂದ ತಪ್ಪುಗಳು ನಡೆಯಬಾರದು ಎಂದು ಎಚ್ಚರಿಸಿದರು.

ತಾಲೂಕಿನಾದ್ಯಂತ ಕಾಡಾನೆ, ಕಾಡೆಮ್ಮೆ, ಚಿರತೆಸಹಿತ ಕಾಡುಪ್ರಾಣಿಗಳು ಊರುಗಳಿಗೆ ಲಗ್ಗೆಯಿಟ್ಟಿರು ವುದರಿಂದ ಜನ ಭಯಭೀತರಾಗಿದ್ದಾರೆ. ಅಲ್ಲದೇ, ಜಾನುವಾರುಗಳ ಮೇಲೆ ಚಿರತೆ ಮತ್ತು ಕಾಡೆಮ್ಮೆ ದಾಳಿ ಮಾಡುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ಹರಿಸಬೇಕು ಎಂದರು.

ಬೈರಾಪುರದಲ್ಲಿ ಚಿರತೆಯೊಂದು ಜಾನುವಾರು ಒಂದರ ಮೇಲೆ ದಾಳಿ ನಡೆಸಿದ್ದು, ಅದಕ್ಕೆ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಯನ್ನು ತಕ್ಷಣವೇ ಕಳುಹಿಸಿಕೊಡಲಾಯಿತು.

ಚಿರತೆ ಮರಿಯೊಂದು ಬಿಳಗುಳ ಗ್ರಾಮದ ಕೃಷಿ ಇಲಾಖೆ ಹಿಂಭಾಗದಲ್ಲಿ ಬೀಡುಬಿಟ್ಟಿದೆ. ಅಲ್ಲಿ ಬೋನ್‌ ಇಟ್ಟಿದ್ದೇವೆ. ಸುತ್ತಲೂ ಪಟಾಕಿ ಸಿಡಿಸಿ ಬೋನಿನಲ್ಲಿ ಸೆರೆ ಹಿಡಿಯಲು ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

Advertisement

ಕಾಡಾನೆಗಳು ಕಾಡಿನಿಂದ ನಾಡಿಗೆ ಲಗ್ಗೆ ಇಡದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲು 1 ಕಿ.ಮೀ.ಗೆ 1.30ಕೋಟಿ ರೂ.ವೆಚ್ಚ ತಗುಲುತ್ತದೆ. ಈಗಾಗಲೇ ಮೂಡಿಗೆರೆ ಅರಣ್ಯ ವಲಯಕ್ಕೆ 50ಲಕ್ಷ ರೂ. ರೈಲ್ವೆ ಬ್ಯಾರಿಕೇಡ್‌ ನಿರ್ಮಿಸಲು ಅನುದಾನ ಬಂದಿದೆ ಎಂದು ಆರ್‌ಎಫ್‌ಒ ಪ್ರಸಾದ್‌ ಸಭೆಗೆ ಮಾಹಿತಿ ನೀಡಿದರು.

ಬೈರಾಪುರ ಸುತ್ತಮುತ್ತ ಕಾಡಾನೆ ಹಾವಳಿಯಿಂದ ರೈತರು ಬತ್ತದ ಗದ್ದೆಯನ್ನು ಪಾಳು ಬಿಡುತ್ತಿದ್ದಾರೆ. ಇದಕ್ಕೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಬೇಕೆಂದು ಸಭೆಯಲ್ಲಿ ಒಕ್ಕೊರಲಿನಿಂದ ಒತ್ತಾಯಿಸಲಾಯಿತು.

