ಮುಧೋಳ: ಈ ಬಾರಿ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಒಳ್ಳೆಯ ದರ ಸಿಗುತ್ತದೆ. ಹೊಲದಲ್ಲಿ ಬೆಳೆಯಿಂದ ನಮ್ಮ ಕಷ್ಟ ಪರಿಹಾರವಾಗುವುದೆಂದು ನಂಬಿದ್ದ ರೈತರ ನಂಬಿಕೆಗೆ ಚಿತ್ತಿ ಮಳೆ ಬರೆ ಎಳೆದು ಚಿಂತೆಗೀಡು ಮಾಡಿದೆ.
ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಜಮೀನುಗಳಲ್ಲಿ ಹುಲುಸಾಗಿ ಬೆಳೆ ಬಂದರೂ ಕಟಾವು ಅವಧಿಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ.
ದರ ಸಮರದೊಂದಿಗೆ ಚೆಲ್ಲಾಟವಾಡುವ ಈರುಳ್ಳಿ ಬೆಳೆ ಗ್ರಾಮೀಣ ಪ್ರದೇಶದಲ್ಲಿ ಲಾಟರಿ ಬೆಳೆಯೆಂದೆ ಹೆಸರಾಗಿದೆ. ಆದರೆ ಈ ವರ್ಷದ ಕಟಾವು ಆರಂಭದಿಂದಲೂ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ದರವಿದೆ. ಆದರೆ ಕಟಾವಿನ ಮಧ್ಯಮ ಅವಧಿಯಲ್ಲಿ ಧಾರಾಕಾರವಾಗಿ ಸುರಿದ ಮಳೆಯಿಂದ ರೈತರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.
ಜಮೀನುಗಳಲ್ಲಿ ಮೊಣಕಾಲುದ್ದ ನೀರು: ಅ.15ರ ಮಂಗಳವಾರ ರಾತ್ರಿ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದ ತಾಲೂಕಿನ ಜಮೀನುಗಳಲ್ಲಿ ಮೊಣಕಾಲುದ್ದದ ನೀರು ಆವರಿಸಿಕೊಂಡಿದೆ. ನೀರಿನ ಮಧ್ಯದಲ್ಲಿರುವ ಈರುಳ್ಳಿ ಬೆಳೆ ತೇವಾಂಶ ಹೆಚ್ಚಿ ಬೇರು ಬಿಡಲು ಶುರವಾದರೆ ರೈತರಿಗೆ ಹೆಚ್ಚಿನ ನಷ್ಟವುಂಟಾಗುತ್ತದೆ. ಹಸಿಯಾದ ನೆಲ ಒಣಗಿ ಮರಳಿ ಜಮೀನುಗಳಲ್ಲಿ ಕೃಷಿ ಕೆಲಸ ನಡೆಸಬೇಕಾದರೆ ಕನಿಷ್ಠ 8-10 ದಿನಗಳಾದರೂ ಬೇಕು. ಅಲ್ಲಿಯವರೆಗೆ ಈರುಳ್ಳಿ ಬೆಳೆ ತನ್ನ ಶಕ್ತಿಯನ್ನು ಉಳಿಸಿಕೊಳ್ಳುತ್ತದೆ ಎಂಬುದು ನಂಬಲಸಾಧ್ಯದವಾದ ಮಾತು ಎನ್ನುತ್ತಾರೆ ರೈತರು.
ಕಟಾವು ಮಾಡಿದ ಈರುಳ್ಳಿ ಸ್ಥಿತಿ ಚಿಂತಾಜನಕ: ಕಟಾವು ಮಾಡದೆ ಜಮೀನಿನಲ್ಲಿರುವ ಈರುಳ್ಳಿಯದ್ದು ಒಂದು ಕಥೆಯಾದರೆ ಈರುಳ್ಳಿಯನ್ನು ಕಿತ್ತು ಜಮೀನಿನಲ್ಲಿ ಸಂಗ್ರಹಿಸಿರುವ ರೈತರದ್ದು ಮತ್ತೊಂದು ತರಹದ ಗೋಳಾಗಿದೆ. ಈರುಳ್ಳಿ ಸೊಪ್ಪು ಬೇರ್ಪಡಿಸಿ ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗದೆ ರೈತರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ತೇವಾಂಶದಿಂದಾಗಿ ಜಮೀನಿನಲ್ಲಿ ನಡೆದಾಡಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂ. ಬೆಲೆ ಬಾಳುವ ಬೆಳೆ ಕಣ್ಣೆದುರೆ ಹಾಳಾಗುತ್ತಿರುವುದು ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತಿದೆ. ಕಟಾವು ಮಾಡಿರುವ ಈರುಳ್ಳಿಯನ್ನು ಮಾರುಕಟ್ಟೆಗೆ ತಲುಪಿಸುವ ಕೆಲಸಕ್ಕೆ ಕನಿಷ್ಠ 8 ದಿನಗಳಾದರೂ ಬೇಕು. ಆದರೆ ಆ ವೇಳೆಯಲ್ಲಿ ದರದಲ್ಲಿ ಯಾವ ರೀತಿಯ ವ್ಯತ್ಯಾಸ ಉಂಟಾಗುತ್ತದೆ ಎಂಬುದು ರೈತರನ್ನು ಚಿಂತೆಗೀಡಾಗುವಂತೆ ಮಾಡಿದೆ.
