Advertisement

ಕಗ್ಗಂಟಾದ ಮೂಡಿಗೆರೆ ಪಪಂ ಅಧ್ಯಕ್ಷ ಸ್ಥಾನ

12:05 PM Jun 03, 2019 | Naveen |

ಮೂಡಿಗೆರೆ: ಇಲ್ಲಿನ ಪಟ್ಟಣ ಪಂಚಾಯತ್‌ನ ಆರು ವಾರ್ಡ್‌ಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದರೂ ಅಧ್ಯಕ್ಷ ಸ್ಥಾನ ಕೈತಪ್ಪುವ ಸಾಧ್ಯತೆ ಹೆಚ್ಚಾಗಿದೆ. ಮೀಸಲಾತಿಯಲ್ಲಿನ ಗೊಂದಲದಿಂದಾಗಿ ಯಾವ ಪಕ್ಷವೂ ಸಹ ಅಧಿಕಾರದ ಗದ್ದುಗೆ ಏರದ ಸ್ಥಿತಿ ಉಂಟಾಗಿದೆ. ಬಿಜೆಪಿಗೆ ಬಹುಮತ ವಿದ್ದರೂ 5 ಸ್ಥಾನ ಪಡೆದ ಕಾಂಗ್ರೆಸ್‌ ಸಹ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದೆ.

Advertisement

ಹನ್ನೊಂದು ವಾರ್ಡುಗಳ ಪೈಕಿ ಎಸ್‌ಸಿ (ಸಾಮಾನ್ಯ) ಪಂಗಡಕ್ಕೆ ಒಂದು ಸ್ಥಾನ ಮೀಸಲಿರಿಸಿದ್ದು ಅದರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಎಚ್.ಪಿ. ರಮೇಶ್‌ ಆಯ್ಕೆಯಾಗಿದ್ದಾರೆ. ಪಟ್ಟಣ ಪಂಚಾಯತ್‌ ಅಧ್ಯಕ್ಷ ಸ್ಥಾನವನ್ನು ಎಸ್‌ಸಿ (ಮಹಿಳೆ)ಗೆ ಮೀಸಲಿರಿಸಲಾಗಿದೆ. ಆದರೆ ಎಸ್‌ಸಿ ಮಹಿಳೆಗೆಂದು ವಾರ್ಡ್‌ನ್ನೇ ಮೀಸಲಿಟ್ಟಿಲ್ಲ. ಹೀಗಾಗಿ ಅಧ್ಯಕ್ಷ ಸ್ಥಾನದ ಸಮಸ್ಯೆ ಕಗ್ಗಂಟಾಗಿದೆ. ಬಿಜೆಪಿಗೆ ಬಹು ಮತವಿದ್ದರೂ ಅಧಿಕಾರ ಹಿಡಿಯಲು ಮೀಸಲು ಸಮಸ್ಯೆ ಅಡ್ಡಿಯಾಗಿದೆ. ಅದೇ ರೀತಿ ಕಾಂಗ್ರೆಸ್‌ ಆಸೆಗೂ ತಣ್ಣೀರೆರಚಿದಂತಾಗಿದೆ.

ಕಳೆದ ಬಾರಿ ಮೊದಲು ಎಸ್‌ಸಿ ಮಹಿಳೆಗೆ ಅಧ್ಯಕ್ಷ ಸ್ಥಾನ ದೊರಕಿತ್ತು. ದ್ವಿತೀಯಾರ್ಧದಲ್ಲಿ ಅಧ್ಯಕ್ಷ ಸ್ಥಾನ ಒಬಿಸಿ ಪಂಗಡದ ಪಾಲಾಗಿತ್ತು. ಇದು ಚುನಾವಣಾಧಿಕಾರಿಗಳ ಬೇಜವಾಬ್ದಾರಿಯಿಂದಾಗಿದ್ದು ಎಂಬ ಮಾತು ಕೇಳಿಬಂದಿತ್ತು.