ತಾಲೂಕಿನಲ್ಲಿ ವೈದ್ಯರ ಸಮಸ್ಯೆಯಿದೆ. ಕಳಸ ಆಸ್ಪತ್ರೆಗೆ ವೈದ್ಯರನ್ನು ನಿಯೋಜಿಸಬೇಕೆಂದು ಜಿಪಂ ಸದಸ್ಯ ಪ್ರಭಾಕರ್‌ ಪ್ರಸ್ತಾಪಿಸಿದರು. ಆಗ ಮಾತನಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಮತ್ತು ಎಂಎಲ್ಸಿ ಎಂ.ಕೆ.ಪ್ರಾಣೇಶ್‌, ಈಗಾಗಲೇ ವಾರದಲ್ಲಿ ಮೂರು ದಿನ ಕಳಸ ಆಸ್ಪತ್ರೆಗೆ ತೆರಳಲು ವೈದ್ಯ ಸುಂದರೇಶ್‌ ಅವರಿಗೆ ಸೂಚಿಸಿದೆ. ಮುಂದಿನ ಅಧಿವೇಶನದಲ್ಲಿ ಆಸ್ಪತ್ರೆಗೆ ಹೆಚ್ಚಿನ ವೈದ್ಯರನ್ನು ನೇಮಿಸಲು ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದರು.

ನಾಯಿ ಕಡಿತಕ್ಕೆ ತಾಲೂಕಿನ ಸರಕಾರಿ ಆಸ್ಪತ್ರೆಗಳಲ್ಲಿ ಸಾಕಷ್ಟು ಔಷಧ ಲಭ್ಯವಿಲ್ಲ ಎಂದು ಆರೋಗ್ಯಾಧಿಕಾರಿ ಡಾ.ಸುಂದರೇಶ್‌ ತಿಳಿಸಿದಾಗ, ರಾಜ್ಯದ ಎಲ್ಲಾ ಆಸ್ಪತ್ರೆಯಲ್ಲೂ ನಾಯಿ ಕಡಿತಕ್ಕೆ ಔಷಧ ಸಾಕಷ್ಟಿದ್ದು, ಕೊರತೆಯಿಲ್ಲ ಎಂದು ಸದನದಲ್ಲಿ ಆರೋಗ್ಯ ಸಚಿವರು ನಾನು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಚಿವರು ಸದನದಲ್ಲಿ ಉತ್ತರ ಕೊಟ್ಟ ಮೇಲೆ ಅವರು ಹೇಳುವುದು ಸುಳ್ಳೋ? ನೀವು ಹೇಳುವುದು ಸುಳ್ಳೋ? ನೀವು ನಮಗೆ ಲಿಖೀತವಾಗಿ ಬರೆದುಕೊಡಿ ಎಂದು ಎಂಎಲ್ಸಿ ಪ್ರಾಣೇಶ್‌ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಕೂಲಿ ಕಾರ್ಮಿಕರನ್ನು ತೆರೆದ ವಾಹನದಲ್ಲಿ ಕರೆದೊಯ್ದರೆ ಅಂತಹ ವಾಹನವನ್ನು ವಶಕ್ಕೆ ಪಡೆಯುತ್ತಿದ್ದೇವೆ. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಮಕ್ಕಳನ್ನು ತುಂಬಿಕೊಂಡು ಹೋಗುವ ವಾಹನಗಳು ಅಪಘಾತವಾದರೆ ವಿಮೆ ಸಿಗುವುದಿಲ್ಲ. ಹಾಗಾಗಿ, ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಪಿಎಸ್‌ಐ ಕೆ.ಟಿ.ರಮೇಶ್‌ ಮಾಹಿತಿ ನೀಡಿದರು.

