ಮುಧೋಳ : ಘಟಪ್ರಭಾ ಪ್ರವಾಹದಲ್ಲಿ ಮನೆಮಠ ಕಳೆದುಕೊಂಡು ಸಂತ್ರಸ್ತರು ಶಾಶ್ವತ ಸೂರು ಹಾಗೂ ಸೂಕ್ತ ಪರಿಹಾರಕ್ಕಾಗಿ ಒತ್ತಾಯಿಸಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತಸಂಘ, ಕಬ್ಬು ಬೆಳೆಗಾರರ ಒಕ್ಕೂಟ ಹಾಗೂ ನೆರೆ ಸಂತ್ರಸ್ಥರ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ವಿವಿಧ ಸಂಘಟನೆಗಳು ಕೈಜೋಡಿಸಿದ್ದವು.
ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಎತ್ತಿನ ಚಕ್ಕಡಿ ಹಾಗೂ ಟ್ರ್ಯಾಕ್ಟರ್ ಸಮೇತ ಪ್ರತಿಭಟನಾ ಮೆರವಣಿಗೆ ಹೊರಟ ರೈತರು ರಾಣಾ ಪ್ರತಾಪ ಸಿಂಗ್ ವೃತ್ತದಲ್ಲಿ ಜಮಖಂಡಿ ಧಾರವಾಡ ರಾಜ್ಯ ಹೆದ್ದಾರಿ ಸಂಚಾರ ತಡೆದು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಹಾಗೂ ತಾಲೂಕಿನಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿರುವ ಬ್ಯಾರೇಜ್ ಗಳಿಂದ ಘಟಪ್ರಭಾ ನದಿಯ ನೀರು ಹೊಲಗದ್ದೆಗಳಿಗೆ ನುಗ್ಗಿ ಬೆಳೆಹಾನಿಯಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಬೆಳೆಹಾನಿಯಾದರೆ ಸರ್ಕಾರ ಮಾತ್ರ ಪರಿಹಾರ ನೀಡದೆ ರೈತರ ಹೊಟ್ಟೆಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾಹದಿಂದ ಹಾನಿಯಾಗಿರುವ ಬೆಳೆಗೆ ಸೂಕ್ತ ಪರಿಹಾರ ಒದಗಿಸಬೇಕು. ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ 5ಲಕ್ಷ ಪರಿಹಾರ ನೀಡಬೇಕು ಎಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ಉಪವಿಭಾಗಾಧಿಕಾರಿ ಮಾತಿಗೂ ಜಗ್ಗದ ಪ್ರತಿಭಟನಾಕಾರರು:
ಪ್ರತಿಭಟನೆ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಸಂತ್ರಸ್ತರ ಸಮಸ್ಯೆ ಆಲಿಸಿ ಮನವೊಲಿಕೆಗೆ ಮುಂದಾದರು. ಎಸಿ ಮಾತಿಗೆ ಕ್ಯಾರೆ ಎನ್ನದ ಪ್ರತಿಭಟನಾಕಾರರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಸುರಿವ ಮಳೆಯಲ್ಲೂ ಜೋರು ಪ್ರತಿಭಟನೆ : ಮಧ್ಯಾಹ್ನ 12ರಿಂದ ಆರಂಭಗೊಂಡ ಪ್ರತಿಭಟನೆ ಸಂಜೆವರೆಗೂ ನಿಲ್ಲಲಿಲ್ಲ. ನಾಲ್ಕು ಗಂಟೆ ಸುಮಾರಿಗೆ ಸುರಿದ ಜೋರು ಮಳೆಯಲ್ಲಿಯೂ ರೈತರು ಪ್ರತಿಭಟನಾ ಸ್ಥಳ ಬಿಟ್ಟು ಕದಲಲಿಲ್ಲ.