ಮೂಡಿಗೆರೆ: ತಾಲೂಕಿನಲ್ಲಿ ಸಂಭವಿಸಿದ ಹಿಂದೆಂದೂ ಕಂಡರಿಯದ ಭೀಕರ ಪ್ರವಾಹದಿಂದಾಗಿ ಬಹಳಷ್ಟು ಕುಟುಂಬ ಗಳು ಸಂಕಷ್ಟಕ್ಕೀಡಾಗಿವೆ. ಕೇವಲ ಅಧಿಕಾರಿಗಳಿಂದ ಅವರ ಸಮಸ್ಯೆ ನಿವಾರಿಸಲು ಸಾಧ್ಯವಾಗುತ್ತಿರಲಿಲ್ಲ. ಜನರ ನಿಸ್ವಾರ್ಥ ಸೇವೆಯಿಂದಾಗಿ ತಾತ್ಕಾಲಿಕ ಪರಿಹಾರ ಸಿಕ್ಕಂತಾಗಿದೆ. ಹಾಗಾಗಿ, ಸಾರ್ವಜನಿಕರಿಂದ ಇನ್ನೂ ಹೆಚ್ಚಿನ ಸೇವೆ ಅಗತ್ಯವಾಗಿದೆ ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಗುರುವಾರ ಪಟ್ಟಣದ ಹೊಯ್ಸಳ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಏರ್ಪಡಿಸಿದ್ದ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ಬಹಳ ಅದ್ದೂರಿ ಯಾಗಿ ಮಾಡಲು ಸಿದ್ಧತೆ ಕೈಗೊಳ್ಳಲಾಗಿತ್ತು. ಆದರೆ, ಪ್ರವಾಹದ ಭೀಕರತೆಯಿಂದಾಗಿ ಸರಳವಾಗಿ ಆಚರಿಸಲಾಗುತ್ತಿದೆ ಎಂದರು.
ತಾಲೂಕಿನಲ್ಲಿ 500 ನಿರಾಶ್ರಿತರ ಕುಟುಂಬಗಳಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡಲು ಜಾಗ ಗುರುತಿಸುವ ಬಗ್ಗೆ ಸಿದ್ಧತೆ ನಡೆಯುತ್ತಿದೆ. 100 ಕೋಟಿ ರೂ. ಅನುದಾನ ತಂದು ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಲ್ಲಿನ ಪರಿಸ್ಥಿತಿಯನ್ನು ವೀಕ್ಷಿಸಲು ಆಗಮಿಸಬೇಕೆಂದು ಮನವಿ ಮಾಡಿಕೊಂಡಿದ್ದು, ಸಧ್ಯದಲ್ಲಿಯೇ ಆಗಮಿಸಲಿದ್ದಾರೆ. ಅವರು ಬಂದ ಬಳಿಕ ವಿಶೇಷ ಅನುದಾನ ತಂದು ಎಲ್ಲಾ ಅಭಿವೃದ್ಧಿ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಮಾತನಾಡಿ, ವರುಣನ ಅಬ್ಬರದಿಂದ ಜೀವ ಹಾನಿ ಜತೆಗೆ ಅಪಾರ ಸಂಖ್ಯೆಯ ಜನರು ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ರಾಜ್ಯದ ನಾನಾ ಕಡೆಗಳಿಂದ ಸಾಕಷ್ಟು ದಾನಿಗಳು ನಿರಾಶ್ರಿತರಿಗೆ ಸಹಾಯ ಮಾಡುತ್ತಿದ್ದಾರೆ. ಇದು ತಾತ್ಕಾಲಿಕ ವ್ಯವಸ್ಥೆ ಮಾತ್ರ. ಶಾಶ್ವತ ಪರಿಹಾರದ ಅಗತ್ಯವಿದೆ. ಪ್ರವಾಹದ ಹೊಡೆತಕ್ಕೆ ಸಿಲುಕಿದ ಸಂತ್ರಸ್ತರು ಸಹನೆ ಕಳೆದುಕೊಂಡು ಮಾತನಾಡುತ್ತಾರೆ. ಅಧಿಕಾರಿಗಳು ಪ್ರೀತಿ- ವಿಶ್ವಾಸದಿಂದ ಬೆರೆತು ಜನರ ಕಷ್ಟಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದರು.
ತಹಶೀಲ್ದಾರ್ ಎಚ್.ಎಂ.ರಮೇಶ್ ಧ್ವಜಾರೋಹಣ ನೆರವೇರಿಸಿದರು. ತಾಪಂ ಅಧ್ಯಕ್ಷ ಕೆ.ಸಿ.ರತನ್, ಸ್ಥಾಯಿ ಸಮಿತಿ ಅಧ್ಯಕ್ಷ ದೇವ ರಾಜು, ಸದಸ್ಯರಾದ ಭಾರತೀ ರವೀಂದ್ರ, ವೀಣಾ ಉಮೇಶ್, ಪಪಂ ಸದಸ್ಯರಾದ ಕಮಲಾಕ್ಷಿ, ಸುಧೀರ್, ಮನೋಜ್ ಕುಮಾರ್, ಖುರ್ಷಿದ್ ಬಾನು, ಎಂ.ಎ.ಹಂಝಾ, ಆಶಾಮೋಹನ್, ಜೇನು ಸಹಕಾರ ಸಂಘದ ಅಧ್ಯಕ್ಷ ದುಂಡುಗ ಪ್ರಮೋದ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಇದ್ದರು.