ಮೂಡಿಗೆರೆ ಸಾರಿಗೆ ಘಟಕದಲ್ಲಿ 87 ಬಸ್‌ಗಳಿವೆ. ಅದರಲ್ಲಿ 30 ಹೊಸ ಬಸ್‌, 57 ಹಳೇ ಬಸ್‌ಗಳಿವೆ. 9ಲಕ್ಷ ಕಿ.ಮೀ. ಓಡಿದ ಬಳಿಕ ಸ್ಕ್ರಾಪ್ ಮಾಡಲು ಆದೇಶವಿದೆ. ಘಟಕದಲ್ಲಿ 46 ಬಸ್‌ಗಳು 9 ಲಕ್ಷ ಕಿ.ಮೀ. ಕ್ರಮಿಸಿವೆ. ಕಳೆದ ವರ್ಷ 9 ಬಸ್‌ಗಳನ್ನು ಸಾðಪ್‌ ಮಾಡಲಾಗಿದೆ. ಈ ವರ್ಷ 13 ಬಸ್‌ ಸಾðಪ್‌ ಮಾಡಲು ಆದೇಶ ಬಂದಿದೆ. ಅದರಲ್ಲಿ 5 ಬಸ್‌ ಘಟಕದಲ್ಲಿ ನಿಲ್ಲಿಸಲಾಗಿದೆ. ಘಟಕ ಆರ್ಥಿಕವಾಗಿ ಲಾಭದಲ್ಲಿದೆ ಎಂದು ಘಟಕದ ವ್ಯವಸ್ಥಾಪಕ ರವಿ ಮಾಹಿತಿ ನೀಡಿದರು. ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಗುಜರಿ ಬಸ್‌ಗಳನ್ನು ನಿಲ್ಲಿಸಬೇಕು. ಕಳಸ ಸಹಿತ ಬಹುತೇಕ ಗ್ರಾಮಗಳಿಗೆ ಸರ್ಕಾರಿ ಬಸ್‌ ಸಂಚರಿಸುತ್ತಿಲ್ಲ. ಇದರಿಂದ ಶಾಲಾ ಮಕ್ಕಳಿಗೆ ತೊಂದರೆಯಾಗಿದೆ. ಹಾಗಾಗಿ, ಕಳಸಕ್ಕೆ 2ರಿಂದ 3 ಬಸ್‌ ಬಿಡಬೇಕೆಂದು ಅಧಿಕಾರಿಗೆ ಸೂಚಿಸಿದರು.

94ಸಿ ಪ್ರಕರಣಗಳನ್ನು ಕಂದಾಯ ಇಲಾಖೆ ಯಿಂದ ಅನಗತ್ಯವಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿ ಸಲಾಗುತ್ತಿದ್ದು, ಇದ್ಕಕೆ ಕಾರಣವೇನೆಂದು ಎಂಎಲ್ಸಿ ಪ್ರಾಣೇಶ್‌ ಪ್ರಶ್ನಿಸಿದರು. ಆಗ, ತಹಶೀಲ್ದಾರ್‌ ಪದ್ಮನಾಭಶಾಸ್ತ್ರಿ ಉತ್ತರ ನೀಡಲಾಗದೇ ತಡವರಿಸಿದರು.

ತಾಲೂಕು ಕಚೇರಿಯಲ್ಲಿ ಲಂಚದ ಹಾವಳಿ ಮಿತಿ ಮೀರಿದೆ. ಲಂಚವಿಲ್ಲದೇ ಕೆಲಸವೇ ಆಗುತ್ತಿಲ್ಲ. ಅಧಿಕಾರಿ ಗಳು ಬಡವರ ಕೆಲಸ ಲವಲವಿಕೆಯಿಂದ ಮಾಡಿಕೊಡಬೇಕೆಂದು ಎಂಎಲ್ಸಿ ಪ್ರಾಣೇಶ್‌ ಹೇಳಿದರು.

ತಾಪಂ ಅಧ್ಯಕ್ಷ ಕೆ.ಸಿ.ರತನ್‌, ಉಪಾಧ್ಯಕ್ಷೆ ಸವಿತಾರಮೇಶ್‌, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್‌ ಕುಮಾರ್‌, ಜಿಪಂ ಸದಸ್ಯರಾದ ಪ್ರಭಾಕರ್‌, ಶಾಮಣ್ಣ, ಅಮಿತಾ ಮುತ್ತಪ್ಪ, ಸುಧಾ ಯೋಗೇಶ್‌, ತಹಶೀಲ್ದಾರ್‌ ಪದ್ಮನಾಭ ಶಾಸ್ತ್ರಿ, ತಾಪಂ ಇಒ ಎಂ.ವೆಂಕಟೇಶ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next