Advertisement
ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ನಗರದಲ್ಲಿ ಅಂದಾಜು 15 ಕೋಟಿ ರೂ. ವೆಚ್ಚದಲ್ಲಿ ನೂತನ ತಾಲೂಕು ಆಡಳಿತ ಭವನ ನಿರ್ಮಾಣಗೊಂಡಿದೆ. ಆದರೆ ಆಡಳಿತ ಯಂತ್ರದ ಆಮೆ ನಡಿಗೆ ಕಾರ್ಯ ವೈಖರಿಯಿಂದ ಅನೇಕ ಹಲವಾರು ಇಲಾಖೆಗಳಿಗೆ ಬಾಡಿಗೆ ಹೊರೆ ಮುಂದುವರಿದಿದೆ.
ಕಚೇರಿಗಳು ಬಾಡಿಗೆ ಮನೆಗಳಲ್ಲಿ ಅಥವಾ ಕಾಂಪ್ಲೆಕ್ಸ್ ಗಳನ್ನು ಆಶ್ರಯಿಸುವ ಪರಿಸ್ಥಿತಿ ಮನೆ ಮಾಡಿದೆ. ಸಿಡಿಪಿಒ ಕಚೇರಿ: ಪ್ರಮುಖ ಇಲಾಖೆಗಳಲ್ಲೊಂದಾದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಕಚೇರಿ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲೇ ಕಾರ್ಯ ನಿರ್ವಹಿಸುತ್ತಿದೆ. ಮೊದಲು ತಾಪಂ ಕಚೇರಿ ಆವರಣದಲ್ಲಿ ಚಿಕ್ಕದೊಂದು ರೂಮಿನಲ್ಲಿದ್ದ ಈ ಕಚೇರಿಯನ್ನು ಕೆಲ ವರ್ಷಗಳ ಹಿಂದೆ ಜಮಖಂಡಿ ರಸ್ತೆಯಲ್ಲಿರುವ ಖಾಸಗಿ ಕಟ್ಟಡಕ್ಕೆ ಶಿಫ್ಟ್ ಮಾಡಲಾಯಿತು. ತಿಂಗಳಿಗೆ 30 ಸಾವಿರಕ್ಕೂ ಅಧಿಕ ಬಾಡಿಗೆಯಂತೆ ಅಲ್ಲಿ ಕಾರ್ಯ ರ್ನಿವಹಿಸುತ್ತಿರುವ ಇಲಾಖೆ ಅಧಿಕಾರಿಗಳು ನೂತನ ಆಡಳಿತ ಭವನ ಯಾವಾಗ ಕಾರ್ಯಾರಂಭ ಮಾಡುತ್ತದೆ ಎಂದು ಕಾಯುತ್ತಿದ್ದಾರೆ.
Related Articles
ಹತ್ತಿರದಲ್ಲಿನ ಖಾಸಗಿ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆ ತಿಂಗಳಿಗೆ 15ರಿಂದ 20 ಸಾವಿರ ಬಾಡಿಗೆ ನೀಡುತ್ತಿರುವುದರಿಂದ ಸಾರ್ವಜನಿಕರ ತೆರಿಗೆ ಹಣ ಅನವಶ್ಯಕವಾಗಿ ವ್ಯರ್ಥವಾಗುತ್ತಿದೆ.