ಮಾರುಕಟ್ಟೆಯಲ್ಲಿ ಉತ್ತಮ ದರ: ಸದ್ಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ಉತ್ತಮ ದರವಿದೆ. ಕನಿಷ್ಠ 4000 ದಿಂದ ಆರಂಭವಾಗುವ ಬೆಲೆ ಈರುಳ್ಳಿ ಗಾತ್ರ ಹಾಗೂ ಆಕಾರಕ್ಕೆ ತಕ್ಕಂತೆ ಹೆಚ್ಚಾಗುತ್ತದೆ. ಮುಧೋಳ ತಾಲೂಕಿನ ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆದಿರುವ ರೈತರು ಬೆಳಗಾವಿ, ಮಹಾರಾಷ್ಟ್ರದ ಸೋಲಾಪುರ ಹಾಗೂ ತೆಲಂಗಾಣದ ಹೈದರಾಬಾದ್ ನಲ್ಲಿ ಈರುಳ್ಳಿ ವ್ಯವಹಾರ ನಡೆಸುವುದು ವಾಡಿಕೆ. ಆದರೆ ಈ ಬಾರಿ ಮಳೆಯಿಂದಾಗಿ ರೈತರಿಗೆ ಅನಿರೀಕ್ಷಿತ ಹಾನಿಯುಂಟಾಗಿದೆ.
ವೆಚ್ಚದಲ್ಲಿ ಹೆಚ್ಚಳ: ಈರುಳ್ಳಿ ಬೆಳೆಗೆ ರೈತರು ವ್ಯಯಿಸಿದ ಖರ್ಚಿನಲ್ಲಿಯೂ ಹೆಚ್ಚಳವುಂಟಾಗುತ್ತಿದೆ. ಮಳೆಗೆ ನೆನೆದಿರುವ ಈರುಳ್ಳಿ ಒಣಗಿಸಲು ಹಾಗೂ ವಿಶೇಷವಾಗಿ ಆರೈಕೆ ಮಾಡಲು ಹೆಚ್ಚಿನ ಆಳುಗಳ ಸಹಾಯ ಬೇಕು. ಇದರಿಂದ ಕೃಷಿ ಕೂಲಿ ಕಾರ್ಮಿಕರಿಗೆ ಹೆಚ್ಚುವರಿ ವೇತನ ನೀಡುವುದರಿಂದ ರೈತರಿಗೆ ವೃತ್ತಿ ಖರ್ಚು ಹೆಚ್ಚಳವಾಗುವುದಂತು ನಿಜ.
ಮೆಕ್ಕೆಜೋಳಕ್ಕೂ ಕುತ್ತು: ಈರುಳ್ಳಿಯೊಂದಿಗೆ ಮೆಕ್ಕೆ ಜೋಳ ಬೆಳೆದ ರೈತರಿಗೂ ಮಳೆ ಆತಂಕ ತಂದೊಡ್ಡಿದೆ. ಮೆಕ್ಕೆ ಜೋಳ ಕಟಾವು ಮಾಡಿ ಜಮೀನುಗಳಲ್ಲಿ ತೆನೆಗಳನ್ನು ಬಿಟ್ಟಿದ್ದರೆ ಅವುಗಳು ಮೊಳಕೆಯೊಡೆದು ಹಾನಿಯುಂಟು ಮಾಡುತ್ತವೆ. ದನ-ಕರುಗಳಿಗೆ ಬೇಸಿಗೆಯಲ್ಲಿ ಆಸರೆಯಾಗುವ ಮೆಕ್ಕೆಜೋಳದ ದಂಟು ಮಳೆಗೆ ಸಿಕ್ಕು ಹಾಳಾಗಿದ್ದು ಬೇಸಿಗೆಯಲ್ಲಿ ದನಕರುಗಳ ಮೇವಿಗೆ ಅನಾನುಕೂಲತೆ ಉಂಟಾಗುವ ಸಂಭವ ಹೆಚ್ಚಾಗಿದೆ.
ಏಕಾಏಕಿಯಾಗಿ ಧಾರಕಾರವಾಗಿ ಸುರಿದ ಮಳೆಯಿಂದ ಈರುಳ್ಳಿ ಬೆಳೆಯೆಲ್ಲಾ ನಾಶವಾಗುವ ಹಂತ ತಲುಪಿದೆ. ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದಾಗ ಸುರಿದ ಮಳೆಯಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. –
ಬಸವರಾಜ ಪಾಟೀಲ ರೈತರು
-ಗೋವಿಂದಪ್ಪ ತಳವಾರ ಮುಧೋಳ