ಅಧ್ಯಕ್ಷ ಸ್ಥಾನವನ್ನು ಎಸ್‌ಸಿ ಮಹಿಳೆಗೆಂದು ಮೀಸಲಿಟ್ಟ ಮೇಲೆ ಎಸ್‌ಸಿ ಮಹಿಳೆಗೆಂದು ಯಾವುದಾದರೊಂದು ವಾರ್ಡ್‌ ಮೀಸಲಿರಿಸ ಬೇಕಾಗಿತ್ತು. ಹಾಗೆ ಮಾಡದ ಕಾರಣ ಈ ಗೊಂದಲಕ್ಕೆ ಉಂಟಾಗಿದ್ದು, ಒಂದು ಪಕ್ಷ ಚುನಾಯಿತ ಪ್ರತಿನಿಧಿಗಳಲ್ಲಿ ಎಸ್‌ಸಿ ಮಹಿಳೆ ಇಲ್ಲದ ಕಾರಣ ಎಸ್‌ಸಿ ಪುರುಷರಿಗೆ ಆ ಸ್ಥಾನ ಮೀಸಲಿರಿಸಿದಲ್ಲಿ ಬಹುಮತ ಪಡೆದ ಬಿಜೆಪಿ ನ್ಯಾಯಲಯದ ಮೊರೆ ಹೋಗುವ ಸಾಧ್ಯತೆಗಳಿವೆ.

ಪುನರ್‌ಪರಿಶೀಲನೆ
ಮೀಸಲಾತಿ ಬಗ್ಗೆ ಅಪರ್‌ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲಾಗಿದೆ. ಚುನಾವಣಾ ಕಮೀಷನರ್‌ ಗಮನಕ್ಕೂ ತಂದಿದ್ದೇನೆ. ಇದನ್ನು ಪುನರ್‌ಪರಿಶೀಲಿಸಿ ಎಸ್‌ಸಿ ಮಹಿಳೆ ಬದಲು ಎಸ್‌ಸಿ ಪುರುಷರಿಗೆ ಅಥವಾ ಬೇರೆ ಪಂಗಡಗಳಿಗೆ ಸ್ಥಾನ ಮೀಸಲಿಡುವ ಸಾಧ್ಯತೆಗಳಿವೆ.
ರಾಜೀವ್‌, ತಾಲೂಕಾಡಳಿತಾಧಿಕಾರಿ
ಈ ಹಿಂದೆ ಎಂದೂ ಈ ರೀತಿ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಈಗ ಸಮಸ್ಯೆ ಎದುರಾಗಿದೆ. ಈಗ ಅಧಿಕಾರ ನಡೆಸುತ್ತಿರುವ ಸರ್ಕಾರ ಈ ಬಗ್ಗೆ ಯಾವ ರೀತಿಯ ನಿರ್ಧಾರ ಬೇಕಿದ್ದರೂ ತೆಗೆದುಕೊಳ್ಳಬಹುದು. ಆದರೆ ಸರ್ಕಾರ ಬಹಳ ಬದಲಾವಣೆ ಮಾಡುವ ಸಾಧ್ಯತೆ ಕಡಿಮೆ. ಹೆಚ್ಚೆಂದರೆ ಈಗಿನ ಮಹಿಳೆಗೆ ನೀಡಿದ ಸ್ಥಾನ ಪುರುಷರಿಗೆ ಮೀಸಲಿಡಬಹುದು.
ಮೋಟಮ್ಮ, ಮಾಜಿ ಸಚಿವೆ

ಸರ್ಕಾರಕ್ಕೆ ಮೀಸಲಾತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಅಧಿಕಾರವಿದೆ. ಆಡಳಿತಾರೂಢ ಪಕ್ಷ ಆ ಪಕ್ಷಕ್ಕೆ ಪೂರಕವಾಗಿರುವಂಥ ನಿರ್ಧಾರವನ್ನೇ ತೆಗೆದುಕೊಳ್ಳಬಹುದು ಅಥವಾ ಬಹುಮತವಿರುವ ಪಕ್ಷಕ್ಕೆ ಸ್ಥಾನ ನೀಡುವಂತೆಯೂ ನಿರ್ಧಾರ ತೆಗೆದುಕೊಳ್ಳಬಹುದು. ಅಲ್ಲದೇ ನ್ಯಾಯಾಲದ ಮೊರೆ ಹೋಗುವ ಸಾಧ್ಯತೆಯೂ ಹೆಚ್ಚಾಗಿದೆ.
ಎಂ.ಕೆ ಪ್ರಾಣೇಶ್‌,
ವಿಧಾನ ಪರಿಷತ್‌ ಸದಸ್ಯ

Advertisement
Advertisement

Udayavani is now on Telegram. Click here to join our channel and stay updated with the latest news.

Next