Advertisement
ತಾಲೂಕು ಆಡಳಿತ ನೂತನ ಭವನ ಶೀಘ್ರವೇ ಕಾರ್ಯಾರಂಭ ಮಾಡಿದರೆ ಇಲಾಖೆಯಿಂದ ಪೋಲಾಗುತ್ತಿರುವ ಹಣ ಉಳಿಸಬಹುದು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಗಳು. ಕಾರ್ಮಿಕ ಇಲಾಖೆ: ನಗರದ ಶಿವಾಜಿ ವೃತ್ತದ ಬಳಿ ಸಣ್ಣದೊಂದು ಕೊಠಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕ ಇಲಾಖೆ ತಿಂಗಳಿಗೆ 1600 ಬಾಡಿಗೆ ಪಾವತಿಸುತ್ತಿದೆ.ಅದೆಷ್ಟೋ ಜನರಿಗೆ ಇದೂವರೆಗೆ ಕಾರ್ಮಿಕ ಇಲಾಖೆ ಕಚೇರಿ ವಿಳಾಸವೇ ತಿಳಿದಿಲ್ಲ. ಸಣ್ಣ ಕೊಠಡಿಯಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಯೂ ಸಹ ನೂತನ ಆಡಳಿತ ಭವನದಲ್ಲಿ ಕಾರ್ಯಾರಂಭದ ದಿನ ಎದುರು ನೋಡುತ್ತಿದೆ. ಇಕ್ಕಟ್ಟಾದ ಸ್ಥಳದಲ್ಲಿ ಕಾರ್ಯ ನಿರ್ವಹಣೆ: ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇಲಾಖೆಗಳ ಕಥೆ ಒಂದೆಡೆಯಾದರೆ ಹಲವಾರು ಇಲಾಖೆಗಳು ಸ್ವಂತ ಕಟ್ಟಡವಿದ್ದರೂ ಸಹ ಇಕ್ಕಟ್ಟಿನ ಜಾಗದಿಂದ ಕಾರ್ಯ ನಿರ್ವಹಣೆ ತೊಂದರೆಯುಂಟಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಖ್ಯವಾಗಿ ಉಪನೋಂದಣಾಧಿಕಾರಿಗಳ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಚೇರಿ, ಕೈಗಾರಿಕೆ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳ ಕಚೇರಿಗಳು ಇಕ್ಕಟ್ಟಾದ ಜಾಗದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆಡಳಿತ ಭವನ ಶೀಘ್ರ ಕಾರ್ಯಾರಂಭ ಮಾಡಿದರೆ ಎಲ್ಲ ಕಚೇರಿಗಳು ಅಲ್ಲಿಗೆ ಸ್ಥಳಾಂತರಗೊಳ್ಳುವುದರಿಂದ ಅಧಿಕಾರಿಗಳ ಕಾರ್ಯಕ್ಕೂ ಅನುಕೂಲ ಹಾಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ ಎಂಬುದು ಪ್ರಜ್ಞಾವಂತರ ಅಭಿಪ್ರಾಯ.
ಒಟ್ಟಿನಲ್ಲಿ ಇದ್ದೂ ಇಲ್ಲದಂತಾಗಿರುವ ನೂತನ ಆಡಳಿತ ಭವನದಿಂದ ಹಲವಾರು ಇಲಾಖೆಗಳ ಸಾವಿರಾರು ರೂಪಾಯಿ ಬಾಡಿಗೆ ಹಣ ಪೋಲಾಗುತ್ತಿರುವುದಂತೂ ಸತ್ಯ. ಸಣ್ಣಪುಟ್ಟ ಕಾಮಗಾರಿ ಬಾಕಿ ಉಳಿಸಿಕೊಂಡು ಉದ್ಘಾಟನೆಯಾಗಿ ನಿಂತಿರುವ
ಕಟ್ಟಡದಲ್ಲಿ ಯಾವಾಗ ಕಾರ್ಯಾರಂಭವಾಗುತ್ತದೆ ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಉದ್ಘಾಟನೆಗೊಂಡು ಹಲವು ತಿಂಗಳು ಕಳೆದರೂ ಕಟ್ಟಡದಲ್ಲಿ ಇಲಾಖೆಗಳು ಕಾರ್ಯಾರಂಭ ಮಾಡಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದಷ್ಟು ಬೇಗ ಕಟ್ಟಡದಲ್ಲಿ ಕಾರ್ಯಾರಂಭ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಿಕೊಡಬೇಕು.
ಚಂದು ಅಮ್ಮಿನಭಾವಿ, ಸಾರ್ವಜನಿಕರು ತಾಲೂಕು ಆಡಳಿತ ನೂತನ ಕಟ್ಟಡ ಲೋಕೋಪಯೋಗಿ ಇಲಾಖೆಯಿಂದ ಇನ್ನು ನಮ್ಮ ಸುಪರ್ದಿಗೆ ಬಂದಿಲ್ಲ. ಅವರು
ಅಧಿಕೃತವಾಗಿ ನಮಗೆ ವರ್ಗಾಯಿಸಿದ ಮೇಲೆ ಇಲಾಖೆಗಳಿಗೆ ಕೊಠಡಿಗಳನ್ನು ಹಂಚಿಕೆ ಮಾಡಲಾಗುವುದು.
ವಿನೋದ ಹತ್ತಳ್ಳಿ, ತಹಶೀಲ್ದಾರ್, ಮುಧೋಳ *ಗೋವಿಂದಪ್ಪ ತಳವಾರ